ಶಿರಾ:
ದೇಶದಲ್ಲಿ ನಮ್ಮ ದೇಶದ ಮಹತ್ವವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ದೇಶದ ಹಿತ ಚಿಂತನೆಯ ದೃಷ್ಠಿಯಿಂದ ನಾವು ಕೈಗೊಳ್ಳುವ ಯಾವುದೇ ಕಾರ್ಯಕ್ರಮಗಳಲ್ಲಿ ಶ್ರದ್ಧೆ, ಭಕ್ತಿಗಳಿರಬೇಕು. ರಾಮಕೃಷ್ಣ ಮಠಗಳು ನಿರಂತರವಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರಿಂದಾಗಿ ಇಂತಹ ಮಠಗಳು ದೇಶದಲ್ಲಿ ಇರುವವರೆಗೂ ನಮ್ಮ ದೇಶಕ್ಕೆ ಯಾವುದೇ ಆಪತ್ತು ಬರಲು ಸಾದ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಡಾ.ಎಂ.ಎನ್.ವೆಂಕಟಾಚಲಯ್ಯ ತಿಳಿಸಿದರು.
ಶಿರಾ-ಚಂಗಾವರ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಕೃಷ್ಣ-ವಿವೇಕಾನಂದಾಶ್ರಮದ ಪ್ರಾರ್ಥನಾ ಮಂದಿರ, ಸಾಧು ನಿವಾಸ ಕಟ್ಟಡಗಳ ಭೂಮಿ ಪೂಜೆ ಹಾಗೂ ಜೀವಂತ ದುರ್ಗಾಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ನಡೆಯುವ ಕುಂಭಮೇಳಗಳಂತಹ ದೈವೀ ಕಾರ್ಯಕ್ರಮಗಳಲ್ಲಿ ನಾನು ಪ್ರತಿ ವರ್ಷವೂ ಪಾಲ್ಗೊಳ್ಳುತ್ತಿದ್ದೆ. ಅನಾರೋಗ್ಯದ ಕಾರಣ ಹಾಗೂ ವೈದ್ಯರ ಸಲಹೆ ಮೇರೆಗೆ ಈ ವರ್ಷ ಭಾಗವಹಿಸಲಾಗಲಿಲ್ಲ. ಭಾರತದ ಸಾಂಸ್ಕøತಿಕ ಪರಂಪರೆಯನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳಲ್ಲಿ ಕುಂಭಮೇಳವೂ ಒಂದಾಗಿದೆ. ಕಳೆದ 40 ವರ್ಷಗಳಿಂದಲೂ ನಾನು ರಾಮಕೃಷ್ಣ ಮಠಗಳ ನಿರಂತರ ಸಂಪರ್ಕದಲ್ಲಿದ್ದೇನೆ.
ದೇಶದಲ್ಲಿನ ವೈವಾಹಿಕ ಪದ್ಧತಿ, ಸಾಮಾಜಿಕ ಸೇವೆ, ಕುಟುಂಬಗಳು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳೂ ಬದಲಾಗುತ್ತಿರುವಾಗ ಮನುಷ್ಯರಾದ ನಾವುಗಳು ಕೂಡಾ ಬದಲಾಗಲೇಬೇಕಿದೆ. ವ್ಯವಸ್ಥೆಗೂ ಒಂದು ಕಾಲಮಿತಿ ಇದ್ದು ವ್ಯವಸ್ಥೆಗಳು ಬದಲಾದಂತೆ ವ್ಯಕ್ತಿಯ ವ್ಯಕ್ತಿತ್ವಗಳು ಪಕ್ವವಾಗಿ ಬದಲಾಗಬೇಕು. ವ್ಯಕ್ತಿಯನ್ನು ಓರ್ವ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ರಾಮಕೃಷ್ಣ ಮಠಗಳ ಚಿಂತನೆಗಳಲ್ಲಿದೆ ಎಂದರು.
ರಾಜಕಾರಣ ಒಂದು ಅಫೀಮು ಇದ್ದಂತೆ. ಇದಕ್ಕೆ ಜೋತು ಬಿದ್ದವರು ಅದರ ಹಿಂದೆಯೇ ಸಾಗುವುದು ಅನಿವಾರ್ಯವೂ ಆಗುತ್ತದೆ. ಶ್ರದ್ಧಾ, ಭಕ್ತಿಗಳೂ ಕೂಡಾ ವ್ಯಕ್ತಿಗೆ ಅಫೀಮಿನಂತಾಗಬೇಕು. ಅದರ ಹಿಂದೆ ನಿರಂತರವಾಗಿ ಸಾಗುವುದುರ ಜೊತೆಗೆ ಮಾನವೀಯ ಗುಣಗಳನ್ನು ಮೇಳೈಸಿಕೊಂಡವರು ಜೀವನದಲ್ಲಿ ಪುಟವಿಟ್ಟ ಚಿನ್ನದಂತಾಗುತ್ತಾರೆ ಎಂದರು.
ಖಾವಿ ಬಟ್ಟೆಯನ್ನು ಧರಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೊಂದು ವಿಶಿಷ್ಠ ಶಕ್ತಿಯೂ ಇದ್ದು ಅದಕ್ಕೆ ಹೊಸ ನಾಗರೀಕತೆಯನ್ನು ಸೃಷ್ಠಿ ಮಾಡುವ ಶಕ್ತಿ ಇದೆ. ಉತ್ತಮರನ್ನು ಗೌರವಿಸುವಂತಹ ಸಮಾಜಗಳು ಸೃಷ್ಠಿಯಾಗಬೇಕು. ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಅನ್ನುವುದು ಮುಖ್ಯವೇ ಹೊರತು ಸಮಾಜದಿಂದ ನಾವು ಏನನ್ನೂ ನಿರೀಕ್ಷಿಸಬಾರದು ಎಂದು ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಹೇಳಿದರು.
ಶಿರಾ ನಗರದಲ್ಲಿ ಪ್ರಪ್ರಥಮ ಬಾರಿಗೆ ರಾಮಕೃಷ್ಣ ಮಠದಿಂದ ನಡೆಯುತ್ತಿರುವ ಜೀವಂತ ದುರ್ಗಾಪೂಜಾ ಕಾರ್ಯಕ್ರಮದಿಂದ ಈ ಭಾಗದ ದೈವ ಸಂಕಲ್ಪಕ್ಕೆ ಪುಟವಿಟ್ಟಂತಾಗಿದೆ. ಸಾಕ್ಷಾತ್ ಶಾರದಾ ದೇವಿ ಆರಾಧನೆಯೇ ಇಲ್ಲಿ ನಡೆದಂತಿದೆ ಎಂದರು.
ಗದಗ-ವಿಜಾಪುರದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ನಾವೂ ಇದೀಗ ದೇಶಕಟ್ಟುವ ಯೋಚನೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ. ದೇಶವನ್ನು ಭದ್ರವಾಗಿ ಕಟ್ಟುವ ಆಸ್ಥೆ ನಮ್ಮಲ್ಲಿದ್ದಿದ್ದೇ ಆಗಿದ್ದರೆ ಇಷ್ಟೊತ್ತಿಗೆ ದೇಶದ ಸ್ಥಿತಿಯೇ ಬೇರೆ ಆಗುತ್ತಿತ್ತು. ಕೈಗಾರಿಕೆ, ಅಣೆಕಟ್ಟುಗಳು ಕೂಡಾ ಬೇಕು ನಿಜ ಆದರೆ ಅವುಗಳನ್ನು ಕಟ್ಟುವ ಮುನ್ನವೇ ವ್ಯಕ್ತಿಯ ವ್ಯಕ್ತಿತ್ವನ್ನು ಕಟ್ಟುವ ಕೆಲಸ ಮೊದಲಾಗಲಿಲ್ಲ ಎಂದರು.
ಜಪಾನ್ ದೇಶವು ಅನುಸರಿಸಿದ್ದು ಸಮರ್ಥ ವ್ಯಕ್ತಿಗಳನ್ನು. ಆ ದೇಶ ಮೊದಲು ಮಾಡಿದ್ದು ಮನುಷ್ಯರನ್ನು ಕಟ್ಟುವ ಕೆಲಸ. ಆದ್ದರಿಂದಲೇ ಆ ದೇಶ ಮುಂಚೂಣಿಯಲ್ಲಿರಲು ಸಾದ್ಯವಾಯಿತು. ಧರ್ಮದ ಹೆಸರಲ್ಲಿ
ಸಮಾಜವು ಹೊಗೆ ಬಿಟ್ಟುಕೊಳ್ಳುತ್ತಿದೆ. ಆ ಹೊಗೆ ಧರ್ಮದ ಹೆಸರಲ್ಲಿ ಭುಗಿಲಾಗುವುದು ಬೇಡಾ. ಅಂತಹ ಹೊಗೆ ತಣ್ಣಗಾಗುವಂತಾಗಬೇಕು. ದ್ವೇಷ, ಅಸೂಯೆಗಳು ಯಾರಲ್ಲೂ ಮೇಳೈಸಬಾರದು. ಧರ್ಮಗಳು ಉಳಿಯುವಂತಾಗಬೇಕು ಎಂದರು.
ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಮಹಾರಾಜ್ ಮಾತನಾಡಿ ಜಾತಿ, ಮತಗಳನ್ನು ದೂರಗೊಳಿಸುವ ಕೆಲಸ ಮೊದಲಾಗಬೇಕು.
ವಿವೇಕಾನಂದರ ಆದರ್ಶಗಳನ್ನು ಆರಂಭದಲ್ಲಿಯೇ ಮೈಗೂಡಿಸಿಕೊಂಡಿದ್ದರೆ ಇಷ್ಟೊತ್ತಿಗೆ ದೇಶದ ಸ್ಥಿತಿಯೇ ಬದಲಾಗುತ್ತಿತ್ತು. ಇಂದಿನ ಯುವ ಪೀಳಿಗೆಗೆ ವಿವೇಕಾಂದರ ಆದರ್ಶಗಳು, ಚಿಂತನೆಗಳ ಅಗತ್ಯವಿದ್ದು ಸರ್ಕಾರ ವಿವೇಕಾನಂದರ ಕೆಲ ಚಿಂತನೆಗಳನ್ನು ಪಠ್ಯಕ್ರಮದಲ್ಲಿ ಒಳಪಡಿಸಿಕೊಳ್ಳಲು ಸರ್ಕಾರ ಮನಸ್ಸು ಮಾಡಬೃಕಿದ್ದು ಈ ಬಗ್ಗೆ ಸರ್ಕಾರಕ್ಕೆ ಮನವಿ ಕೂಡಾ ಸಲ್ಲಿಸಲಾಗಿದೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಶಿರಾದಲ್ಲಿ ರಾಮಕೃಷ್ಣ ಮಠದ ಸ್ಥಾಪನೆ ನಮ್ಮ ಕಳೆದ 10 ವರ್ಷಗಳ ಬಯಕೆಯಾಗಿತ್ತು. ಸುಮಾರು ನಾಲ್ಕು ಎಕರೆ ಸರ್ಕಾರದ ಜಮೀನನ್ನು ಮಠಕ್ಕೆ ನಿಡಲಾಗಿದ್ದು ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯ ಹಾಗೂ ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ಮಠ ರೂಪುಗೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ತುಮಕೂರು ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಶಾಸಕ ಡಿ.ಆರ್.ಪಾಟೀಲ್, ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ಎಸ್.ಕೆ.ರಾಮಚಂದ್ರಗುಪ್ತ, ಶ್ರೀ ಯೋಗೇಶ್ವರ ನಂದಜೀ, ಶಾಂತಾ ನಂದಜೀ ಸೇರಿದಂತೆ ರಾಮಕೃಷ್ಣ ಮಠ-ಸ್ವಾಮಿ ವಿವೇಕಾನಂದ ಆಶ್ರಮದ ವಿವಿಧ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸುಮಾರು 100ಕ್ಕೂ ಹೆಚ್ಚು ಮಂದಿ ಅಶಕ್ತ ಮಹಿಳೆಯರನ್ನು ವೇದಿಕೆಯಲ್ಲಿ ಕೂರಿಸಿ ಜೀವಂತ ದುರ್ಗಾಪೂಜೆಯನ್ನು ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
