ತುರುವೇಕೆರೆ
ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಕಲಂ 144 ಸಿಆರ್.ಪಿಎಸ್ ಸೆಕ್ಷ್ಷನ್ ಅನ್ವಯ 10 ದಿನಗಳ ಕಾಲ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ತಾಲ್ಲೂಕು ದಂಡಾಧಿಕಾರಿ ನಯೀಂ ಉನ್ನಿಸಾ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಮಾಯಸಂದ್ರ ಹೋಬಳಿ ಗುಡ್ಡೇನಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಸಸಿಯನ್ನು ಶಾಸಕ ಮಸಾಲಜಯರಾಮ್ ಕೀಳಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿ ಆ. 30,31 ರಂದು ಗುಡ್ಡೇನಹಳ್ಳಿ ಗ್ರಾಮದಿಂದ ಪಾದಯಾತ್ರೆ ಹಾಗೂ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಫ್ಲೆಕ್ಸ್ ಹಾಕಿಸಿ, ಆ ಫ್ಲೆಕ್ಸ್‍ನಲ್ಲಿ ಕೊಲೆಗಡುಕ ಶಾಸಕ ಮಸಾಲ ಜಯರಾಮ್ ಎಂಬ ಉಲ್ಲೇಖವಿತ್ತು.
ಈ ಫ್ಲೆಕ್ಸ್ ತೆರವುಗೊಳಿಸಿದ್ದರಿಂದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಉಂಟಾದ ಗಲಾಟೆ ಮತ್ತು ಪ್ರತಿಭಟನೆಯಿಂದಾಗಿ ಸೋಮವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಲಘು ಲಾಠಿ ಚಾರ್ಜ್ ನಡೆದು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಆ. 25 ಬೆಳಗ್ಗೆ 6 ಗಂಟೆಯಿಂದ ಸೆ.3 ರವರೆಗೆ ಕಲಂ 144 ಸಿಆರ್.ಪಿಎಸ್ ಸೆಕ್ಷನ್ ಅನ್ವಯ 10 ದಿನಗಳ ಕಾಲ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸರು ಸರ್ಪಗಾವಲಿದ್ದು, ನಿಷೇಧಾಜ್ಞೆ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪು ಸೇರುವಂತಿಲ್ಲ. ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ. ನಿಷೇಧಾಜ್ಞೆ ಉಲ್ಲಂಘನೆ ಮಾಡುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆರಕ್ಷಕ ವೃತ್ತ ನಿರೀಕ್ಷಕರಿಗೆ ಆದೇಶಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ