ಪ್ರಸ್ತುತ ಮಾರಾಟದ ಸರಕಾಗುತ್ತಿರುವ ಪ್ರಶಸ್ತಿ

ದಾವಣಗೆರೆ:

      ಪ್ರಸ್ತುತ ಪ್ರಶಸ್ತಿಗಳು ಮಾರಾಟದ ಸರಕಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಗದಗಿನ ತೋಂಟದಾರ್ಯ ಮಠದ ಶ್ರೀಮಹಾಂತ ದೇವರು ವಿಷಾಧ ವ್ಯಕ್ತಪಡಿಸಿದರು.

       ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಜೆ.ಹೆಚ್. ಪಟೇಲ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸಮಾಜವಾದಿ ಜೆ.ಹೆಚ್.ಪಟೇಲ್ ಪ್ರಶಸ್ತಿ ಪ್ರದಾನ ಹಾಗೂ ಯಂಗ್ ಸ್ಪ್ರಿಂಗ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ನಿಜವಾಗಿಯೂ ಸೇವೆ ಮಾಡುವವರಿಗೆ ದಕ್ಕುತ್ತಿಲ್ಲ. ಬದಲಿಗೆ ಕೇವಲ ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಬಲವಾಗಿರುವವರ ಪಾಲಾಗುತ್ತಿವೆ. ಹಣ ನೀಡಿ ಪ್ರಶಸ್ತಿ ಹಾಗೂ ಡಾಕ್ಟರೇಟ್‍ಗಳನ್ನು ಪಡೆಯುತ್ತಿದ್ದು, ಇಂದು ಪ್ರಶಸ್ತಿಗಳು ಸಹ ಮಾರಾಟದ ಸರಕಾಗುತ್ತಿರುವುದು ವಿಷಾಧನೀಯ ಎಂದರು.

        ಯಾವುದೇ ಪ್ರಶಸ್ತಿಗಳು ಪಾರದರ್ಶಕವಾಗಿರಬೇಕು. ಪ್ರಶಸ್ತಿ ಪಡೆದವರನ್ನು ಇವರು ಯಾವ ಸಾಧನೆ ಮಾಡಿ, ಪ್ರಶಸ್ತಿ ಪಡೆದರು ಎಂಬುದಾಗಿ ಹೀಯಾಳಿಸುವಂತಿರಬಾರದು ಎಂದು ಹೇಳಿದರು.

         ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 58 ಕೋಟಿ ಮಂದಿ ಯುವಕರಿದ್ದು, ಇವರೇ ದೇಶದ ಸುಪ್ರೀಂ ಪವರ್ ಆಗಿದ್ದಾರೆ. ದೇಶದ ಸಮಸ್ಯೆಯನ್ನು ಅರಿತು ಅಭಿವೃದ್ಧಿ ಪಥದಲ್ಲಿ ಕೊಂಡ್ಡೊಯ್ಯುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದರು.

       ವಿದ್ಯಾರ್ಥಿ ಜೀವನ ಜ್ಞಾನದ ಜೀವನವಾಗಬೇಕು. ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು ಹೇಳಿದಂತೆ ವಿದ್ಯಾರ್ಥಿ-ಯುವಜನರು ದಿನಕ್ಕೊಂದು ಕನಸು ಕಾಣುವುದನ್ನು ಬಿಟ್ಟು, ಜೀವನದಲ್ಲಿ ಉಧಾತ್ತವಾಗಿರುವಂತಹ ಒಂದೇ ಕನಸು ಕಾಣಬೇಕು. ಆ ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಗಳಾಗಬೇಕೆಂದು ಕರೆ ನೀಡಿದರು.

          ಇಡೀ ಜಗತ್ತು ನಿಮ್ಮ ಕಡೆಗೆ ತಿರುಗಿ ನೋಡುವಂತಹ ಕನಸು ಕಾಣಬೇಕು. ಕಂಡ ಕನಸ್ಸಿನೊಳಗೇ ಮೈಮರೆತು ಮಲಗದೇ ಆ ಕನಸು ನನಸು ಮಾಡಲು ಸತತವಾಗಿ ಪರಿಶ್ರಮ ಪಡಬೇಕೆಂದು ಕಿವಿಮಾತು ಹೇಳಿದರು.

           ಕಾರ್ಯಕ್ರಮದಲ್ಲಿ ಬಾಲ್ಕಿ ಸಿದ್ದೇಶ್ವರ ಮಠದ ಶ್ರೀಸಿದ್ದರಾಮೇಶ್ವರ ಪಟ್ಟದದೇವರು, ಜೆ.ಹೆಚ್.ಪಟೇಲ್ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಹೆಚ್.ವಿಶ್ವನಾಥ್, ನಿರ್ದೇಶಕರುಗಳಾದ ಎಂ.ಗುರುಸಿದ್ದಸ್ವಾಮಿ, ಕಲಿವೀರ ಕಳ್ಳಿಮನಿ, ನಿವೃತ್ತ ಶಿಕ್ಷಣ ಸಂಯೋಜಕ ಎ.ಹೆಚ್.ವಿವೇಕಾನಂದಸ್ವಾಮಿ, ಯೂತ್ ಕ್ಲಬ್ ಅಧ್ಯಕ್ಷ ಆರ್.ಬಿ.ಹನುಮಂತಪ್ಪ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಎನ್.ಉಮೇಶ್ ಬಾಬು, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನಿ ಗಿರೀಶ್, ಕಾಲೇಜಿನ ಪ್ರಾಂಶುಪಾಲೆ ಪ್ರತಿಭಾ ಪಿ. ದೊಗ್ಗಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ದೊಗ್ಗಳ್ಳಿಗೌಡರ ಪುಟ್ಟರಾಜು ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap