ತುಮಕೂರು

ಏಕನಿವೇಶನ (ಸಿಂಗಲ್ ಸೈಟ್)ಕ್ಕೆ ಮಂಜೂರಾತಿ (ಅಪ್ರೂವಲ್)ಯನ್ನು ನಿರಾಕರಿಸಲು ಯಾವುದೇ ದಾಖಲಾತಿಗಳು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದಲ್ಲಿ ಇಲ್ಲ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದ್ದು, ಈ ವಿಷಯವು ಭಾರಿ ಚರ್ಚೆಗೆ ಎಡೆಮಾಡಿಕೊಡುವಂತಿದೆ.
ತುಮಕೂರು ನಗರದ ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷ ಅವರು ಪ್ರಾಧಿಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀಡಿರುವ ಮಾಹಿತಿ (ನಂ. ಟಿಯುಡಿಎ/ಯೋಶಾ/ಮಾಹ/ 92/2018-19/2651, ದಿನಾಂಕ 26-03-2019)ಯಲ್ಲಿ ಈ ಚರ್ಚಾಸ್ಪದ ವಿಷಯ ಇದೆ.
“ಒಂದು ಎಕರೆ ಜಮೀನಿನಲ್ಲಿ ಭೂಪರಿವರ್ತನೆ ಆಗಿರುವ ಏಕ ನಿವೇಶನಕ್ಕೆ ಮಂಜೂರಾತಿ ನೀಡಬಾರದೆಂದು ಸರ್ಕಾರದಿಂದ ಬಂದಿರುವ ಸುತ್ತೋಲೆ, ನಿರ್ದೇಶನ, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಂದ ಬಂದಿರುವ ಆದೇಶದ ಪ್ರತಿ ಅಥವಾ ಪ್ರಾಧಿಕಾರದ ಸಭೆಯಲ್ಲಿ ಠರಾವು ಆಗಿದ್ದರೆ ಅದರ ಪ್ರತಿ ಒದಗಿಸಿ” ಎಂದು ಕೋರಿ ದಿನಾಂಕ 02-03-2019 ರಂದು ಇಮ್ರಾನ್ ಪಾಷ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಯು “ಪರಿಶೀಲಿಸಲಾಗಿ ನೀವು ಕೋರಿರುವ ಮಾಹಿತಿಯು ಈ ಕಚೇರಿಯಲ್ಲಿ ಲಭ್ಯವಿರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ ಪ್ರಾಧಿಕಾರದ ಈ ಉತ್ತರವು ತುಮಕೂರು ನಗರದಲ್ಲಿ ಚರ್ಚೆಗೆಡೆಮಾಡಿಕೊಟ್ಟಿದೆ. ಏಕನಿವೇಶನಕ್ಕೆ ಪ್ರಾಧಿಕಾರವು ಅನುಮತಿ ನಿರಾಕರಿಸುತ್ತ್ತಿದೆಯೆಂಬ ಆರೋಪ ಒಂದೆಡೆಯಿದ್ದು, ಇದೀಗ ಆ ರೀತಿಯ ನಿರಾಕರಣೆಗೆ ಅಗತ್ಯವಾದ ಯಾವ ದಾಖಲೆಯೂ ತನ್ನ ಬಳಿ ಇಲ್ಲವೆಂದು ಪ್ರಾಧಿಕಾರವೇ ಹೇಳಿಕೊಂಡಿದೆ. ಅಂದರೆ ಇನ್ನು ಮುಂದೆ ಏಕನಿವೇಶನಕ್ಕೆ ಅನುಮತಿ ಲಭಿಸುವುದೆಂದು ಅರ್ಥವೇ ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








