ಬ್ಯಾಡಗಿ:
ಸ್ಥಳೀಯ ಪುರಸಭೆಯ ಹಾಲಿ ಅಧ್ಯಕ್ಷ ಬಸವರಾಜ ಛತ್ರದ ಬುಧವಾರ ತಮ್ಮ ಸ್ಥಾನಕ್ಕೆ ದಿಡೀರ್ ರಾಜೀನಾಮೆ ಸಲ್ಲಿಸಿದರು.
ಬಿಜೆಪಿಯ ಹೈಕಮಾಂಡ್ ನಿರ್ದೇಶನದಂತೆ ಹಾವೇರಿ ಉಪವಿಭಾಗಾಧಿಕಾರಿಗಳ ಕಛೇರಿಗೆ ಅವರ ಬೆಂಬಲಿಗ ಸದಸ್ಯರೊಂದಿಗೆ ತೆರಳಿದ ಬಸವರಾಜ ಛತ್ರದ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 2019 ರ ಮಾರ್ಚ 6 ಕ್ಕೆ ಅವಧಿ ಪೂರ್ಣಗೊಳ್ಳಲಿದೆಯಾದರೂ ಬಸವರಾಜ ಛತ್ರದ ರಾಜೀನಾಮೆ ಸಾರ್ವಜನಿಕ ವಲಯದಲ್ಲಿ ಅಚ್ಚರಿಯ ಬೆಳವಣಿಗೆ ಮೂಡಿಸಿದೆ.
ವಿರೋಧದ ನಡುವೆಯೂ ರಾಜಿನಾಮೆ: ಕಳದೆರಡು ವರ್ಷಗಳಿಂದ ಪುರಸಭೆ ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿಕೊಂಡು ಬಂದಿದ್ದ ಬಸವರಾಜ ಛತ್ರದ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಸಲ್ಲಿಸದಂತೆಯೂ ಮತ್ತು ಇದೀಗ ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಮುರಿಗೆಪ್ಪ ಶೆಟ್ಟರ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕೆ ಕೂರಿಸದಂತೆ ಸಾರ್ವಜನಿಕರು ಸೇರಿದಂತೆ ಪುರಸಭೆಯ ಬಹತೇಕ ಸದಸ್ಯರು ಬಹಿರಂವಾಗಿಯೇ ಒತ್ತಾಯಿಸಿದ್ದರು, ಆದಾಗ್ಯೂ ಹೈಕಮಾಂಡ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿರುವುದು ರಾಜಕೀಯ ಚರ್ಚೆಗಳಿಗೆ ಗ್ರಾಸವಾಗಿದೆ.
ಒತ್ತಡಕ್ಕೆ ಮಣಿದ ಹೈಕಮಾಂಡ್: ಲೋಕಸಭೆ ಹಾಗೂ ಪುರಸಭೆ ಚುನಾವಣೆಗಳ ಹೊಸ್ತಿಲಲ್ಲಿ ಅಧ್ಯಕ್ಷರ ರಾಜೀನಾಮೆ ವಿಷಯ ಹೈಕಮಾಂಡ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು ಎಂದು ಹೇಳಲಾಗುತ್ತಿದೆ, ಬಿಜೆಪಿ ಹಿರಿಯ ಸದಸ್ಯನಾಗಿ ಒಂದು ಬಾರಿಯಾದರೂ ನನ್ನನ್ನು ಪುರಸಭೆ ಅಧ್ಯಕ್ಷನನ್ನಾಗಿ ಮಾಡುವಂತೆ ಪದೇಪದೇ ಒತ್ತಡ ಹೇರಿದ್ದರಿಂದ ಒತ್ತಡಕ್ಕೆ ಮಣಿದ ಹೈಕಮಾಂಡ್ ಒಲ್ಲದ ಮನಸ್ಸಿನಿಂದಲೇ ಬಸವರಾಜ ಛತ್ರದ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.
ಶೆಟ್ಟರ ಆಯ್ಕೆ ಸುಲಭವಲ್ಲ: ಸದ್ಯ ಪುರಸಭೆಯಲ್ಲಿ ಬಿಜೆಪಿ 18 ಸದಸ್ಯ ಬಲವನ್ನು ಹೊಂದಿದೆಯಾದರೂ, ಕಳೆದ ವಿಧಾನಸಭೆ ಚುನಾವಣೆ ಬಳಿಕ ಎಲ್ಲರೂ ಒಗ್ಗಟ್ಟಾಗಿಲ್ಲ, ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ ಪಾಳಯದಲ್ಲಿ ಗುರ್ತಿಸಿಕೊಂಡಿದ್ದು ಇದೀಗ ಗುಟ್ಟಾಗಿ ಉಳಿದಿಲ್ಲ, ಅಷ್ಟೇ ಏಕೆ ಸಡ್ಡು ಹೊಡೆದು ಕಾಂಗ್ರೆಸ್ ಅಭ್ಯರ್ಥಿಯ ಪರ ಬಹಿರಂಗ ಪ್ರಚಾರ ಕೂಡ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು, ಸಾರ್ವಜನಿಕರ ವಿರೋಧ ಸೇರಿದಂತೆ ವಿವಾದಗಳನ್ನು ಸುತ್ತಿಕೊಂಡಿರುವ ಮುರಿಗೆಪ್ಪ ಶೆಟ್ಟರ ಆಯ್ಕೆ ಈ ಹಂತದಲ್ಲಿ ಸುಲಭವಲ್ಲ ಎಂದು ಹೆಸರು ಹೇಳಲಿಚ್ಚಿಸದ ಸದಸ್ಯರೊಬ್ಬರ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ