ಆಯುಷ್ಮಾನ್ ಭಾರತ್ ಯೋಜನೆಯಿಂದ 10 ಕೋಟಿ ಕುಟುಂಬಕ್ಕೆ ಲಾಭ

ಹಾವೇರಿ

       ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಿಂದ ದೇಶದ ಹತ್ತುಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದರು.

        ಮಂಗಳವಾರ ನಗರದ ಹುಕ್ಕೇರಿಮಠದ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಜಿಲ್ಲಾ ಆಸ್ಪತ್ರೆ ಹಾವೇರಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

         ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಆ ಕುಟುಂಬದ ವಾರ್ಷಿಕ ಆದಾಯದ ಶೇ.40 ರಷ್ಟು ಹಣವನ್ನು ಆಸ್ಪತ್ರೆಗೆ ವೆಚ್ಚಮಾಡುತ್ತಿರುವುದು ತಿಳಿದುಬಂದಿದೆ. ದುಡುಮೆಯ ಬಹುಪಾಲು ಹಣವನ್ನು ಆಸ್ಪತ್ರೆಗಾಗಿ ವೆಚ್ಚಮಾಡುತ್ತಿರುವ ಈ ಕುಟುಂಬಗಳು ಬಡವರಾಗಿ ಉಳಿಯುತ್ತಿರುವುದಾಗಿ ಕಂಡುಬಂದಿದೆ.

         ಈ ಹಿನ್ನೆಲೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಯಾವುದೇ ಪ್ರೀಮಿಯಂ ಹಣ ಇಲ್ಲದೇ ಬಿಪಿಎಲ್ ಕುಟುಂಬಗಳಿಗೆ ದೇಶದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ಲಕ್ಷರೂ. ವೆಚ್ಚದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆಯಡಿ 15 ಸಾವಿರ ಆಸ್ಪತ್ರೆಗಳಲ್ಲಿ 1258 ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಶದ 10 ಕೋಟಿ ಕುಟುಂಬಗಳು ಆಯುಷ್ಮಾನ್ ಆರೋಗ್ಯ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಒಂದು ಕುಟುಂಬದಲ್ಲಿ ಕನಿಷ್ಠ ಐದು ಜನರನ್ನು ಲೆಕ್ಕ ಹಾಕಿದರು 50 ಕೋಟಿ ಜನ ಈ ಯೋಜನೆಯ ಲಾಭಪಡೆಯಲಿದ್ದಾರೆ ಎಂದು ಹೇಳಿದರು.

         ಬಡವರ ಕೈಗೆಟಕುವ ದರದಲ್ಲಿ ಔಷಧಿ ಪೂರೈಸಲು ಜನೌಷಧಿ(ಜನರಿಕ್) ಮಳಿಗೆಗಳನ್ನು ತೆರೆಯಲಾಗಿದೆ. ಉದಾಹರಣೆಗೆ ಬ್ರಾಂಡ್ ಹೆಸರಿನಲ್ಲಿ 55 ರೂ.ಗಳಿಗೆ ದೊರೆಯುವ ಮಾತ್ರೆಗಳು ಈ ಜನೌಷಧಿ ಮಳಿಗೆಯಲ್ಲಿ ಕೇವಲ 5.50 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

         ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಹಾವೇರಿ ಜಿಲ್ಲೆಗೆ 125.15 ಕೋಟಿ ಅನುದಾನ ಬಿಡುಗಡೆಯಾಗಿದೆ.ಭಾರತದಲ್ಲಿ 138 ಕೋಟಿ ಜನಸಂಖ್ಯೆ ಇದೆ. ಆದರೆ ದೇಶದದಲ್ಲಿ 10 ಲಕ್ಷ ಅಲೋಪತಿ ವೈದ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ.

           ಎಂಟು ಲಕ್ಷ ವೈದ್ಯರು ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಓರ್ವ ವೈದ್ಯರು ಬೇಕು. ಮಾರ್ಗಸೂಚಿಯಂತೆ ದೇಶದಲ್ಲಿ ಇನ್ನೂ ಐದು ಲಕ್ಷ ವೈದ್ಯರ ಕೊರತೆ ಎದುರಾಗಿದೆ. ಬಹುಪಾಲು ವೈದ್ಯರು ನಗರ ಹಾಗೂ ಮಹಾನಗರಳಲ್ಲಿ ವಾಸವಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಇತಂಹ ಆರೋಗ್ಯ ಮೇಳಗಳು ತುಂಬಾ ಸಹಕಾರಿಯಾಗಿದೆ.

         ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಇಂದಿನ ಒತ್ತಡದ ಬದುಕಿನಿಂದ ನಮ್ಮ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ. ದೈನಂದಿನ ಕೆಲಸದ ಮಧ್ಯೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿವುದು ಅಷ್ಟೇ ಅಗತ್ಯವಾಗಿದೆ. ಈ ಮೇಳದ ಕುರಿತು ಸಾಕಷ್ಟು ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದು ಸಾಕ್ಷಿಯಾಗಿದೆ. ತಪಾಸಣೆ ಹಾಗೂ ಚಿಕಿತ್ಸೆ ಬರುವ ರೋಗಗಿಗಳೊಂದಿಗೆ ವೈದ್ಯರು ಸರಿಯಾಗಿ ಸ್ಪಂದಿಸಬೇಕು. ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.

        ತೋಟಗಾರಿಕೆ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಸಾಮಾಜಿಕವಾಗಿ, ಭೌತಿಕವಾಗಿ ಹಾಗೂ ಆದ್ಯಾತ್ಮಿಕವಾಗಿ ಪರಿಪೂರ್ಣತೆ ಹೊಂದಿದಾಗ ಮಾತ್ರ ಆರೋಗ್ಯವಂತರು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ವ್ಯಕ್ತಿಗೆ ಬಹುದಿನಗಳ ರೋಗಕ್ಕೆ ಚಿಕಿತ್ಸೆ ನೀಡುವುದು ಹಾಗೂ ಮರಣದ ವಿರುದ್ಧ ಹೋರಾಟ ಈ ಮೇಳದ ಉದ್ದೇಶವಾಗಿದೆ. ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

         ಹೆಚ್ಚಿನ ವೈದ್ಯರು ನಗರಕೇಂದ್ರೀಕೃತವಾಗಿದ್ದರಿಂದ ಗ್ರಾಮೀಣರಿಗೆ ವೈದ್ಯರ ಸೇವೆ ಸಿಗುತ್ತಿಲ್ಲ. ವಿಶೇಷ ಪರಿಣಿತಿ ಪಡೆದ ವೈದ್ಯರು ಸೇವೆ ನೀಡಲು ತಮ್ಮಲ್ಲಿಗೆ ಬಂದಿದ್ದ್ದು, ತಮ್ಮ ಅನಾರೋಗ್ಯದ ನೋವುಗಳನ್ನು ನಿವಾರಿಸಿಕೊಳ್ಳಿ, ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಚಾಚುತಪ್ಪದೆ ಪಾಲಿಸಿರಿ ಎಂದು ಹೇಳಿದರು.

         ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

           ಸಮಾರಂಭದಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಜಿ.ಪಂ.ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ, ಆಯುಷ್ ಅಧಿಕಾರಿ, ನಿವೃತ್ತ ಡಿ.ಎಚ್.ಓ. ಡಾ.ಈಶ್ವರ ಮಾಳೋದೆ, ಡಾ.ತುರ್ಕಾಣಿ, ಮಕ್ಕಳ ತಜ್ಞ ಡಾ.ಮರೋಳ, ಡಾ.ಗೌತಮ ಲೋಡಾಯ ಇತರರು ಉಪಸ್ಥಿತರಿದ್ದರು.

          ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಸ್ವಾಗತಿಸಿದರು. ಶಂಕರ ಸುತಾರ ಕಾರ್ಯಕ್ರಮ ನಿರೂಪಿಸಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ವಂದಿಸಿದರು.

ಜನಸಾಗರ:

       ಆರೋಗ್ಯ ಮೇಳಕ್ಕೆ ಜನಸಾಗರವೇ ಹರಿದು ಬಂದಿತ್ತು. ಅದರಲ್ಲೂ ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ಆಗಮಿಸಿದ್ದು ವಿಶೇಷವಾಗಿದೆ. ನೋಂದಣಿ ಕೇಂದ್ರದಲ್ಲಿ, ಜನೌಷಧಿ ಮಳಿಗೆಗಳಲ್ಲಿ ಸರದಿ ಸಾಲುಗಳು ಕಂಡುಬಂದವು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮೇಳದಲ್ಲಿ ಭಾಗವಹಿಸಿದ್ದರು.

         ಮೂರು ಸಾವಿರ ತಪಾಸಣೆ: ಮೊದಲ ದಿನದ ಆರೋಗ್ಯ ಮೇಳದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ 3165 ಜನ ಹಾಜರಾಗಿ ಆರೋಗ್ಯ ತಪಾಸಣೆಗೆ ಒಳಗಾದರು. ಈ ಪೈಕಿ ಹೃದಯ ರೋಗಕ್ಕೆ ಸಂಬಂಧಪಟ್ಟಂತೆ 277, ನರರೋಗಕ್ಕೆ ಸಂಬಂಧಪಟ್ಟಂತೆ 145, ಕಣ್ಣು ತಪಾಸಣೆಗೆಗ 266 ಈ ಪೈಕಿ 60 ಜನರಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ. ಶ್ವಾಸಕೋಶ ತಪಾಸಣೆಗೆ 141, ಸರ್ಜರಿ 85 ಜನ, ಎಲಬು, ಕೀಲು, ಮೂಳೆ ರೋಗಕ್ಕೆ ಸಂಬಂಧಪಟ್ಟಂತೆ 386, ಸ್ತ್ರೀ ರೋಗಕ್ಕೆ ಸಂಬಂಧಪಟ್ಟಂತೆ 238, ಕ್ಯಾನ್ಸರಗೆ ಸಂಬಂಧಪಟ್ಟಂತೆ 91, ದಂತ ರೋಗಕ್ಕೆ ಸಂಬಂಧಪಟ್ಟಂತೆ 151, ಮಕ್ಕಳ ರೋಗಕ್ಕೆ ಸಂಬಂಧಪಟ್ಟಂತೆ 96, ಕಿವಿ, ಮೂಗು, ಗಂಟಲು ಬೇನೆಗೆ ಸಂಬಂಧಪಟ್ಟಂತೆ 183 ರೋಗಿಗಳು ತಜ್ಞವೈದ್ಯರಿಂದ ತಪಾಸಣೆಗೆ ಒಳಗಾದರು.

        ಇದೇ ಸಂದರ್ಭದಲ್ಲಿ 158 ಜನ ಅಲ್ಟ್ರಾಸೌಂಡ್, 355 ಜನ ರಕ್ತ ಪರೀಕ್ಷೆಗೆ ಒಳಗಾದರೆ, 271 ಜನ ಸಿಟಿ ಸ್ಕ್ಯಾನ್ ತಪಾಸಣೆ ಸೌಲಭ್ಯ ಪಡೆದುಕೊಂಡರು. 47 ಜನರು ಶಿಬಿರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

         ಮಾಹಿತಿ ಮಳಿಗೆ: ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆರೋಗ್ಯ, ಸಿರಿಧಾನ್ಯ, ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳನ್ನು ತೆರೆಯಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link