ಹುಳಿಯಾರು
ರಂಗಭೂಮಿಗೆ ಸರ್ಕಾರದಿಂದ ನಿರೀಕ್ಷಿಸಿದ ಪ್ರೋತ್ಸಾಹ ಸಿಗುತ್ತಿಲ್ಲ. ನಾನೊಬ್ಬ ಮಾಜಿ ಸಚಿವನಾಗಿದ್ದುಕೊಂಡು ಈ ವಾಸ್ತವತೆ ಹೇಳಬೇಕಾದರೆ ಮುಜುಗರವಾಗುತ್ತಿದೆ. ಆದರೂ ರಂಗಭೂಮಿಗೆ ಇಡೀ ಜೀವನ ಮುಡುಪಾಗಿಡುವ ಕಲಾವಿದರಿಗೆ ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ನಡೆಸುವ ಸೌಲಭ್ಯ ಸರ್ಕಾರದಲ್ಲಿಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಹುಳಿಯಾರು ಕೋಡಿಪಾಳ್ಯದ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವದ 3 ನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿವಿ ಮತ್ತು ಸಿನಿಮಾದ ಅಬ್ಬರದ ನಡುವೆ ರಂಗಕಲೆ ಜೀವಂತವಾಗಿರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಇಲ್ಲಿ ಕಲಾವಿದರೂ ಮತ್ತು ರಂಗ ಪ್ರೋತ್ಸಾಹಕರು ಹೆಚ್ಚಾಗಿರುವುದರಿಂದ ಅಳಿಯದೆ ಉಳಿದಿದೆ. ಕಲಾವಿದರೂ ಸಹ ತಮ್ಮ ದುಡಿಮೆಯ ಅಷ್ಟೂ ಹಣವನ್ನೂ ಕಲೆಗಾಗಿ ತ್ಯಾಗ ಮಾಡಿರುವ ನಿದರ್ಶನಗಳು ಬಹಳಷ್ಟಿವೆ. ಇಂತಹ ಅರ್ಪಣಾ ಮನೋಭಾವದಿಂದಲೇ ನಾಡಿನ ಕಲೆ ಉಳಿದು ಬೆಳೆಯುತ್ತಿದೆ. ಇಂತಹ ಕಲೆ ಮತ್ತು ಕಲಾವಿದರನ್ನು ಸರ್ಕಾರ ಮತ್ತಷ್ಟು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಮಳೆ ನೀರು ಹಿಡಿದಿಡುವ ಪ್ರಯತ್ನವನ್ನು ಸರ್ಕಾರವೂ ಮಾಡಿಲ್ಲ, ರೈತರೂ ಮಾಡಿಲ್ಲ. ಪರಿಣಾಮ ಇಂದು ಅಂತರ್ಜಲ ಪಾತಾಳ ಸೇರಿದ್ದು ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಈ ಸಮಸ್ಯೆಗೆ ಭದ್ರಾ ಯೋಜನೆಯೊಂದೆ ಪರಿಹಾರವೆಂದು ಮನಗಂಡು ಸತತ 30 ವರ್ಷಗಳಿಂದ ಹೋರಾಡಿದ ಫಲವಾಗಿ ಸಿದ್ಧರಾಮಯ್ಯ ಅವರು ಕಳೆದ ಅವಧಿಯಲ್ಲಿ ತುಮಕೂರು ನಾಲಾ ಯೋಜನೆಗೆ ಮುಂಜೂರಾತಿ ನೀಡಿದ್ದಾರೆ. ಈ ಯೋಜನೆಯ ಸರ್ವೆ ಕಾರ್ಯ ಮುಗಿದಿದ್ದು ಇನ್ನೆರಡು ತಿಂಗಳಲ್ಲಿ ಹುಳಿಯಾರು ಭಾಗದಲ್ಲೇ ಯೋಜನೆಗೆ ಶಂಕುಸ್ಥಾಪನೆ ದೊರೆಯಲಿದೆ. ಈ ಬಗ್ಗೆ ಅಪಪ್ರಚಾರ ನಂಬದೆ ನನ್ನ ಮೇಲೆ ವಿಶ್ವಾಸವಿಡಿ ಎಂದರು.
ಭದ್ರಾ ಯೋಜನೆಯು ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕಿಗೆ ನೈಸರ್ಗಿಕವಾಗಿ ಹರಿಯುವುದರಿಂದ ಸಹಜವಾಗಿ ನಾಲೆಯ ಕೆಳ ಪ್ರದೇಶದ ಕೆರೆಗಳಿಗೆ ನೀರು ಹರಿಸಬಹುದಾಗಿದೆ. ಹಾಗಾಗಿ ಕನಿಷ್ಠ 16 ಕೆರೆಗಳನ್ನು ಈ ಯೋಜನೆಯಿಂದ ತುಂಬಿಸಬಹುದಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಹುಳಿಯಾರು ಕೆರೆ ಮತ್ತು ಬೋರನಕಣಿವೆ ಜಲಾಶಯಕ್ಕೆ ನೀರು ಬಂದೇ ಬರುತ್ತದೆ. ಜಲಾಶಯವೊಂದು ಸದಾಕಾಲ ತುಂಬಿದ್ದರೆ ಸಾವಿರಾರು ಎಕರೆ ಭೂಮಿ ಹಸಿರಾಗುತ್ತದೆ. ಬತ್ತಿರುವ ಕೊಳವೆಬಾವಿಯಲ್ಲೂ ನೀರು ಉಕ್ಕುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಹರಿ ರೆಕಾರ್ಡಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಿ.ಮನೋಹರ್ ನಾಯ್ಡು, ಪಪಂ ಸದಸ್ಯ ಡಾಬಾಸುರೇಶ್, ಮಾತಾ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ಸದಸ್ಯ ಮೈಲಾರಪ್ಪ, ಶಿಕ್ಷಕಿ ಲಕ್ಷ್ಮೀಬಾಯಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
