ಹೂವಿನಹಡಗಲಿ :
ಕಾಗಿನೆಲೆ ಗುರುಪೀಠದ ಮೈಲಾರ ಗ್ರಾಮದಲ್ಲಿ ಶಾಖಾ ಮಠದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ ರೂ ದೇಣಿಗೆ ಸಂಗ್ರಹವಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗಳು ಹೇಳಿದರು.
ಅವರು ಪಟ್ಟಣದ ಸಮಾಜದ ಮುಖಂಡರಾದ ಅಯ್ಯನಹಳ್ಳಿ ಕೊಟ್ರಪ್ಪನವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇಂತಹ ಒಂದು ಬರಗಾಲದ ಸಂದರ್ಭದಲ್ಲಿಯೂ ಕೂಡಾ ಹೂವಿನಹಡಗಲಿ ತಾಲೂಕಿನ ಜನತೆ ಇಂತಹ ಒಂದು ದೊಡ್ಡ ಪ್ರಮಾಣದ ದೇಣಿಗೆಯನ್ನು ನೀಡಿರುವುದಕ್ಕೆ ಪೀಠ ಅವರಿಗೆ ಅಭಿನಂದನೆ ಸಲ್ಲಿಸಲಿದೆ ಎಂದರು.
ಮೈಲಾರ ಗ್ರಾಮದಲ್ಲಿ ಶಾಖಾಮಠದ ಸ್ಥಾಪನೆಗೆ ಒಂದು ಮಹತ್ವದ ಉದ್ದೇಶವಿದ್ದು, ಸುಕ್ಷೇತ್ರ ಮೈಲಾರದಂತಹ ಧಾರ್ಮಿಕ ಕ್ಷೇತ್ರದಲ್ಲಿ ಶಾಖಾಮಠವನ್ನು ಸ್ಥಾಪಿಸಿದರೆ ಸಮಾಜಕ್ಕೆ ಧಾರ್ಮಿಕ ಸಂಸ್ಖತಿಯ ಜೊತೆಗೆ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡಬಹುದು ಎನ್ನುವುದು ಪೀಠದ ಉದ್ದೇಶವಾಗಿದೆ ಎಂದರು.
ಕೆಲವೇ ದಿನಗಳ ಹಿಂದೆ ಮೈಲಾರದಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿ, ನವಂಬರ್ 4 ರಂದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಕೇವಲ 36 ದಿನಗಳಲ್ಲಿ ಕಟ್ಟಡ ಕಾಮಗಾರಿ ಮೇಲ್ಛಾವಣಿ ಮಟ್ಟಕ್ಕೆ ಬಂದು ನಿಂತಿದೆ. ಇದೆಲ್ಲವೂ ಕೂಡಾ ಪೀಠದ ಸದ್ಭಕ್ತರಿಂದ ಸಾಧ್ಯವಾದಂತಹ ಕೆಲಸ ಎಂದರು.
ಇನ್ನು 7 ಎಕರೆ ಭೂಮಿಯನ್ನು ಈಗಾಗಲೇ ಮೈಲಾರದಲ್ಲಿ ಖರೀದಿಸಲಾಗಿದ್ದು, ಆ ಸ್ಥಳದಲ್ಲಿ ಪೀಠವು ಸಮಾಜದ ಶೈಕ್ಷಣಿಕ ಅಭಿವೃದ್ದಿಗಾಗಿ ಶಾಲಾ,ಕಾಲೇಜು ಹಾಗೂ ವಸತಿ ನಿಲಯಗಳನ್ನು ಆರಂಭಗೊಳಿಸುವ ಸಂಕಲ್ಪವನ್ನು ಹೊಂದಲಾಗಿದೆ ಎಂದರು.
ಪೀಠವು ಬಳ್ಳೋಡಿ ಮಠದಲ್ಲಿ ಕೇವಲ 210 ದಿನಗಳಲ್ಲಿ ಶಾಖಾಮಠದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಇದ್ದು, ಮೈಲಾರ ಗ್ರಾಮದಲ್ಲಿ ನಿರ್ಮಾಣಗೊಳ್ಳುವ ಶಾಖಾಮಠದ ಕಟ್ಟಡ ಕಾಮಗಾರಿಯು ಅದರ ದಾಖಲೆಯನ್ನು ಮುರಿಯುವ ಭರವಸೆ ಇದೆ ಎಂದು ಶ್ರೀಗಳು ಹೇಳಿದರು.
ಈಗಾಗಲೇ ಪೀಠವು ಶೈಕ್ಷಣಿಕ ಕ್ರಾಂತಿಯನ್ನು ಆರಂಭಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಸಮಾಜದ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು. ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಬಗ್ಗೆ ಮಾತನಾಡಿದ ಶ್ರೀಗಳು ಶೋಷಿತ ಸಮುದಾಯಗಳಿಗೆ ಮಾರಮ್ಮನ ಹಬ್ಬಗಳು ಒಂದು ಶಾಪವಾಗಿ ಪರಿಣಮಿಸಿದ್ದು, ಪ್ರಾಣಿಬಲಿಯನ್ನು ನಿಲ್ಲಿಸಬೇಕೆಂದು ಹೇಳಿದರು.
ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ಪೀಠದಿಂದ ನಡೆಯುತ್ತಿದ್ದು, ಸಮಾಜಬಾಂಧವರ ಸಹಕಾರ ಅಗತ್ಯವಿದೆ ಎಂದ ಅವರು, ಹೂವಿನಹಡಗಲಿ ಕ್ಷೇತ್ರದಲ್ಲಿ ಸರ್ವ ಸಮಾಜದವರು ಕೂಡಾ ಗ್ರಾಮದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ತನುಮನ ಧನ ಸೇವೆಯನ್ನು ಗೈದಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಗುರುವಿನ ಕೊಟ್ರಯ್ಯನವರು, ಪುರಸಭೆ ಅಧ್ಯಕ್ಷೆ ಬಿ.ಮರ್ದಾನ್‍ಬೀ, ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಹೆಚ್.ಬೀರಪ್ಪ, ಕುರುಬ ಸಂಘದ ರಾಜ್ಯ ನಿರ್ದೇಶಕರಾದ ಬಿ.ಹನುಮಂತಪ್ಪ, ಎಂ.ಪರಮೇಶ್ವರಪ್ಪ, ಆರ್.ಪಕ್ಕೀರಪ್ಪ, ಬೀರಪ್ಪ, ತಾ.ಪಂ.ಸದಸ್ಯ ಈಟಿ ಲಿಂಗರಾಜ, ಈಟಿ ಹನುಮೇಶ, ಅಯ್ಯನಹಳ್ಳಿ ಕೊಟ್ರಪ್ಪ, ಗುರುವಿನ ರಾಜಣ್ಣ, ಕೊಳಚಿ ಹಾಲಪ್ಪ, ಈಟಿ ಲಕ್ಷ್ಮಣ ಸೇರಿದಂತೆ ಹಲವರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
