ಹೊನ್ನಾಳಿ:
ಪ್ರಮಾಣಿತ ಬಿತ್ತನೆ ಬೀಜಗಳಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಅಧಿಕಾರಿ ಶಂಷೀರ್ ಅಹಮ್ಮದ್ ಹೇಳಿದರು.
ಗೋವಿನಕೋವಿ ಗ್ರಾಮದ ರೈತ ಸಂಪರ್ಕ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ, ಲಘು ಪೋಷಕಾಂಶಗಳ ಸಮರ್ಥ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಗಮನಹರಿಸಬೇಕು. ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಮತ್ತು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಯಶಸ್ಸು ಸಾಧಿಸುವಂತೆ ರೈತರಿಗೆ ತಿಳಿಸಿದರು.
ಈ ವರ್ಷ ಪ್ರಸಕ್ತ ಮುಂಗಾರು ಹಂಗಾಮಿಗೆ ಬಿತ್ತನೆಗೆ ಬೇಕಾಗುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಮೆಕ್ಕೆಜೋಳ ಬೀಜಗಳೊಂದಿಗೆ ತೊಗರಿ ಮತ್ತು ಅಲಸಂದೆ ಬೀಜಗಳು ಲಭ್ಯವಿದ್ದು, ರೈತರು ಹೆಚ್ಚಿನ ರೀತಿಯಲ್ಲಿ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಮೆಕ್ಕೆಜೋಳ ಬೀಜವನ್ನು ಪಡೆಯಲು ರೈತರು ಕಡ್ಡಾಯವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಅನುಮತಿಯೊಂದಿಗೆ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್, ಒಂದು ಪಾಸ್ ಪೋರ್ಟ್ ಸೈಜ್ ಪೋಟೋ ತರಬೇಕು ಎಂದು ವಿವರಿಸಿದರು.
ಮೆಕ್ಕೆಜೋಳ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸಾಮಾನ್ಯ ರೈತರಿಗೆ ಪ್ರತಿ ಕೆಜಿ ಬೀಜಕ್ಕೆ ಸರಕಾರದ ಸಹಾಯಧನ 20 ರೂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಸರಕಾರದ ಸಹಾಯಧನ 30 ರೂ. ಇದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಲು ಕೋರಿದರು. ತೊಗರಿ ಬಿಆರ್‍ಜಿ 5, ಟಿಎಸ್3ಆರ್ ತಳಿ ಲಭ್ಯವಿದ್ದು, ಇದು ಉತ್ತಮ ಇಳುವರಿ ನೀಡುವ ತಳಿಯಾಗಿದೆ. ಅಲಸಂದೆ ಬೀಜದ ಸಿ-152 ತಳಿ ಲಭ್ಯವಿದೆ ಎಂದು ತಿಳಿಸಿದರು.
ಗೋವಿನಕೋವಿ ಗ್ರಾಪಂ ಅಧ್ಯಕ್ಷೆ ಎಚ್. ನೇತ್ರಾವತಿ, ಉಪಾಧ್ಯಕ್ಷೆ ಎನ್. ಮಂಜುಳಾ, ಸದಸ್ಯ ಸಂತೋಷ್‍ಕುಮಾರ್, ರೈತರಾದ ದುರ್ಗೇಶ್, ಶಿವಕುಮಾರ್, ರಾಮಜ್ಜ, ಹನುಮಂತಪ್ಪ, ಬಸಪ್ಪ, ದುಂಡ್ಯಪ್ಪ, ಸಹಾಯಕ ಕೃಷಿ ಅಧಿಕಾರಿ ಕೆ.ಬಿ. ಮಂಜುನಾಥಪ್ಪ, ಶೇಖರಪ್ಪ, ಲೆಕ್ಕ ಸಹಾಯಕ ದಿವಾಕರ್, ಆತ್ಮ ಸಿಬ್ಬಂದಿ, ಅನುವುಗಾರರಾದ ಸುರೇಶ ಮತ್ತು ಬಸವರಾಜ ಉಪಸ್ಥಿತರಿದ್ದರು.