ಹೂವಿನಹಡಗಲಿ:
ಸಲ್ಲದ ವಿಚಾರಗಳಿಗೆ ಸಮಾಜದಲ್ಲಿ ಸಂಘರ್ಷಗಳು ಏರ್ಪಡುತ್ತಿರುವುದು ನೋವಿನ ಸಂಗತಿ. ಶಾಂತಿ, ಸೌಹಾರ್ದತೆ ಬೆಳೆಸುವುದು ನಮ್ಮ ಪೀಠದ ಧ್ಯೇಯವಾಗಿದ್ದು, ಸಂಘರ್ಷ ಬಿಟ್ಟು ಸಾಮರಸ್ಯ ಗಟ್ಟಿಗೊಳಿಸಲು ಎಲ್ಲರೂ ಪಣ ತೊಡಬೇಕು’ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಂಭಾಪುರಿ ಶ್ರೀಗಳ 27ನೇ ವರ್ಷದ ವರ್ಧಂತಿ ಮಹೋತ್ಸವ, ಸಿದ್ಧವೀರ ಸ್ವಾಮೀಜಿ ಹಾಗೂ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಾಚೀನ ವೀರಶೈವ ಧರ್ಮವು ಸಲಕರಿಗೂ ಲೇಸನ್ನೇ ಬಯಸಿ ವಿಶ್ವ ಭ್ರಾತೃತ್ವ ಸಾರಿದೆ. 12ನೇ ಶತಮಾನದ ಬಸವಾದಿ ಶರಣರು ಪವಿತ್ರ ವೀರಶೈವ ಧರ್ಮ ಸ್ವೀಕರಿಸಿ ಪಾವನರಾಗಿದ್ದಾರೆ. ಜಾತಿಗಿಂತ ನೀತಿ, ಬೋಧನೆಗಿಂತ ಸಾಧನೆ, ಮಾತಿಗಿಂತ ಕೃತಿ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ದದೆಂದು ವೀರಶೈವ ಧರ್ಮ ಸಾರಿದೆ. ಪ್ರತಿಯೊಬ್ಬರು ಬದುಕಿನಲ್ಲಿ ಧರ್ಮದ ಆಚಾರ, ವಿಚಾರಗಳನ್ನು ಅಳವಡಿಸಿಕೊಂಡು ಮುಕ್ತಿ ಪಡೆಯಬೇಕು ಎಂದು ತಿಳಿಸಿದರು.
ಮೂಲಿಗದ್ದೆಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ವಿದೇಶಿಯರು ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಬೆಳೆಸಿಕೊಂಡು ಸನ್ಮಾರ್ಗಿಗಳಾಗುತ್ತಿದ್ದಾರೆ. ಆದರೆ, ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮೂಲ ಸಂಸ್ಕೃತಿ, ಪರಂಪರೆಯನ್ನು ಯಾರೂ ನಿರ್ಲಕ್ಷಿಸಬಾರದು ಎಂದು ಹೇಳಿದರು.
ರಂಭಾಪುರಿ ಶ್ರೀಗಳ 27ನೇ ವರ್ಧಂತಿ ಮಹೋತ್ಸವ ನಿಮಿತ್ತ ಭಕ್ತರು ಗುರುವಂದನೆ ಸಲ್ಲಿಸಿದರು. ಇಳಕಲ್‍ನ ಖ್ಯಾತ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ್ ಅವರಿಗೆ ಶ್ರೀ ಪಟ್ಟದ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಪುರದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಸ್ವಾಮೀಜಿ, ಕಲಿಕೇರಿಯ ಮುದುಕೇಶ್ವರ ಸ್ವಾಮೀಜಿ, ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋ ಜಾತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಕೆ.ರಾಘವೇಂದ್ರ ರಾವ್, ತಾ.ಪಂ. ಇ.ಒ. ಯು.ಎಚ್.ಸೋಮಶೇಖರ, ತಾ.ಪಂ. ಸದಸ್ಯೆ ಲಲಿತಾ ವೀರಣ್ಣನಾಯ್ಕ, ನಿವೃತ್ತ ಪ್ರಾಧ್ಯಾಪಕ ಆರ್.ಎಲ್.ಪೊಲೀಸ್ ಪಾಟೀಲ್, ಮುಖಂಡ ಬಿ.ಹನುಮಂತಪ್ಪ, ಸೇವಾ ಸಮಿತಿಯ ಶಾಂತಮೂರ್ತಿ ಕುಲಕರ್ಣಿ, ಗೌರೀಶ ಅಂಗಡಿ, ಪ್ರಭು ಸೊಪ್ಪಿನ, ಸುಧಾಕರ ಇದ್ದರು. ಇದೇ ಸಂದರ್ಭದಲ್ಲಿ 15 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು.