ಹೊಳಲ್ಕೆರೆಯಲ್ಲಿ ವಿಶೇಷ ಚಿಂತನಾಗೋಷ್ಠಿ

ಚಿತ್ರದುರ್ಗ :

     ಬರುವ ಶ್ರಾವಣಮಾಸದಲ್ಲಿ ವಿಶೇಷ ಚಿಂತನಗೋಷ್ಠಿಗಳನ್ನು ನಡೆಸುತ್ತ ನಮಗೆ ಮಾರ್ಗದರ್ಶನ, ಆತ್ಮಸ್ಥೆರ್ಯ ತುಂಬಬೇಕು ಎಂಬ ಮನವಿಯೊಂದಿಗೆ ಶ್ರೀಮಠಕ್ಕೆ ಆಗಮಿಸಿದ ಹೊಳಲ್ಕೆರೆ ತಾಲ್ಲೂಕಿನ ನೂರಾರು ಜನರ ಭಕ್ತ ಸಮೂಹಕ್ಕೆ ಶ್ರಾವಣಮಾಸದ 30 ದಿನಗಳೂ ವಿಶೇಷ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ನಡೆಸುವುದಾಗಿ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

      ಚಿತ್ರದುರ್ಗದ ಶ್ರೀ ಮುರುಘಾಮಠಕ್ಕೆ ಇಂದು ಆಗಮಿಸಿದ್ದ ಹೊಳಲ್ಕೆರೆ ತಾಲ್ಲೂಕಿನ ಹತ್ತಾರು ಹಳ್ಳಿಗಳ ಜನರ ಅಪೇಕ್ಷೆಯನ್ನು ಆಲಿಸಿದ ಶರಣರು, ಶ್ರೀಮಠವು ಉಜ್ವಲವಾದ ಪರಂಪರೆ, ಸಂಸ್ಕತಿ, ವೈಭವವನ್ನು ಹೊಂದಿದೆ. ಅಲ್ಲದೆ ಶ್ರೀಮಠವು ಹಲವಾರು ಸಮಾಜಮುಖಿ ಪ್ರಯೋಗಗಳನ್ನು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಇದು ಇನ್ನಿತರೆ ಮಠಗಳಿಗೆ ಪ್ರೇರಣೆ ಸ್ಫೂರ್ತಿಯನ್ನು ನೀಡುತ್ತಿದೆ. ಹೀಗೆ ಒಳ್ಳೆಯ ಕಾರ್ಯ ಮಾಡುತ್ತ ಪ್ರೇರಣೆ ನೀಡುವುದು ನಮ್ಮ ಸಮಕಾಲೀನ ಜವಾಬ್ದಾರಿಯೂ ಆಗಿದೆ ಎಂದು ಶರಣರು ಹೇಳಿದರು.

      ಹಾಗೆಯೇ ಈ ಹಿಂದೆ ನಡೆಸಿದಂತೆ ವಿವೇಕೋದಯ, ಶಿಕ್ಷಣ ಶ್ರಾವಣ, ಇನ್ನು ಹಲವು ಕಾರ್ಯಕ್ರಮಗಳಂತೆ ಈ ಬಾರಿಯು ಶ್ರಾವಣಕ್ಕೆ ಗ್ರಾಮೀಣ ಭಾಗಗಳಲ್ಲಿ ಚಿಂತನೆಯನ್ನು ನಡೆಸೋಣ. ಈ ಮೂಲಕ ಜನರನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ, ಸೈದ್ಧಾಂತಿಕವಾಗಿ ಜಾಗೃತಿಗೊಳಿಸುವುದೇ ನಮ್ಮ ಈ ಕಾರ್ಯಕ್ರಮದ ಆದ್ಯ ಕಾರ್ಯವಾಗಿರುತ್ತದೆ ಎಂದು ಶರಣರು ನುಡಿದರು.

      ಮಧ್ಯಕರ್ನಾಟಕಕ್ಕೆ ಸಂಪೂರ್ಣ ನೀರಾವರಿ ವ್ಯವಸ್ಥೆಯಾಗಬೇಕು. ಕೆರೆಗಳು ತುಂಬಬೇಕು. ರೈತರ ಬದುಕು ಹಸನಾಗಬೇಕು. ಅದಕ್ಕಾಗಿ ಶ್ರೀಮಠವು ಅವಿರತ ಹೋರಾಟ ಮಾಡುತ್ತಾ ಬರುತ್ತಿದೆ. ಇನ್ನು ಮುಂದೆ ದೊಡ್ಡ ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆಗೆ ಒತ್ತಾಯಿಸಿ ಹೋರಾಟ ಮಾಡುತ್ತ ಸರ್ಕಾರದ ಕಾರ್ಯವೈಖರಿಯನ್ನು ಚುರುಕುಗೊಳಿಸಲಾಗುವುದು ಎಂದರಲ್ಲದೆ, ಈ ವಿಚಾರವಾಗಿ ಈ ಬಾರಿಯ ಶರಣಸಂಸ್ಕತಿ ಉತ್ಸವದಲ್ಲಿ ವಿಶೇಷ ಚರ್ಚಾಗೋಷ್ಠಿಯನ್ನು ನಡೆಸಲಾಗುವುದು. ಇದಕ್ಕೆ ಕೇಂದ್ರ, ರಾಜ್ಯ ಸಚಿವರನ್ನು, ಇಲಾಖೆಯ ಪ್ರಮುಖ ಅಧಿಕಾರಿಗಳನ್ನು, ಜಿಲ್ಲೆಯ ಜನಪ್ರತಿನಿಧಿಗಳನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಮತ್ತು ಬೃಹತ್ ಸಂಖ್ಯೆಯಲ್ಲಿ ರೈತರನ್ನು ಕರೆಸಲಾಗುವುದು ಎಂದರು.

      ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಈ ವಿಶೇಷ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಹಳ್ಳಿಗರು ತಮ್ಮ ಸರದಿ ಬಂದಾಗ ಪೂರಕ ವ್ಯವಸ್ಥೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ನಡೆಸೋಣ. ಬಸವಾದಿ ಪ್ರಮಥರ ಸಂಸ್ಕತಿಯಂತೆ ಪ್ರಸಾದದ ವ್ಯವಸ್ಥೆಯನ್ನು ಮಾಡೋಣ. ಹಳ್ಳಿಗಳ ಎಲ್ಲವರ್ಗದ ಜನರು ಕೂಡಿಕೊಂಡು ಸಾಮೂಹಿಕವಾಗಿ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಗೊಳಿಸೋಣ. ಹಾಗೆಯೇ ಕೊನೇ ಕಾರ್ಯಕ್ರಮವನ್ನು ಹೊಳಲ್ಕೆರೆ ನಗರದಲ್ಲಿ ಅತ್ಯಂತ ವ್ಯವಸ್ಥಿತವಾಗಿಯೂ ನೆರವೇರಿಸೋಣ ಎಂದರು.

       ಭಕ್ತರ ಪರವಾಗಿ ನೆಲ್ಲಿಕಟ್ಟಿ ಲವಕುಮಾರ್ ಮಾತನಾಡಿ, ಹಳ್ಳಿಗರ ಜೀವನ ಅತ್ಯಂತ ದುಸ್ತರವಾಗಿ ಜನರು ಮಾನಸಿಕವಾಗಿ ಕುಗ್ಗಿದ್ದಾರೆ. ಶರಣರ ಆಗಮನದಿಂದ ಸ್ಥೈರ್ಯ ಖಂಡಿತವಾಗಿಯೂ ಹೆಚ್ಚುತ್ತದೆ. ಈ ಮೂಲಕ ನಮ್ಮ ಸಂಸ್ಕತಿ ಮತ್ತು ಸಂಸ್ಕಾರವನ್ನು ಹೆಚ್ಚಿಸಿಕೊಳ್ಳೋಣ ಎಂದರು. ಎಂ.ಎಂ.ರಾಜಣ್ಣ ಮಾತನಾಡುತ್ತ, ನಮ್ಮ ಹಳ್ಳಿಗಳಿಗೆ ಮುರುಘಾ ಶರಣರು ಬರುವುದೇ ನಮಗೆ ಹೆಮ್ಮೆ. ನಮ್ಮ ಹಳ್ಳಿಗಳಲ್ಲಿ ಜನರಿಗೆ ಕಷ್ಟವಿದೆ ನಿಜ. ಆದರೂ ಎಲ್ಲರೂ ಒಟ್ಟಾಗಿ ಸೇರಿ ಶರಣರನ್ನು ಆಹ್ವಾನಿಸೋಣ. ಅವರ ಚಿಂತನೆಗಳನ್ನು ಕೇಳೋಣ. ಈಗಲೂ ನಮ್ಮ ಹಳ್ಳಿಗರಿಗೆ ಮುರುಘಾ ಶರಣರ ಚಿಂತನೆಗಳನ್ನು ಕೇಳಬೇಕೆಂಬ ಹಂಬಲವಿದೆ ಎಂದು ಹೇಳಿದರು.

      ಮಂಜುನಾಥ್ ಮಾತನಾಡುತ್ತ, ಶರಣರು ನಮ್ಮ ಹಳ್ಳಿಗಳಿಗೆ ಬರುವುದೇ ನಮ್ಮ ಭಾಗ್ಯ. ಹಳ್ಳಿಗಳಲ್ಲಿ ಇರುವ ಒಡಕನ್ನು ತೊರೆದು ಎಲ್ಲರು ಒಟ್ಟುಗೂಡಲು ಇದೊಂದು ಸುಸಂದರ್ಭವಾಗಲಿದೆ. ಈ ಮೂಲಕ ಯುವಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ತೋರಿದಂತಾಗುತ್ತದೆ. ರೈತರ ಬದುಕಿಗೆ ನೀರೇ ಆಸರೆ. ಆ ನೀರಾವರಿ ವ್ಯವಸ್ಥೆಗೆ ಕೆರೆಗಳ ತುಂಬಿಸುವಿಕೆಗೆ ಶ್ರಮಿಸೋಣ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್, ಹೊಳಲ್ಕೆರೆಯ ಖ್ಯಾತವೈದ್ಯ ಡಾ| ನಾಗರಾಜ ಸಜ್ಜನ್, ಶ್ರೀಮತಿ ಗಂಗಮ್ಮ, ಚಿತ್ತಪ್ಪ ವೇದಿಕೆಯಲ್ಲಿದ್ದರು.

     ಟಿ.ಎಮ್ಮಿಗನೂರು ಚಂದ್ರಶೇಖರ್, ಮಲಸಿಂಗನಹಳ್ಳಿಯ ರಂಗಪ್ಪ, ಬಾಣಗೆರೆಯ ಮಂಜುನಾಥ, ಚೀರನಹಳ್ಳಿಯ ರುದ್ರಪ್ಪ,  ರಾಜಪ್ಪ, ಈಚಘಟ್ಟದ ರಾಜಣ್ಣ, ಮಲ್ಲಾಡಿಹಳ್ಳಿ, ಶಿವಗಂಗ, ಚಿಕ್ಕಜಾಜೂರು, ಶಿವಪುರ, ಅಂತಾಪುರ, ರಾಮಗಿರಿ, ಎನ್.ಜಿ.ಹಳ್ಳಿ ಮುಂತಾದ ಹಳ್ಳಿಗಳಿಂದ ಬಂದಿದ್ದ ಭಕ್ತ ಸಮೂಹವು ತಮ್ಮ ತಮ್ಮ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸಲು ಶರಣರನ್ನು ಕೇಳಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link