ವಿಶ್ವ ಮಾನವ ದಿನಾಚರಣೆ

ಹೊನ್ನಾಳಿ:

          ಜಗದ ಕವಿ, ಯುಗದ ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತನ್ಮೂಲಕ ವಿಶ್ವಶಾಂತಿಗೆ ಎಲ್ಲರೂ ಶ್ರಮಿಸೋಣ ಎಂದು ಹೊನ್ನಾಳಿಯ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ನಾಯ್ಕರ್ ಹೇಳಿದರು.

         ಇಲ್ಲಿನ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿಶ್ವಮಾನವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ “ವಿಶ್ವಮಾನವ ಸಂದೇಶ” ಎಂಬ ವಿಷಯ ಕುರಿತ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗು ಹುಟ್ಟಿದಾಗ ಅದಕ್ಕೆ ಯಾವುದೇ ಮೇಲು-ಕೀಳು ಎಂಬ ಭಾವನೆ ಇರುವುದಿಲ್ಲ. ಯಾರೊಂದಿಗೂ ಭೇದ ಭಾವದಿಂದ ವರ್ತಿಸುವ ಗುಣ ಅದಕ್ಕಿರುವುದಿಲ್ಲ. ಆದರೆ, ನಮ್ಮ ಸಮಾಜದಲ್ಲಿ ಬೆಳೆಯುತ್ತ ಹೋದಂತೆ ಹಿರಿಯರಾದವರು ಮೇಲು-ಕೀಳು, ಚಿಕ್ಕವ-ದೊಡ್ಡವ, ಅಂತಸ್ತು ಮತ್ತಿತರ ವಿಷಯಗಳನ್ನು ಮಗುವಿನಲ್ಲಿ ತುಂಬುತ್ತಾ ಹೋಗುತ್ತಾರೆ. ಈ ಕಾರಣಕ್ಕಾಗಿ ಮಗು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ, ನಾವೆಲ್ಲರೂ ಮಕ್ಕಳಲ್ಲಿ ವಿಶ್ವಮಾನವತೆಯನ್ನು ಬೆಳೆಸಬೇಕು. ತನ್ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ತೊಡೆದುಹಾಕಲು ಮುಂದಾಗಬೇಕು ಎಂದು ತಿಳಿಸಿದರು.

         ಹೊನ್ನಾಳಿಯ ಎಂ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಎನ್. ಸಂಗನಾಳಮಠ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ಇ. ಪ್ರಕಾಶ್, ಸುರೇಶ್ ಲಮಾಣಿ, ಬಿ.ಜೆ. ಸುಪ್ರಿಯಾ, ಎಚ್. ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

        ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು, ಹೊನ್ನಾಳಿಯ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜು, ಎಂ.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

         ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್.ಬಿ. ರಂಜಿತಾ ಪ್ರಥಮ, ಹೊನ್ನಾಳಿಯ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ದ್ವಿತೀಯ ಸ್ಥಾನ ಮತ್ತು ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ.ಸಿ. ಚಂದು ತೃತೀಯ ಸ್ಥಾನ ಗಳಿಸಿದರು.

         ಮೂರು ಸ್ಥಾನ ಗಳಿಸಿದ ಈ ಮೂವರೂ ವಿದ್ಯಾರ್ಥಿನಿಯರು ದಾವಣಗೆರೆಯ ಸಿದ್ಧಗಂಗಾ ಕಾಲೇಜಿನಲ್ಲಿ ಡಿ.28ರ ಶುಕ್ರವಾರ ನಡೆಯುವ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link