ಹೊನ್ನಾಳಿ:
ಕಳೆದ 70 ವರ್ಷಗಳಿಂದ ದೇಶದಲ್ಲಿ 370ನೇ ವಿಧಿಯಡಿ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿ, ಆ ಮೂಲಕ ದೇಶವನ್ನೇ ಛಿದ್ರಗೊಳಿಸಿ ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ದುರಾಡಳಿತ ನಡೆಸಿದ ಕಾಂಗ್ರೆಸ್‍ನ ಪಾಪದ 370ನೇ ವಿಧಿಯನ್ನು ರದ್ದುಗೊಳಿಸುವ ಸಂಕಲ್ಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಮತ್ತೊಮ್ಮೆ ಜನತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಿ ದೇಶದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದೂರು ಜಿಪಂ ಕ್ಷೇತ್ರದ ನೇರಲಗುಂಡಿ ಗ್ರಾಮದಲ್ಲಿ ಬುಧವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಅವರ ಪರವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರೊಡನೆ ಮತಯಾಚಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಕಾಂಗ್ರೆಸ್ ಆಡಳಿತದಲ್ಲಿ ದೇಶವನ್ನು ಒಡೆದು ಆಳುವ ನೀತಿ ಅನುಸರಿಸಿ ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರಕ್ಕೆ 370ನೇ ವಿಧಿಯ ಪತ್ಯೇಕ ಸ್ಥಾನಮಾನ ನೀಡಿ ಕಾಂಗ್ರೆಸ್ ಜನತೆಗೆ ಮೋಸವೆಸಗಿದೆ. ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್‍ನವರಿಗೆ ಪ್ರಜಾಪ್ರಭುತ್ವ, ಸಂವಿಧಾನ ನೆನಪಾಗುತ್ತದೆ.
ಕಳೆದ 5 ವರ್ಷಗಳಿಂದ ದೇಶದ ಚಿತ್ರಣವನ್ನೇ ಬದಲಿಸಿ ಭಾರತದ ಕೀರ್ತಿಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂವಿಧಾನ ವಿರೋಧಿ ಎಂದು ಸಾರ್ವಜನಿಕ ಪ್ರಚಾರ ಭಾಷಣಗಳಲ್ಲಿ ಬೊಬ್ಬಿಡುತ್ತಿರುವ ಕಾಂಗ್ರೆಸ್‍ಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿದೆಯೇ ಎಂದು ಹರಿಹಾಯ್ದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸಿದ್ದೇಶ್ವರ ಇವರು ಯಾವುದೇ ಹಣ ಬಲ, ತೋಳ್ಬಲದಿಂದ ದರ್ಪ ತೋರಿಸಿದ ಉದಾರಣೆಗಳಿಲ್ಲ. ಕ್ಷೇತ್ರದ ಜನತೆ ಕಳೆದ 25 ವರ್ಷಗಳಿಂದ ಬಿಜೆಪಿ ಮೇಲೆ ಅಭಿಮಾನವಿಟ್ಟು, ಸಂಸದರ ಸರಳ, ಸಜ್ಜನಿಕೆಯ ಜನಪರ ಕಾರ್ಯಗಳನ್ನು ಪ್ರತ್ಯಕ್ಷ ಕಂಡು ಆರ್ಶೀರ್ವದಿಸುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರಿಯತೆ ಸಹಿಸಲಾಗದೇ ಕಾಂಗ್ರೆಸ್ ಮುಖಂಡರು ವಾಮಮಾರ್ಗದಿಂದ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಅಪಪ್ರಚಾರಗಳಿಗೆ ಕಿವಿಗೊಡುವಷ್ಟು ಮತದಾರರು ದಡ್ಡರಲ್ಲ.
ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ವಿಪಕ್ಷದವರು ಕ್ಷೇತ್ರ ಸುತ್ತಾಡಿ ಖುದ್ದು ವೀಕ್ಷಿಸಿ ಬಂದು ನಂತರ ಆಪಾದನೆ ಮಾಡಲಿ. ಹಳ್ಳಿಗಳಿಗೆ ಅಪರೂಪಕ್ಕೊಮ್ಮೆ ಆಗಮಿಸುವ ಕಾಂಗ್ರೆಸ್‍ನವರು ತಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬದ ಮುಂದಿನ ಭವಿಷ್ಯವೇನು ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಕುಟುಂಬ ರಾಜಕಾರಣಕ್ಕೆ ಹೆಸರಾದ ಜೆಡಿಎಸ್‍ನವರಿಗೆ ಈ ಬಾರಿ ಜನತೆ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಲಿ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ, ನೇರಲಗುಂಡಿ ಶ್ರೀಕಂಠಪ್ಪ, ರುದ್ರೇಶ್, ಹನುಮಂತಪ್ಪ, ಕುಮಾರ್, ಸೋಮಶೇಖರ್, ಯಕ್ಕನಹಳ್ಳಿ ನಾಗಣ್ಣ, ಜಗದೀಶ್, ಮಹಾದೇವಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ, ಯಕ್ಕನಹಳ್ಳಿ ಜಗದೀಶ್, ಕೆಂಗಲಹಳ್ಳಿ ಮಹೇಶಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು, ನೇರಲಗುಂಡಿ ಗ್ರಾಮಸ್ಥರು ಉಪಸ್ಥಿತರಿದ್ದರು.ತಾಲೂಕಿನ ಬೇವಿನಹಳ್ಳಿ, ತಿಮ್ಲಾಪುರ, ಹನುಮನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ, ಕುಂದೂರು, ಕುಂಬಳೂರು ಮುಂತಾದ ಗ್ರಾಮಗಳಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಜಿ.ಎಂ. ಸಿದ್ಧೇಶ್ವರ್ ಪರ ಮತಯಾಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
