ಹೊಸಪೇಟೆ :
ಸ್ವಾತಂತ್ರ್ಯಕ್ಕಾಗಿ ಮೊಟ್ಟ ಮೊದಲಿಗೆ ಬ್ರಿಟೀಷರ ವಿರುದ್ದ ಹೋರಾಡಿದ ವೀರ ಟಿಪ್ಪುಸುಲ್ತಾನ ಮತಾಂಧನಲ್ಲ. ಅವರೊಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದರು ಎಂದು ಹಂಪಿ ಕನ್ನಡ ವಿ.ವಿಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.
ಇಲ್ಲಿನ 17ನೇ ವಾರ್ಡ್ ಛಲವಾದಿಕೇರಿಯಲ್ಲಿ ಹಮ್ಮಿಕೊಂಡಿದ್ದ “ಭೀಮ ಕುಟೀರ ಪುಸ್ತಕ ಮನೆ” ಉದ್ಘಾಟನೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಜೀವನ ವೃತ್ತಾಂತ ಪುಸ್ತಕ ಬಿಡುಗಡೆ ಹಾಗು ಟಿಪ್ಪುಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಟಿಪ್ಪು ವಿರುದ್ದ ಬ್ರಿಟೀಷರು ಪೆನ್ನು ಮತ್ತು ಖಡ್ಗವನ್ನು ಅಸ್ತ್ರವಾಗಿ ಬಳಸಿ, ಟಿಪ್ಪು ಚರಿತ್ರೆಯನ್ನು ಬರೆದ ಬ್ರಿಟೀಷರು, ಧಾರ್ಮಿಕ ಭಾವನೆ ಕೆರಳಿಸುವ ಮೂಲಕ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದ್ದರು. ಹೀಗಾಗಿ ಬ್ರಿಟೀಷರು ಮತ್ತು ಚರಿತ್ರೆ ಬರೆಯಬಲ್ಲಂಥಹ ಪುರೋಹಿತಶಾಯಿಗಳು ಟಿಪ್ಪುವನ್ನು ಮತಾಂಧ, ಹಿಂದು ದೇವಾಲಯಗಳ ಧ್ವಂಸಕ ಎಂದು ಬಿಂಬಿಸಿದ್ದಾರೆ ಎಂದರು.
ಟಿಪ್ಪು ಊಳುವವನೇ ಒಡೆಯ ಕಾನೂನು ಜಾರಿ, ದೇವದಾಸಿ ಪದ್ದತಿಗೆ ತಡೆ, ಎಲ್ಲಾ ವರ್ಗದವರಿಗೂ ಶಿಕ್ಷಣ, ಹಿಂದೂ ದೇವಾಲಯಗಳ ರಕ್ಷಣೆ ಮೊದಲಾದ ಕೆಲಸ ಮಾಡಿದ ಟಿಪ್ಪು ಅದು ಹೇಗೆ ಕ್ರೂರಿಯಾಗುತ್ತಾನೆ ? ಎಂದು ಪ್ರಶ್ನಿಸಿದರು.
ಮುಖಂಡರಾದ ಸಂದೀಪಸಿಂಗ್, ದುರುಗಪ್ಪ ಪೂಜಾರಿ ಮಾತನಾಡಿದರು.
ಈ ಸಂಧರ್ಭದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ.ವೀರಸ್ವಾಮಿ, ಮುಖಂಡರಾದ ರಹೀಮನಸಾಬ್, ಸಿ.ಡಿ.ಈರಣ್ಣ, ಮಾರುತಿ ಕಾಂಳ್ಳೆ, ಬಿ.ವಿ.ನಾಗವೇಣಿ, ನಿಂಬಗಲ್ ರಾಮಕೃಷ್ಣ, ಡಿ.ವೆಂಕಟಮಣ, ರುಕ್ಸಾನಾ, ಗಣೇಶ ಗುಜ್ಜಲ್, ಎಚ್.ಶೇಷು, ಎಚ್.ಎಸ್.ವೆಂಕಪ್ಪ, ಪರಶುರಾಮ, ಲಿಯಾಕತ್ ಅಲಿ, ಸೋಮಶೇಖರ್, ಮಧುರ ಚೆನ್ನಶಾಸ್ತ್ರಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ