ಬರಗಾಲದಲ್ಲಿ ರಾಜ್ಯದ ಜನತೆಯ ಆರೋಗ್ಯ ಮರೆತು ರೆಸಾರ್ಟ್‍ನಲ್ಲಿ ಸಿಎಂ ವಿಶ್ರಾಂತಿ: ಆರ್ ಅಶೋಕ

ಚಿಂಚೋಳಿ

     ಬರಗಾಲದಿಂದ ತತ್ತರಿಸುತ್ತಿರುವ, ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ ಜನರ ಆರೋಗ್ಯ ವಿಚಾರಿಸುವ ಬದಲು ರಾಜ್ಯದ ಮುಖ್ಯಮಂತ್ರಿಗಳು ರೆಸಾರ್ಟ್‍ನಲ್ಲಿ ವಿಶ್ರಾಂತಿ ತಗೆದುಕೊಳ್ಳಿತ್ತಿದ್ದಾರೆ. ಅಲ್ಲದೆ, ಅವರ ಮಂತ್ರಿಗಳು ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರ್ ಅಶೋಕ ವಾಗ್ದಾಳಿ ನಡೆಸಿದ್ದಾರೆ.

     ಚಿಂಚೋಳಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಡಾ ಅವಿನಾಶ್ ಜಾಧವ್ ಪರ ಪ್ರಚಾರ ನಡೆಸಿದ ಅವರು, ಉಮೇಶ್ ಜಾಧವ್ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, 22 ಲೋಕಸಭಾ ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದೇವೆ ಎಂದರು.

      ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿದೆ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲರೂ ಬ್ಯೂಸಿ ಇದ್ದರು. ಆದರೆ ಈಗ ಅವಕಾಶ ಇದ್ದರೂ ಬರ ನಿರ್ವಹಣೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ಸಚಿವರು ಚಿಂಚೋಳಿಗೆ ಬಂದು ಕುಳಿತಿದ್ದಾರೆ. ಕಳೆದ 6 ತಿಂಗಳ ಹಿಂದಿನಿಂದ ಬರ ನಿರ್ವಹಣೆಗೆ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಆದರೆ, ಯಾವುದೇ ತಯಾರಿ ನಡೆಸದೆ ಈಗ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರದ ಮೇಲೆ ಬೆರಳು ತೋರಿಸುತ್ತಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ. ನಿಮಗೆ ಕೆಲಸ ಮಾಡಲಾಗದೆ ಕೇಂದ್ರದ ವಿರುದ್ದ ಬೆರಳು ತೋರಿಸುವಲ್ಲಿ ನಿಸ್ಸೀಮರಾಗಿದ್ದೀರಿ ಎಂದು ಹೇಳಿದರು.

    ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಮುಖ್ಯಮಂತ್ರಿಗಳು ರೆಸಾರ್ಟ್‍ನಲ್ಲಿಯೇ ವಿಶ್ರಾಂತಿ ತಗೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಯ ಆರೋಗ್ಯ ವಿಚಾರಿಸುವುದರ ಬದಲಾಗಿ ರೆಸಾರ್ಟ್ ವಾಸಕ್ಕೆ ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

     ಸಿದ್ದರಾಮಯ್ಯ ನೇತೃತ್ವದ ಸಮ್ಮಿಶ್ರ ಸರಕಾರದ ಜಗಳ ಬೀದಿ ರಂಪಾಟವಾಗಿದೆ. ಚುನಾವಣೆ ಆಗುವವರೆಗೂ ಸುಮ್ಮನಿದ್ದ ಸಿದ್ದರಾಮಯ್ಯ ಬೆಂಬಲಿಗರು ಈಗ ನಾಟಕದ ಗೊಂಬೆಗಳಂತೆ ಒಬ್ಬೊಬ್ಬರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಿದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಟೈಬಾಂಬ್ ಫಿಕ್ಸ್ ಆಗಿರುವುದು ಕಂಡುಬರುತ್ತಿದೆ. ಏಕಾಏಕಿ ಮುಖ್ಯಮಂತ್ರಿ ವಿಷಯ ಯಾಕೆ ಬಂತು.

      ಮದ್ಯಂತರ ಚುನಾವಣೆ ಸಿದ್ದವಾ ಎಂದು ಚೆಲುವನಾರಾಯಣಸ್ವಾಮಿ ಬಿಜೆಪಿಗೆ ಸವಾಲ್ ಹಾಕುತ್ತಾರೆ. ನಾವು ಅವರಿಗೆ ಪ್ರತಿಸವಾಲ್ ಹಾಕುತ್ತಿದ್ದೇವೆ. ಧೈರ್ಯ ಇದ್ದರೆ ಮೊದಲು ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯಲಿ. ಚುನಾವಣೆಗೆ ಬಿಜೆಪಿ ಎಂದೂ ಹೆದರಿಲ್ಲ. ರಾಜ್ಯ ಸರಕಾರದ ಆಯುಷ್ಯ ಸಿದ್ದರಾಮಯ್ಯ ಕೈಯಲ್ಲಿ ಇದೆ. ಧೈರ್ಯ ಇದ್ದರೆ ಬೆಂಬಲ ವಾಪಾಸ್ ತಗೆದುಕೊಂಡು ಸವಾಲು ಹಾಕಿ. ನಾವು ಆಗ ಉತ್ತರ ನೀಡುತ್ತೇವೆ.

      ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ರಚನೆಯಾದ ಬಳಿಕವಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಬದಲಾಗಲಿದೆ. ಕೇಂದ್ರದಿಂದ ತಾಲ್ಲೂಕು ಮಟ್ಟದಲ್ಲಿ ಕೂಡಾ ಬದಲಾವಣೆ ಆಗಬೇಕು. ಇದಕ್ಕೆ ತುರಾತುರಿ ಏನು ಇಲ್ಲ. ಈ ಪ್ರಕ್ರಿಯೆ ನಿಧಾನವಾಗಿ ನಡೆಯಲಿದೆ. ಉತ್ತರ, ದಕ್ಷಿಣ ಎನ್ನುವುದು ಏನೂ ಇಲ್ಲ, ಇಡೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವವರು ರಾಜ್ಯಾಧ್ಯಕ್ಷರಾಗುತ್ತಾರೆ ಎಂದರು.

    ಉಮೇಶ್ ಜಾಧವ್ ಅವರು ಹಣಕ್ಕಾಗಿ ಬಿಜೆಪಿ ಸೇರ್ಪಡೆ ಆಗಿದ್ದಾರೆ ಎನ್ನುವುದು ಕಾಂಗ್ರೆಸ್ ಮುಖಂಡರುಗಳ ಹೇಳಿಕೆ ಅಷ್ಟೇ. ಹಣ ಹೆಂಡ ಹಂಚೋ ಸಂಸ್ಕøತಿಯನ್ನು ಕಲಿಸಿದ್ದೇ ಕಾಂಗ್ರೆಸ್. ಜಾಧವ್ ಹಣಕ್ಕಾಗಿ ಸೇಲ್ ಆಗುವವರಲ್ಲಾ. ಕಾಂಗ್ರೆಸ್ ಪಕ್ಷದಲ್ಲಿನ ಕಿರುಕುಳ, ಖರ್ಗೇ ಅವರ ಆಟಾಟೋಪಕ್ಕೆ ಬೇಸರಗೊಂಡು ಪಕ್ಷವನ್ನು ತೊರೆದಿದ್ದಾರೆ. ಬಿಜೆಪಿಯಲ್ಲಿ ಹಣವನ್ನು ಕೊಡುವ ಸಂಸ್ಕತಿ ಇಲ್ಲ ಎಂದು ಹೇಳಿದರು.

        ಸರಕಾರವನ್ನು ಬೀಳಿಸುವವರು ಈಗಾಗಲೇ ಬೀದಿಗೆ ಬಂದಿದ್ದಾರೆ. ಅವರ ನಾಟಕ ಮುಗಿದ ಮೇಲೆ ನಾವು ಪಾತ್ರ ಮಾಡುತ್ತೇವೆ. ನಾವೇನು ಸನ್ಯಾಸಿಗಳೇನು ಅಲ್ಲ. ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಒಲವು ಇದ್ದು ಬಹುಮತದಿಂದ ಗೆಲವು ಸಾಧಿಸಲಿದ್ದಾರೆ ಎಂದರು ಪತ್ರಿಕಾಗೋಷ್ಟಿಯಲ್ಲಿ ಎನ್ ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap