ಹಾನಗಲ್ಲ :
ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅಭಿಮಾನದಿಂದ ಆಚರಿಸುವ ಮೂಲಕ ಕನ್ನಡತನವನ್ನು ಜಾಗೃತಗೊಳಿಸಲು ಮುಂದಾಗೋಣ ಎಂದು ಹಾನಗಲ್ಲ ತಹಶಿಲ್ದಾರ ಸಿ.ಎಸ್.ಭಂಗಿ ಕರೆ ನೀಡಿದರು.
ಬುಧವಾರ ಹಾನಗಲ್ಲಿನ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಆಯೋಜಿಸಿದ ಕನ್ನಡ ಪರ ಸಂಘಟನೆಗಳು, ವಿವಿಧ ಅಧಿಕಾರಿಗಳನ್ನೊಳಗೊಂಡ ಸಭೆಯ ಅಧ್ಯಕ್ಷತೆಯಿಂದ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವನ್ನು ಕೇವಲ ಸರಕಾರಿ ಕಾರ್ಯಕ್ರಮವಾಗಿ ಆಯೋಜಿಸುವಂತಾಗುವುದು ಬೇಡ.
ಸಾರ್ವಜಿನಕರ ಪಾಲ್ಗೊಳ್ಳುವಿಕೆ ಬಹು ಮುಖ್ಯ. ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರನ್ನು ನೆನೆಯುವುದು ಹಾಗೂ ಗೌರವಿಸುವುದು ಕೂಡ ಈ ಸಂದರ್ಭದಲ್ಲಿ ಅತ್ಯವಶ್ಯ. ತಾಲೂಕು ಕೇಂದ್ರದಲ್ಲಿ ಮಾತ್ರ ಸರಕಾರಿ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಬಹುತೇಕ ಸರಕಾರಿ ಕಛೇರಿಗಳ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಆಗುತ್ತಿಲ್ಲ ಎಂಬ ದೂರುಗಳಿವೆ.
ಈ ಬಾರಿ ಎಲ್ಲ ಗ್ರಾಮ ಪಂಚಾಯಿತಿಗಳು ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕಛೇರಿಗಳು ಕೂಡ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದು ಸೂಚಿಸಿದರು,
ಕನ್ನಡ ರಾಜ್ಯೋತ್ಸವ ಹಾಗೂ ಮಹಾತ್ಮರ ಜಯಂತಿಯ ಹೆಸರಿನಲ್ಲಿ ಕೆಲವರು ಸಾರ್ವಜನಿಕರಿಂದ ಹಾಗೂ ಸರಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವ ದೂರುಗಳು ಬಂದಿವೆ. ಒತ್ತಾಯಪೂರ್ವಕವಾಗಿ ಹಾಗೂ ಅನಗತ್ಯವಾಗಿ ಈ ರೀತಿಯ ಹಣ ವಸೂಲಿ ಕಾನೂನು ಬಾಹಿರ.
ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರುಇ,ಸಭೆಯಲ್ಲಿ ಸಾಹಿತಿ ಕಲಾವಿದರನ್ನು ಗೌರವಿಸುವ, ಕನ್ನಡ ಸಂಘಟನೆಗಳನ್ನು ಕಾರ್ಯಕ್ರಮದಲ್ಲಿ ಜೊತೆಗೂಡಿಸಿಕೊಳ್ಳುವ, ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ಪ್ರತಿಭೆಗಳನ್ನು ಗೌರವಿಸುವ ಹಾಗೂ ಇದೆಲ್ಲದರ ನೆನಪಿಗಾಗಿ ಹಸ್ತಪ್ರತಿಯನ್ನು ಬಿಡುಗಡೆಗೊಳಿಸುವುದು, ಕನ್ನಡ ಶುದ್ಧ ಬರಹ ಸ್ಪರ್ಧೆ ಸೇರಿದಂತೆ ಕನ್ನಡ ತನವನ್ನು ಜಾಗೃಗೊಳಿಸುವ ಕಾರ್ಯಕ್ರಮಗಳನ್ನು ನಡೆಸುವ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಜಯಕರ್ನಾಕ ಸಂಘಟನೆಯ ರಾಮು ಯಳ್ಳೂರ, ಶ್ರೀಕಾಂತ ಕೊಂಚಿಗೇರಿ, ಕರ್ನಾಟಕ ರಕ್ಷಣಾ ವೇದಿಕೆಯ ಹನುಮಂತ ಕೋಣನಕೊಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಶಿಧರ, ಎಸ್.ಎಸ್.ಹಿರೇಮಠ, ಎಂ.ಜಾವಿದ್, ಎಸ್. ಆನಂದ, ಎಸ್.ಎಸ್.ಸಾಲಿಮಠ, ಸಿ.ಸಿ.ಕದಂ, ಶಿವಾನಂದ ಕ್ಯಾಲಕೊಂಡ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ