ಚಿತ್ರದುರ್ಗ:
ಸಂವಿಧಾನವನ್ನು ಸುಟ್ಟು ಮೀಸಲಾತಿಯನ್ನು ನಾಶಪಡಿಸಲು ಹೊರಟಿರುವ ಕೇಂದ್ರ ಬಿಜೆಪಿ.ಸರ್ಕಾರದ ಕುತಂತ್ರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಜವಾಬ್ದಾರಿ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನಾಂಗದವರ ಮೇಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಜಕ್ಕಪ್ಪನವರು ಜಾಗೃತಿಗೊಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದಿಂದ ಅಮೋಘ ಹೋಟೆಲ್‍ನಲ್ಲಿ ನಡೆದ ಸಂವಿಧಾನದಿಂದ ಸ್ವಾಭಿಮಾನದ ಕಡೆಗೆ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮೇಲ್ವರ್ಗಕ್ಕೆ ಶೇ.10 ರಷ್ಟು ಮೀಸಲಾತಿಯನ್ನು ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದಾರೆ. ಅವರೇನು ಕೇಳಿದ್ದರಾ. ಆಯೋಗದ ಶಿಫಾರಸ್ಸು ಇತ್ತ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ, ಹಿಂದುಳಿದವರು ಜಾತಿ ಕಾರಣಕ್ಕಾಗಿ ಅವಕಾಶ ವಂಚಿತರಾಗಿದ್ದಾರೆ. ಕ್ರಮೇಣ ಮೀಸಲಾತಿಯನ್ನು ಕಿತ್ತು ಹಾಕಿ ಸಂವಿಧಾನವನ್ನು ಸುಡಲು ಹೊರಟಿರುವ ಕೋಮುವಾದಿಗಳು 2019 ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಎಸ್.ಸಿ., ಎಸ್.ಟಿ., ಹಿಂದುಳಿದವರಿಗೆ ಉಳಿಗಾಲವಿಲ್ಲ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಿ. ಪಾರ್ಲಿಮೆಂಟ್ ಚುನಾವಣೆಗೆ ಕೇವಲ ಇನ್ನು ಮೂರು ತಿಂಗಳಿರುವುದರಿಂದ ಬಿಜೆಪಿ.ಯವರು ಹಳ್ಳಿ ಹಳ್ಳಿಗೆ ಹೋಗಿ ಕಾಂಗ್ರೆಸ್‍ನವರು ಏನು ಮಾಡಿಲ್ಲ.
ನಾವು ಏನು ಮಾಡಿಲ್ಲ. ಆದರೆ ಚುನಾವಣೆಯಲ್ಲಿ ನೋಟಾಕ್ಕೆ ಓಟು ಹಾಕಿ ಎನ್ನುವ ಅಪಪ್ರಚಾರ ನಡೆಸುತ್ತಿದ್ದಾರೆ. ಈಗಲಾದರೂ ನೀವುಗಳು ಎಚ್ಚೆತ್ತುಕೊಂಡು ಶಿರಾ, ಪಾವಗಡ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿ ಪ್ರತಿ ಮನೆ ಮನೆಗೆ ಹೋಗಿ ಈಗಿನ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಮತ ಕೇಳಿ ಮತ್ತೆ ಸಂಸದರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಸರಿಯಾಗಿ ಚಲಾಯಿಸಲಿಲ್ಲವೆಂದರೆ ಅಂಬೇಡ್ಕರ್‍ಗೆ ಅವಮಾನ ಮಾಡಿದಂತಾಗುತ್ತದೆ. ಸಂದಿದ್ದ ಪರಿಸ್ಥಿತಿಯಲ್ಲಿರುವ ಭಾರತವನ್ನು ರಕ್ಷಿಸಿ ಸಂವಿಧಾನವನ್ನು ಉಳಿಸಬೇಕಾಗಿರುವುದರಿಂದ ಈಗಿನಿಂದಲೇ ಪಾರ್ಲಿಮೆಂಟ್ ಚುನಾವಣೆಗೆ ಸನ್ನದ್ದರಾಗಿ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರಿಗೆ ಕರೆ ನೀಡಿದರು.
ಬಿಜೆಪಿ.ಯವರು ಮತದಾರರ ಪಟ್ಟಿಗಳನ್ನು ಕೈಯಲ್ಲಿಡಿದುಕೊಂಡು ಕಾಂಗ್ರೆಸ್‍ನ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಕುತಂತ್ರ ನಡೆಸುತ್ತಿದ್ದಾರೆ. ಹಾಗಾಗಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ.ಚುನಾವಣೆಯಲ್ಲಿ ಹಣ, ಹೆಂಡಕ್ಕೆ ನಿಮ್ಮ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಜನಪರ ಕೊಡುಗೆಗಳನ್ನು ಜನರಿಗೆ ತಲುಪಿಸಿ ಧೆರ್ಯದಿಂದ ಬಿ.ಎನ್.ಚಂದ್ರಪ್ಪನವರಿಗೆ ಮತ ಕೇಳಿ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ರಾಹುಲ್‍ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ರಾಹುಲ್‍ಗಾಂಧಿ ದೇಶದ ಪ್ರಧಾನಿಯಾಗಿ ಸಂವಿಧಾನವನ್ನು ರಕ್ಷಿಸ ಬೇಕಾಗಿರುವುದರಿಂದ ಕಾರ್ಯಕರ್ತರು ಸೇನಾನಿಗಳಿಂತೆ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಪಕ್ಷ ತಾಯಿ ಬೇರಿದ್ದಂತೆ ಪಕ್ಷ ಇಲ್ಲದಿದ್ದರೆ ಯಾರು ಇಲ್ಲ. ಮೊದಲು ಪಕ್ಷ. ಸ್ವಾತಂತ್ರ ಯೋಧರು, ಸೇನಾನಿಗಳು ಯಾವ ರೀತಿ ಪ್ರತಿಫಲವಿಲ್ಲದೆ ನಿಸ್ವಾರ್ಥವಾಗಿ ದೇಶ ಸೇವೆಗೆ ನಿಂತಿದ್ದಾರೋ ಅದೆ ರೀತಿ ನೀವುಗಳು ಪಕ್ಷದ ಸೇವೆಗೆ ಕಟಿಬದ್ದರಾಗಿರಬೇಕು. ಶತ ಶತಮಾನಗಳಿಂದಲೂ ನೋವು ಅನುಭವಿಸಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರನ್ನು ಮನುವಾದಿಗಳು ನೋಡುವ ರೀತಿಯೇ ಬೇರೆಯಾಗಿದೆ. ಅದಕ್ಕಾಗಿ ಅವರ ಕೆಂಗಣ್ಣಿಗೆ ಗುರಿಯಾಗುವ ಬದಲು ದೇಶದ ಬಡವರಿಗೆ ಅನ್ನನೀಡುವವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ದೇಶದ ಬಗ್ಗೆ ಪ್ರಧಾನಿ ಮೋದಿಗೆ ಅಭಿಮಾನವಿಲ್ಲ. ಜಾತಿ ಜಾತಿ ಧರ್ಮ ಧರ್ಮಗಳ ನಡುವೆ ಗಲಾಟೆ ಮಾಡಿಸುವುದೇ ಅವರ ಉದ್ದೇಶ. ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಗೆ ಅತ್ಯಂತ ಮಹತ್ವವಿದೆ. ಸಂವಿಧಾನವನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಆಲೋಚನೆಯಿಟ್ಟುಕೊಂಡಿರುವ ಕೋಮುವಾದಿ ಬಿಜೆಪಿ.ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಅವಕಾಶ ಕೊಡಬಾರದು. ಸಂವಿಧಾನವಿಲ್ಲದಿದ್ದರೆ ಯಾರು ಇರುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಎಲ್ಲರೂ ಬದುಕಬೇಕಾಗಿರುವುದರಿಂದ ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ವರ್ಷ 26 ಸಾವಿರ ಕೋಟಿ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಆಂಜನೇಯ ಶೋಷಿತರಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಹೊಸದುರ್ಗ ಹಾಗೂ ಹಿರಿಯೂರಿ ಶಾಸಕರು ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿಸಿದ್ದರೂ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ವರ್ಚಸ್ಸಿನ ಮೇಲೆ ಗೆದ್ದಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಸಂಸದ ಬಿ.ಎನ್.ಚಂದ್ರಪ್ಪನವರನ್ನು ಮತ್ತೆ ಗೆಲ್ಲಿಸುವಂತೆ ಕಾರ್ಯಕರ್ತರನ್ನು ಕೋರಿದರು.
ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಸಂಚಾಲಕರುಗಳಾದ ರವಿಕುಮಾರ್, ಪ್ರಸನ್ನಕುಮಾರ್, ನಾಗರಾಜ್‍ಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನ್ಯಾಯವಾದಿ ಹಿರೇಹಳ್ಳಿ ಮಲ್ಲೇಶ್, ಚಿದಾನಂದಮೂರ್ತಿ, ಜಿಲ್ಲಾಧ್ಯಕ್ಷ ಡಿ.ರಾಜಪ್ಪ, ಬ್ಲಾಕ್ ಅಧ್ಯಕ್ಷ ದೇವರಾಜ್, ಕೋಟಿ, ಡಿ.ಕುಮಾರ್, ಚಂದ್ರನಾಯ್ಕ, ಕೃಷ್ಣಪ್ಪ, ಮೂರ್ತಿ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.