ಬಳ್ಳಾರಿ
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದಾರ್ ಅವರು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ 25ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಅದನ್ನು ಸಮರ್ಪಕವಾಗಿ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಿರ್ವಹಿಸಲಾಗುವುದು ಎಂದರು.
ಪರಿಸರದ ಜಾಗೃತಿ ಮೂಡಿಸಬೇಕಾದರೇ ಮೊದಲಿಗೆ ಜವಾಬ್ದಾರಿ ತಗೋಬೇಕಾಗುತ್ತದೆ. ಅಂದಾಗ ಮಾತ್ರ ಅನುಷ್ಠಾನಗೊಳಿಸಲು ಸಾಧ್ಯ. ನಾನಾ ಕಾರಣಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಅದರಲ್ಲಿ ನಮ್ಮ ಮಾಲಿನ್ಯದ ಕೊಡುಗೆ ಎಷ್ಟಿದೆ ಎಂದು ಅರಿತುಕೊಂಡು ಅದನ್ನು ಹೊಗಲಾಡಿಸಿಕೊಳ್ಳಲು ಮತ್ತು ಈ ಮೂಲಕ ಮಾಲಿನ್ಯ ತಡೆಗಟ್ಟುವುದಕ್ಕೆ ನಾವು ಮುಂದಾಗಬೇಕು ಎಂದರು.
ನಿಸರ್ಗದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸೋಣ ಎಂದರು. ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ಉಪಯೋಗಿಸುವುದಕ್ಕೆ ಅನ್ವೇಷಣೆ ಮಾಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಪಠ್ಯವನ್ನು ಶಾಲೆಗಳಲ್ಲಿ ಅಳವಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶಕುಮಾರ್ ಅವರು ಮಾತನಾಡಿ, ಪರಿಸರ ದಿನಾಚರಣೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಅತ್ಯಂತ ವಿಶೇಷ ಆದ್ಯತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಯುಮಾಲಿನ್ಯ ಹಿಮ್ಮೆಟ್ಟಿಸೋಣ ಎಂಬುದಾಗಿದೆ. ಕೈಗಾರಿಕರಣ, ಅರಣ್ಯ ನಾಶ, ಕೃಷಿ ತ್ಯಾಜ್ಯ ಸೇರಿದಂತೆ ನಾನಾ ಕಾರಣಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದ್ದು, 50ರಿಂದ 70ಲಕ್ಷ ಜನರು ಈ ವಾಯುಮಾಲಿನ್ಯದಿಂದ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದರು.
ನಾವೆಲ್ಲರೂ ಸೇರಿ ಸಮತೋಲಿತ ಪರಿಸರ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಮಲ್ಲೂರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಸಿ.ಶಿವಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮತೋಲಿತ ಪರಿಸರ ಕಾಪಾಡುವ ನಿಟ್ಟಿನಲ್ಲಿ ಹೆಚ್ಚೆಚ್ಚು ಗಿಡಮರಗಳನ್ನು ನೆಡೋಣ ಎಂದರು.
ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷ 12 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ವಿವರಿಸಿದ ಅವರು, ಕೊಟ್ಟೂರಿನ ಗಚ್ಚಿನಮಠದ ಶಾಲೆ ಈ ವರ್ಷದ ರಾಜ್ಯಮಟ್ಟದ ಪರಿಸರ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ಕಿರಣಕುಮಾರ್, ನ್ಯಾಯಾಧೀಶರಾದ ವಿಪುಲಾ ಎಂ. ಪೂಜಾರಿ, ಭವಾನಿ, ಸುಜಾತಾ, ವಕೀಲರ ಸಂಘದ ಕಾರ್ಯದರ್ಶಿ ಎಸ್.ವಿ.ಅರಸೂರು ಸೇರಿದಂತೆ ನ್ಯಾಯಾಧೀಶರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಕೀಲರು ಹಾಗೂ ಸಾರ್ವಜನಿಕರು ಇದ್ದರು.