ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

0
36

ಹರಿಹರ:

      ಮಹಿಳೆಯರು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿದರೆ ಮಾತ್ರ ಶೋಷಣೆಗೀಡಾಗುವ ಸಂದರ್ಭ ಬರುವುದಿಲ್ಲ ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶಾರಾದ ಸುಮಲತಾ ಬೆಣ್ಣೆಕಲ್ ಹೇಳಿದರು.

       ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಗುರುವಾರ ನಗರದ ಗಿರಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

        ಹೆಣ್ಣುಮಕ್ಕಳಾಗಿ ಹುಟ್ಟುವುದೆ ಒಂದು ವರದಾನ ಎನ್ನಲಾಗುತ್ತದೆ, ಆದರೆ ಅವಳಿಗೆ ಸಮಾಜದಲ್ಲಿ ಹೆಜ್ಜೆಹೆಜ್ಜೆಗೂ ಸವಾಲು, ಶೋಷಣೆಗಳು ಎದುರಾಗುತ್ತಿವೆ. ತಮಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಶಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದರು.

       ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನದ ಜೊತೆ ಕಾನೂನು ಅರಿವೂ ಸಹ ಅತಿ ಮುಖ್ಯವಾಗಿದೆ. ಕಾನೂನು ಜ್ಞಾನ ಇರದಿದ್ದರೆ ದುಷ್ಪ್ರೇರಣೆಗೊಳಗಾಗಿ ದಾರಿ ತಪ್ಪುವಂತಹ ಸಂಭವವೂ ಇರುತ್ತದೆ. ವಿದ್ಯಾರ್ಥಿನಿಯರು ಅವರವರ ಕುಟುಂಬಕ್ಕೆ ದೀಪವಿದ್ದಂತೆ, ದೀಪ ಮನೆಗೆ, ಸಮಾಜಕ್ಕೆ, ದೇಶಕ್ಕೆ ಬೆಳಕು ನೀಡುವಂತಾಗಬೇಕು ಎಂದು ಕರೆ ನೀಡಿದರು.

          ವಕೀಲರಾದ ಮಂಜಪ್ಪ ದೊಡ್ಡಮನಿ ಮಾನತಾಡಿ, ಹೆಣ್ಣು ಹುಟ್ಟಿದಂದಿನಿಂದಲೂ ಉತ್ತಮ ಬಾಲ್ಯ, ಶಿಕ್ಷಣ, ಆರೋಗ್ಯ ಸೌಕರ್ಯ ಎಲ್ಲವುಗಳಿಂದಲೂ ಹೆಣ್ಣು ವಂಚಿಸಲ್ಪಡುತ್ತಾಳೆ. ಭಾರತದ ಶೇ.45 ರಷ್ಟು ಹೆಣ್ಣುಮಕ್ಕಳು ಬಾಲ್ಯದಲ್ಲೇ ವಿವಾಹವಾಗುತ್ತಾರೆ. ಇದರಿಂದ ಆಕೆಗೆ ಸ್ವಂತ ವ್ಯಕ್ತಿತ್ವ, ಅಭಿಪ್ರಾಯ, ಸ್ವಾತಂತ್ರ್ಯವೇ ಇಲ್ಲದಾಗಿ ಜೀವನವೇ ಅಂಧಾಕಾರದಲ್ಲಿ ಮುಳುಗುತ್ತದೆ ಎಂದರು.

          ವಕೀಲರಾದ ಜಿ.ಹೆಚ್.ಭಾಗೀರಥಿ ಮಾತನಾಡಿ, ಎಳವೆಯಿಂದಲೇ ಹೆಣ್ಣುಮಕ್ಕಳಿಗೆ ಮನೆಗೆಲಸ ಮುಂತಾದ ಕೌಟುಂಬಿಕ ಜವಾಬ್ದಾರಿಗಳನ್ನು ನೀಡಿ ಸೀಮಿತಗೊಳಿಸಲಾಗುತ್ತಿದೆ. ಶಿಕ್ಷಣ, ತರಬೇತಿ ನೀಡುವಿಕೆಯಲ್ಲೂ ಪೋಷಕರು ಗಂಡು ಮಕ್ಕಳಿಗೆ ಆಧ್ಯತೆ ನೀಡಿ, ಹೆಣ್ಣು ಮಕ್ಕಳನ್ನು ಅವಕಾಶ ವಂಚಿತರನ್ನಾಗಿಸುತ್ತಾರೆ. ಇಂತಹ ಲಿಂಗ ತಾರತಮ್ಯ ತೊರೆದು ಹೆಣ್ಣುಮಕ್ಕಳನ್ನೂ ಸಮಾನವಾಗಿ ಕಾಣಬೇಕು ಎಂದರು.

         ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಹಲವಾರು ಮಹಿಳಾಪರ ಕಾನೂನು ಜಾರಿಯಾಗಿದ್ದರೂ ಸಮಾಜದಲ್ಲಿ ಈ ಬಗ್ಗೆ ಜಾಗೃತಿಯಿಲ್ಲ. ಶಿಕ್ಷಣದಂತೆ ಕಾನೂನು ಅರಿವು ಸಹ ಮಹತ್ವದ್ದಾಗಿದೆ. ಇತ್ತೀಚಿಗೆ ಸರ್ಕಾರಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಪಾರ ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗುವ ಜೊತೆಗೆ ಕುಟುಂಬಕ್ಕೆ, ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

          ಎಜಿಪಿ ಸಿ.ಚನ್ನಪ್ಪ ಮಾತನಾಡಿ, ಜಗತ್ತಿನಾಧ್ಯಂತ ಲಿಂಗದ ಕಾರಣಕ್ಕೆ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆ-ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು, ಅವುಗಳನ್ನು ನಿವಾರಿಸಲು ವಿಶ್ವಸಂಸ್ಥೆ ಅ.11ನ್ನು ಹೆಣ್ಣು ಮಗುವಿನ ದಿನವನ್ನಾಗಿ ಘೋಷಣೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಹೆಚ್.ಪ್ಯಾಟಿ ಮಾತನಾಡಿ, ಹೆಣ್ಣುಮಕ್ಕಳು ಕೀಳಿರಿಮೆ ತೊರೆದು ಆತ್ಮವಿಶ್ವಾಸದಿಂದ ಮುನ್ನೆಡೆಯಬೇಕು. ಓದು, ತರಬೇತಿ, ಸತತ ಪ್ರಯತ್ನ-ಪರಿಶ್ರಮದ ಮೂಲಕ ಮಹತ್ವದ್ದನ್ನು ಸಾಧಿಸುವ ಗುರಿ ಹೊಂದಬೇಕೆಂದು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here