ಹುಳಿಯಾರು:
ಹುಳಿಯಾರು ಸಮೀಪದ ಬಳ್ಳೆಕಟ್ಟೆ ತಾಂಡ್ಯದ ಬಳಿ 1 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸೇತುವೆಯು ಸುವರ್ಣಮುಖಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದು ಈ ಹಳ್ಳವು ಬೋರನಕಣಿವೆ ಜಲಾಶಯದ ಜನಮೂಲವಾಗಿದೆ. ಈ ಹಿಂದೆ ಇದ್ದ ಸೇತುವೆಯು ಸಣ್ಣದಾಗಿರುವ ಜೊತೆಗೆ ಶಿಥಿಲವಾಗಿತ್ತು. ಹಾಗಾಗಿ ಬಾರಿ ಮಳೆಗಾಲದಲ್ಲಿ ಸೇತುವೆಯ ಮೇಲೆ ಹಳ್ಳದ ನೀರು ಹರಿಯುವುದರಿಂದ ಈ ಸಂಪರ್ಕ ಮಾರ್ಗ ಕಡಿತವಾಗುತ್ತದೆ.
ಪರಿಣಾಮ ಬರಕನಹಾಲ್ ಗ್ರಾಪಂ ವ್ಯಾಪ್ತಿಯ ಅನೇಕ ಹಳ್ಳಿಗಳ ಜನ ಶಾಲಾಕಾಲೇಜು, ವ್ಯಾಪಾರ ವಹಿವಾಟು, ಆರೋಗ್ಯ ಸಮಸ್ಯೆಗಳಿಗೆ ಹುಳಿಯಾರಿಗೆ ಆಗಮಿಸಲು ಸಂಗೇನಹಳ್ಳಿ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಠಿಯಾಗುತ್ತಿತ್ತು. ಇದರಿಂದ ಹತ್ತನ್ನೆರಡು ಕಿ.ಮೀ.ದೂರವಾಗುವ ಜೊತೆಗೆ ಸಾರಿಗೆ ವ್ಯವಸ್ಥೆ ಸಹ ಇಲ್ಲದಾಗಿ ಪರದಾಡುವಂತ್ತಾಗುತ್ತಿತ್ತು.
ಈ ಸಮಸ್ಯೆಯನ್ನು ಸ್ಥಳೀಯರು ಶಾಸಕರ ಗಮನಕ್ಕೆ ತರಲಾಗಿ ನಬಾರ್ಡ್ ಯೋಜನೆಯಿಂದ 1 ಕೋಟಿ ರೂ. ಮಂಜೂರು ಮಾಡಿಸಿದ್ದು ಈ ಸೇತುವೆಯು 10 ಮೀಟರ್ ಅಗಲ ಹಾಗೂ 40 ಮೀಟರ್ ಉದ್ದದ ಭಾರಿ ದೊಡ್ಡ ಸೇತುವೆಯಾಗಿ ನಿರ್ಮಾಣವಾಗಲಿದೆ. ಈ ಸೇತುವೆಯ ಗುತ್ತಿಗೆಯನ್ನು ಗುತ್ತಿಗೆದಾರ ಸಿದ್ದಲಿಂಗಪ್ಪ ಅವರಿಗೆ ನೀಡಿದ್ದು ಮೂರ್ನಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ಶಂಕುಸ್ಥಾಪನಾ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ, ವಿಎಸ್‍ಎಸ್‍ಎನ್ ಅಧ್ಯಕ್ಷ ವಿಶ್ವನಾಥ್, ಗುತ್ತಿಗೆದಾರ ವಿಶ್ವನಾಥ್, ತಾಪಂ ಮಾಜಿ ಅಧ್ಯಕ್ಷ ಸೀತಾರಾಮು, ತಾಪಂ ಮಾಜಿ ಸದಸ್ಯ ಜಯಣ್ಣ, ಪಪಂ ಸದಸ್ಯ ಹೇಮಂತ್, ಎಇಇ ಚಂದ್ರಶೇಖರ್, ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ರಾಮಣ್ಣ, ಕಾಂತರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ