ದಾವಣಗೆರೆ:
ಭಾರತದ ಸೈನಿಕರು ಪಾಪಿಸ್ತಾನದ ದಾಳಿಗೆ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿರುವುದು ದೇಶದ 130 ಕೋಟಿ ಭಾರತೀಯರ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಸಸೇ ರಾಜ್ಯ ಗೌರವಾಧ್ಯಕ್ಷ ಡಿ. ಬಸವರಾಜ್ ಅಭಿಪ್ರಾಯಪಟ್ಟರು.ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಕರ್ನಾಟಕ ಸಮರ ಸೇನೆ ಹಮ್ಮಿಕೊಂಡಿದ್ದ ‘ಏಕತೆಯ ಶಕ್ತಿಯಾಗಿ ಪ್ರಬಲ ಭಾರತ’ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಗ್ರರ ಅಡುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿ, ಉಗ್ರರ ಸಂಹಾರ ಮಾಡಿರುವುದು ಭಾರತೀರ ಗೆಲುವು ಆಗಿದೆ.
ಇದನ್ನು ಯಾವುದೇ ಕಾರಣಕ್ಕೂ ರಾಜಕೀಯಕರಣಗೊಳಿಸಬಾರದು ಎಂದು ಸಲಹೆ ನೀಡಿದರು.ಸೈನಿಕರ ಗೆಲುವನ್ನು ಯಾವುದೋ ಪಕ್ಷದ ಗೆಲುವೆಂಬಂತೆ ವಿಜೃಂಭಿಸಲಾಗುತ್ತಿದೆ. ಇದು ಸರಿಯಲ್ಲ. ದೇಶದ ವಿಚಾರ ಬಂದಾಗ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ, ಸೈನಿಕರ ಪರ ನಿಲ್ಲಬೇಕು. ಈ ಹಿಂದೆ ನೆಹರು ಪ್ರಧಾನಿಯಾದಾಗಲೂ ಪಾಕಿಸ್ತಾನ ಸೋಲಿಸಿದ್ದೇವೆ, ಇಂದಿರಾಗಾಂಧಿ ಇದ್ದಾಗಲೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಇದೀಗ ಮೋದಿ ಸಹ ಅದನ್ನೇ ಮಾಡಿದ್ದಾರೆ. ಉಗ್ರರನ್ನು ಸೆದೆ ಬಡೆದಿರುವುದು ಸೈನಿಕರೇ ಹೊರತು, ಯಾವುದೋ ಪಕ್ಷದ ಕಾರ್ಯಕತ್ರಲ್ಲ ಎಂಬುದನ್ನು ಮೊದಲು ಅರಿಯಬೇಕೆಂದು ಹೇಳಿದರು.
ಉಕ್ಕಿನ ಮಹಿಳೆ ಇಂದಿರಾಗಾಂಧಿ 1971ರಲ್ಲಿ ಯುದ್ದ ಪ್ರದೇಶಕ್ಕೆ ತೆರಳಿ ನಮ್ಮ ಸೈನಿಕರಿಗೆ ಬಲತುಂಬಿದ್ದರು. ಆದರೆ, ಅವರ್ಯಾರೂ ಯುದ್ದದ ಗೆಲವನ್ನು ಪಕ್ಷದ ಗೆಲವೆಂಬಂತೆ ಸಂಭ್ರಮಿಸದೇ ದೇಶದ ಗೆಲುವೆಂದು ಬೀಗಿದ್ದರು ಎಂದು ಸ್ಮರಿಸಿದರು.
ಭಾರತೀಯ ಸೈನಿಕರು ಪಾಕಿಸ್ತಾನ ಗಡಿಯ ಸುಮಾರು 80 ಕಿ.ಮೀ ಒಳನುಗ್ಗಿ 300ಕ್ಕೂ ಅಧಿಕ ಉಗ್ರರನ್ನು ಎಡೆಮುರಿಕಟ್ಟಿದ್ದು 4 ಲಕ್ಷ ಪಾಕಿಸ್ತಾನಿ ಸೈನಿಕರನ್ನು ಕೊಂದದ್ದಕ್ಕೆ ಸಮವಾಗಿದೆ.
ಏಕೆಂದರೆ, ಇವರೆಲ್ಲರೂ ಅತ್ಯಂತ ಅಪಾಯಕಾರಿಯಾದ ಮಾನವಬಾಂಬ್ ಉಗ್ರರು. ಆದ್ದರಿಂದ ನಾವು ಯುದ್ದಕ್ಕೆ ಹೋಗದಿದ್ದರೂ ಹೋದಂತಹ ವೀರಸೈನಿಕರಿಗೆ ಬೆಂಬಲಿಸಿ, ಬಲ ತುಂಬಬೇಕಿದೆ ಎಂದ ಅವರು, ದೇಶದ ವಿಚಾರ ಬಂದಾಗ ಕರ್ನಾಟಕ ಸಮರ ಸೇನೆ ಸಮರಕ್ಕೂ ಸಿದ್ಧಗೊಳ್ಳಬೇಕು. ಈ ನಿಟ್ಟಿನಲ್ಲಿ ಉತ್ತಮ ವಿಚಾರ ಮಂಥನ ಹಮ್ಮಿಕೊಂಡಿರುವುದು ಶ್ಲಾಘನೀಯವೆಂದರು.
ಬೆಳಗಾವಿ ಪತ್ರೆಮಠದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾಕಿಸ್ತಾನಿ ಉಗ್ರರು ಎಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಇಡೀ ವಿಶ್ವವನ್ನೇ ನಿಯಂತ್ರಿಸುವ ಹುನ್ನಾರ ನಡೆಸುತ್ತಿದ್ದಾರೆ. ಆದರೆ, ಅದೆಂದಿಗೂ ಸಾಧ್ಯವಿಲ್ಲ. ಭಾರತದ 130 ಕೋಟಿ ಜನತೆ ಸಿಟ್ಟಿಗೆದ್ದರೆ ಮುಂದಾಗುವ ಅನಾಹುತ ಊಹಿಸಲು ಸಾಧ್ಯವಾಗಷ್ಟು ಘೋರವಾಗಿರುತ್ತದೆ. ಭಾರತೀಯರು ಶಾಂತಿಪ್ರೀಯರು. ಆದರೆ, ಭಾರತ ನಮ್ಮ ಹೆತ್ತ ತಾಯಿ. ತಾಯಿಗೆ ತೊಂದರೆ ಕೊಡಲು ಯತ್ನಿಸಿದರೆ ಮಕ್ಕಳಾದ ನಾವು ಸಹಿಸಲು ಸಾಧ್ಯವೇ ಇಲ್ಲ ಎಂಬುದನ್ನು ಪಾಪಿಸ್ತಾನ ಇನ್ನಾದರೂ ಅರಿಯಲಿ ಎಂದು ಎಚ್ಚರಿಸಿದರು.
ಕಸಸೇ ರಾಜ್ಯ ಕಾರ್ಯಾಧ್ಯಕ್ಷ ಬಿ. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಕಸಸೇ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಕದರಮಂಡಲಗಿ, ಉಪಾಧ್ಯಕ್ಷೆ ವೈ. ಭಾಗ್ಯದೇವಿ, ಜಿಲ್ಲಾಧ್ಯಕ್ಷ ಯೋಗೀಶ್, ಉಮಾ, ವಿಜಯ್ ಜಾಧವ್ ಮತ್ತಿತರರಿದ್ದರು.ಕಸಸೇ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂದೂರು ಪರಮೇಶ್ವರಪ್ಪ ಪ್ರಾಸ್ಥಾವಿಕ ಮಾತನಾಡಿದರು. ಮಂಜುಳಾ ಸ್ವಾಗತಿಸಿದರು. ಅನ್ನಪೂರ್ಣೆಶ್ವರಿ ಪ್ರಾರ್ಥಿಸಿದರು. ರಾಜ್ಯ ವಕ್ತಾರೆ ವಿದ್ಯಾರಾಣಿ ಗಡದ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
