ದೇವೇಗೌಡರನ್ನು ಬೆಂಬಲಿಸಲು ಕಾರ್ಯಕರ್ತರ ಪಡೆ ಸಜ್ಜಾಗಬೇಕು:ಹೆಚ್.ವಿಶ್ವನಾಥ್

ಬೆಂಗಳೂರು

        ಲೋಕಸಭಾ ಚುನಾವಣೆಯಲ್ಲಿ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಸ್ಪಷ್ಟ ಚಿತ್ರಣವಿದ್ದು, ಅವರನ್ನು ಬೆಂಬಲಿಸಲು ಕಾರ್ಯಕರ್ತರ ಪಡೆ ಸಜ್ಜಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಇಂದಿಲ್ಲಿ ಕರೆ ನೀಡಿದ್ದಾರೆ.

      ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರಿಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಗಾಂಧಿಜಿ ಕನಸು ಜಯಪ್ರಕಾಶ್ ನಾರಾಯಣ ಅವರ ತತ್ವ ಸಿದ್ಧಾಂತಗಳ ಮೇಲೆ ಜೆಡಿಎಸ್ ಪಕ್ಷ ಕಟ್ಟಲಾಗಿದೆ. ಪ್ರಾಂತಿಯ ಪಕ್ಷಗಳ ಸಹಾಯವಿಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಾರಿ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

      ಜಾತಿ, ಧರ್ಮವನ್ನು ವಿರೋಧಿಸುವ ಬಿಜೆಪಿಯ ಅವಶ್ಯಕತೆ ದೇಶಕ್ಕೆಇಲ್ಲ. ಮತೀಯ, ಜಾತಿವಾದಿಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಪ್ರಾದೇಶಿಕ ಪಕ್ಷಕ್ಕೆ ಇದೆ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಪಕ್ಷಗಳ ಬಲ ಏನು ಎಂಬ ಬಗ್ಗೆ ಸಂದೇಶ ಸಾರಲಾಗಿದ್ದು, ಅದರ ಮುಂದಿನ ಭಾಗವೇ ಇಂದಿನ ರಾಷ್ಟ್ರಿಯ ಅಧಿವೇಶನ ಎಂದು ವಿಶ್ವನಾಥ್ ಅವರು ತಿಳಿಸಿದರು.

      ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಮಾತನಾಡಿ, ಈ ದಿನ ಭಾವನಾತ್ಮಕ ಸಂವೇದನೆ ಹುಟ್ಟುಹಾಕುವ ದಿನ. ಮೂಲಭೂತವಾದಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರ ಹತ್ಯೆಯಾದ ದಿನವೇ ಪಕ್ಷದ ರಾಷ್ಟ್ರೀಯ ಮಹಾಧಿವೇಶನ ನಡೆಯುತ್ತಿದೆ ಗಾಂಧಿ ಹತ್ಯೆಯಾದ ದಿನದಂದು ರಾಷ್ಟ್ರಕವಿ ಕುವೆಂಪು ನೀಡಿದ ಸಂತಾಪ ಸಂದೇಶವನ್ನು ವೇದಿಕೆಯಲ್ಲಿ ಅವರು ಸ್ಮರಿಸಿದರು.

      ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ದೇವೇಗೌಡರು ರೈತರನ್ನು ಯಾವುದೇ ಒಂದು ಸಮುದಾಯಕ್ಕೆ ಮೀಸಲಿಟ್ಟಿಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ಮೀಸಲಾತಿಗೆ ಧ್ವನಿಯಾಗಿದ್ದಾರೆ. ಆಕಸ್ಮಿಕವಾಗಿ ಪ್ರಧಾನಮಂತ್ರಿಯಾದ ಅವರು ಬರಿ ಹತ್ತು ತಿಂಗಳಿನ ಅವಧಿಯಲ್ಲಿ ದೇಶಕ್ಕೆ ಮಾದರಿತಾಗುವಂತಹ ಆಡಳಿತ ನೀಡಿದರು ಎಂದರು.

       ನವೀನ್ ಪಾಟ್ನಾಯಕ್, ಲಾಲು ಪ್ರಸಾದ್ ಯಾದವ್, ಚಿದಂಬರಂ ಅವರುಗಳು ಯಾರದ್ದಾದರೂ ಮಾತು ಕೇಳುತ್ತಾರೆ ಅದು ದೇವೇಗೌಡರ ಮಾತು ಮಾತ್ರ. ದೇಶದಲ್ಲಿ ಜನತಾಪರಿವಾರವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದು, ಲೋಕಸಭಾ ಚುನಾವಣೆಗೆ ಪ್ರಾದೇಶಿಕ ಪಕ್ಷಗಳ ಮಹತ್ವ ಅರಿವಾಗಲಿದೆ. ಪ್ರಧಾನಿ ಮೋದಿ ದೇಶದ ಜನತೆಗೆ ಮೋಸ ಮಾಡುತ್ತಲೇ ಬಂದರು. ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ತುಂಬಾ ಕಾಳಜಿ ಇದ್ದು, ದೇಶಕ್ಕೆ ಸಿಕ್ಕಿರುವ ಉತ್ತಮ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ ಮಾತ್ರ. ಕುಮಾರಸ್ವಾಮಿ ಅವರು ಉತ್ತಮ ರಾಜ್ಯ ಕಟ್ಟಲು ಹೊರಟಿದ್ದು, ಅದಕ್ಕೆ ನಾವೆಲ್ಲ ಸಹಕಾರ ಕೊಡಬೇಕು ಎಂದು ಅವರು ಮನವಿ ಮಾಡಿದರು.

       ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಸಮನ್ವಯ ಸಮಿತಿ ಸದಸ್ಯ ಡ್ಯಾನಿಷ್ ಅಲಿ ಮಾತನಾಡಿ, ಪ್ರಧಾನಿ ಮೋದಿ ಹೇಳಿದಂತೆ ಏನನ್ನು ಮಾಡಿಲ್ಲ. ಆರ್.ಎಸ್.ಎಸ್ ಬೆಂಬಲಿಸಿದವರಿಗೆ ಬಿಜೆಪಿಗೆ ಉಳಿಗಾಲ. ಇಲ್ಲವಾದಲ್ಲಿ ಇಲ್ಲ. ಜೆಡಿಎಸ್ ಸಣ್ಣ ಪ್ರಾದೇಶಿಕವಾದರೂ ದೇಶದಲ್ಲಿ ಮುಂದಿನ ದಿನಗಳಲ್ಲಿ ಸಶಕ್ತಗೊಳ್ಳಲಿದೆ. ದೇವೇಗೌಡರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ, ಬಿಜೆಪಿ ಪಕ್ಷವನ್ನು ಹೊಡೆದೋಡಿಸಲಿವೆ. ಲೋಕಸಭಾ ಚುನಾವಣೆ ನಂತರ ದೇಶಾದ್ಯಂತ ಜೆಡಿಎಸ್ ತನ್ನ ಅಸ್ತಿತ್ವ ಸ್ಥಾಪಿಸಲಿದೆ. ಜಾತ್ಯಾತೀತ ಶಕ್ತಿಗಳು ದೇವೇಗೌಡರ ನೇತೃತ್ಬದಲ್ಲಿ ಒಗ್ಗೂಡಲಿವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link