ಶಿರಾ ತಾ. ಮದಲೂರು ಕೆರೆಗೆ ಹೇಮಾವತಿ ಹರಿಸಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

ಶಿರಾ

       ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿಯ ನೀರನ್ನು ಹರಿಸುವಂತೆ ಒತ್ತಾಯಿಸಿ ತಾ.ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

        ನಗರದ ಪ್ರವಾಸಿ ಮಂದಿರದ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿದರು.

         ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿ ತಲುಪಿದ ಪ್ರತಿಭಟನಾಕಾರರು, ಕಚೇರಿಯ ಮುಂದೆ ಕೂತು ಪ್ರತಿಭಟನೆಯನ್ನು ನಡೆಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ಮದಲೂರು ಕೆರೆಯ ಹೆಸರಲ್ಲಿ ಈ ಕ್ಷೇತ್ರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆಯೇ ಹೊರತು, ನೀರು ಹರಿಸಲಾಗಿಲ್ಲ. ಬರಗಾಲದ ಬವಣೆಯಲ್ಲಿ ರೈತರು ಬೆಂದು ಹೋಗಿದ್ದಾರೆ. ಸರ್ಕಾರ ನಿಗದಿಪಡಿಸಿದಷ್ಟು ನೀರನ್ನು ನೀಡಿಲ್ಲ ಎಂದು ಆರೋಪಿಸಿದರು.

        ಗೊರೂರು ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರಿದೆ. ಶಿರಾ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುವ ಇಚ್ಚಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಈ ಭಾಗದಲ್ಲಿನ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲೇಬೇಕು ಎಂದು ಒತ್ತಾಯಿಸಿದರು.

         ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ತಾ. ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಕಾರ್ಯದರ್ಶಿ ನಾದೂರು ಕೆಂಚಪ್ಪ, ಸಿಎಂ.ಜಿ. ಫೌಂಡೇಶನ್ ಅಧ್ಯಕ್ಷ ಚಿದಾನಂದ್ ಎಂ.ಗೌಡ, ಆರ್.ವಿ.ಪುಟ್ಟಕಾಮಣ್ಣ, ನಿವೃತ್ತ ಎಂಜಿನಿಯರ್ ಜೈರಾಮಯ್ಯ, ರಾಜ್ಯ ಪ್ರ. ಕಾರ್ಯದರ್ಶಿ ಬದಗಲಪುರ ನಾಗೇಂದ್ರ, ಪ್ರಗತಿಪರ ರೈತ ಕೃಷ್ಣೇಗೌಡ, ರೈತ ಮುಖಂಡರಾದ ಜಗದೀಶ್, ಈರಗ್ಯಾತಪ್ಪ, ಕರವೇ ತಾ.ಘಟಕದ ಅಧ್ಯಕ್ಷ ಕಿಶೋರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

        ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘ ಸೇರಿದಂತೆ ತಾಲ್ಲೂಕಿನ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಮದಲೂರು ಕೆರೆ ಹಾಗೂ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link