ದಾವಣಗೆರೆ:
ಬರಗಾಲದಲ್ಲೂ ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ, ಸುವರ್ಣಸೌಧದ ಎದುರು ಒಂದು ಲಕ್ಷ ರೈತರೊಂದಿಗೆ ಸೇರಿಸಿ ಬೃಹತ್ ಹೋರಾಟ ಮಾಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯ ಬರಪೀಡಿತ ತಾಲೂಕುಗಳ ಜಮೀನಿಗೆ ಮಂಗಳವಾರ ಭೇಟಿ ನೀಡಿ, ಬರ ಅಧ್ಯಯನ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಡಿಸೆಂಬರ್ 10ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಒಂದು ಲಕ್ಷ ಜನ ರೈತರನ್ನು ಸೇರಿಸಿ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಸದನದ ಒಳಗೂ ಹಾಗೂ ಹೊರಗು ಧ್ವನಿ ಎತ್ತುವ ಮೂಲಕ ವಿರೋಧ ಪಕ್ಷವಾಗಿ ಬಿಜೆಪಿ ಪ್ರಾಮಾಣಿಕ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ನನ್ನ ನೇತೃತ್ವದ ತಂಡ ಸೇರಿದಂತೆ ಐದು ತಂಡಗಳನ್ನು ರಚಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಬರ ಪೀಡಿತ ಪ್ರದೇಶಗಳಲ್ಲಿನ ರೈತರ ಸಮಸ್ಯೆ, ಬೆಳೆ ನಷ್ಟವಾಗಿರುವ ಪ್ರಮಾಣ ಹಾಗೂ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ನೇತೃತ್ವದ ತಂಡವು ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿದಂತೆ ಹಲವೆಡೆ ಬರ ಅಧ್ಯಯನ ನಡೆಸಿದ್ದು, ಇಂದು ದಾವಣಗೆರೆ ಜಿಲ್ಲೆ, ಮಧ್ಯಹ್ನಾ ಹಾವೇರಿ ಜಿಲ್ಲೆ, ನಂತರ ಬೆಳಗಾವಿ ಜಿಲ್ಲೆಗೆ ತೆರಳಿ ಬರ ಅಧ್ಯಯನ ನಡೆಸಿ, ಐದೂ ತಂಡಗಳು ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದೇವೆ. ಇದರ ಆಧಾರದ ಮೇಲೆ ಯಡಿಯೂರಪ್ಪನವರು ರೈತರ ಪರವಾಗಿ ಅಧಿವೇಶನದಲ್ಲಿ ದನಿ ಎತ್ತಲಿದ್ದಾರೆ ಎಂದರು.
ಬರ ಅಧ್ಯಯನದ ವೇಳೆಯಲ್ಲಿ ನಮಗೆ ಇಡೀ ರಾಜ್ಯದಲ್ಲಿ ರೈತರು ಆತಂಕದಲ್ಲಿರುವುದು ಗಮನಕ್ಕೆ ಬಂದಿದೆ. ಬರಗಾಲದ ತೀವ್ರತೆಗೆ ತುತ್ತಾಗಿರುವ ರೈತರು ಬದುಕುವ ಸ್ಥಿತಿಯಲ್ಲಿಲ್ಲ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಜೆಟ್‍ನಲ್ಲಿ 6 ಸಾವಿರ ಕೋಟಿ ಮಾತ್ರ ತೆಗೆದಿಟ್ಟಿದ್ದಾರೆ. ಇದಕ್ಕಾಗಿ ವಿಧಿಸಿರುವ ಷರತ್ತುಗಳಿಂದ ಯಾವುದೇ ರೈತರಿಗೂ ಸಾಲ ಮನ್ನಾ ಪ್ರಯೋಜನ ಸಿಗುವುದಿಲ್ಲ ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ 10 ಜನ ರೈತರಿಗೆ ಋಣಮುಕ್ತ ಪತ್ರ ಕೊಡಿಸಿರುವುದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಜಿಲ್ಲೆಯ ದಾವಣಗೆರೆ, ಹರಿಹರ, ಹರಪನಹಳ್ಳಿ, ಜಗಳೂರು ತಾಲೂಕುಗಳು ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ರೈತರು ತುಂಬ
ಸಂಕಷ್ಟದಲ್ಲಿರುವುದು ನೋವಿನ ಸಂಗತಿಯಾಗಿದೆ. ಹರಿಹರದಲ್ಲಿ 4136 ಹೆಕ್ಟೇರ್, ಹರಪನಹಳ್ಳಿ 53,425, ದಾವಣಗೆರೆ 36,132, ಜಗಳೂರು 46,476 ಹೆಕ್ಟೇರ್ ಸೇರಿದಂತೆ ಒಟ್ಟು 1,40,169 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಒಣಗಿದೆ. ಸರ್ಕಾರ ನೀಡುವ ಬೆಳೆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ವಾಸ್ತವ ಸಂಗತಿಯನ್ನು ಗಮನಕ್ಕೆ ತರುತ್ತೇವೆ ಎಂದರು
ಜಿಲ್ಲೆಯ ದಾವಣಗೆರೆ ತಾಲೂಕಿನ ಹೆಮ್ಮನಬೇತೂರು, ಕುರುಡಿ, ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮತ್ತಿತರೆ ಬರಪೀಡಿತ ಹಳ್ಳಿಗಳ ಹೊಲಗಳಿಗೆ ಭೇಟಿ ನೀಡಿದ್ದ, ಕೋಟಾ ಶ್ರೀನಿವಾಸ್ ಪೂಜಾರಿ, ಪವಿತ್ರ ರಾಮಯ್ಯ ಅವರುಗಳು ಇದ್ದ ತಂಡವು ರೈತರ ಸಮಸ್ಯೆ ಆಲಿಸಿ, ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಸಂತೋಷಕುಮಾರ್ ಅವರಿಂದ ಮಾಹಿತಿ ಪಡೆಯಿತು.
ಹೆಮ್ಮನಬೇತೂರು ಗ್ರಾಮದ ಐಗೂರು ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ನೀರಿಲ್ಲದೆ ಒಣಗಿದ್ದು ಕಂಡುಬಂತು. 3.23 ಎಕರೆ ಜಮೀನಿನಲ್ಲಿ ಪ್ರತಿ ಬಾರಿ ಸರಾಸರಿ 15-18 ಕ್ವಿಂಟಾಲ್ ಪ್ರತಿ ಎಕರೆಗೆ ಬರುತ್ತಿದ್ದ ಮೆಕ್ಕೆಜೋಳ ಇಳುವರಿಯು ಈ ಬಾರಿ 6-7 ಕ್ವಿಂಟಾಲ್ ಬರುವುದೂ ಅನುಮಾನವಾಗಿದೆ. ಸಕಾಲಕ್ಕೆ ಬಿತ್ತನೆ ಮಾಡಿದ್ದರೂ ಒಳ್ಳೆಯ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಬೆಳೆ ನೆಲ ಕಚ್ಚಿದೆ ಎಂದು ರೈತ ಸಿದ್ದಪ್ಪ ಅಳಲು ತೋಡಿಕೊಂಡರು.
ಸುಮಾರು 600 ಕುಟುಂಬಗಳು ವಾಸಿಸುತ್ತಿರುವ ಗ್ರಾಮದಲ್ಲಿ ಬಹುತೇಕ ಎಲ್ಲರೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಮೊದಲೆಲ್ಲಾ 150 ಅಡಿಗೆ ಸಿಗುತ್ತಿದ್ದ ಬೋರ್‍ವೆಲ್ ನೀರು, ಈಗ 900 ಅಡಿ ಕೊರೆಸಿದರೂ ಸಿಗುತ್ತಿಲ್ಲ. ಅಂತರ್ಜಲ ಕುಸಿತದಿಂದಾಗಿ ಸಾವಿರಕ್ಕೂ ಅಧಿಕ ಬೋರ್‍ವೆಲ್‍ಗಳು ವಿಫಲವಾಗಿವೆ. ಕೆಲ ರೈತರು ತಮ್ಮ ತೋಟ ಉಳಿಸಿಕೊಳ್ಳಲು ಹತ್ತಾರು ಕಿ.ಮೀ.ಗಳಿಂದ ಪೈಪ್‍ಲೈನ್ ಮೂಲಕ ಕೆರೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಟ್ಯಾಂಕರ್ ಮುಖಾಂತರ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿಲ್ಲದ ಬಹುತೇಕ ರೈತರ ತೋಟಗಳು ನೀರಿಲ್ಲದೆ ಹಾಳಾಗಿವೆ ಎಂದು ಗ್ರಾಮಸ್ಥರು ವಿವರಿಸಿದರು.
ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ತುಪ್ಪದಹಳ್ಳಿ ಕೆರೆಗೆ 22 ಕೆರೆ ಏತ ನೀರಾವರಿ ಯೋಜನೆಯಡಿ ನೀರು ಬರುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಕೊನೆ ಭಾಗದ ಕೆರೆಯಾಗಿರುವುದರಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ. ಕಳೆದ 45 ವರ್ಷಗಳ ಹಿಂದೆ ಕೋಡಿ ಬಿದ್ದಿದ್ದ ಕೆರೆಯು ಈವರೆಗೆ ಸಂಪೂರ್ಣ ತುಂಬಿಲ್ಲ. ಒಮ್ಮೆ ಕೆರೆ ತುಂಬಿದರೆ ಸುತ್ತಮುತ್ತಲಿನ 25 ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, 5 ವರ್ಷ ನೀರಿನ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಹೆಮ್ಮೆನಬೇತೂರು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಜಶೇಖರ, ಹೆಚ್.ಎನ್.ಶಿವಕುಮಾರ, ಬಿ.ರಮೇಶ ನಾಯ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ, ಮುಖಂಡರಾದ ಗೌತಮ್ ಜೈನ್, ಟಿಂಕರ್ ಮಂಜಣ್ಣ, ಅಣಜಿ ಗುಡ್ಡೇಶ್, ಧನಂಜಯ ಕಡ್ಲೇಬಾಳ್, ನಾಗರತ್ನ ನಾಯಕ್, ಶಿವರಾಜ್ ಪಾಟೀಲ್, ಗಂಗಾಧರ ನಾಯ್ಕ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ