ಬಳ್ಳಾರಿ:
ನಗರದ ಡಿಸಿ ಕಚೇರಿ ಎದುರಿನ ಚರಂಡಿಯ ಮೇಲ್ಛಾವಣಿ (ಪಾದಚಾರಿ ರಸ್ತೆ) ಕುಸಿದು ಎನ್‍ಎಸ್‍ಯುಐ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿನಿ ಶೇಕಮ್ಮ ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಹೈದ್ರಾಬಾದ್ ಪಶುವೈದ್ಯೆ ಹತ್ಯೆ, ಅತ್ಯಾಚಾರ ಖಂಡಿಸಿ ಎನ್‍ಎಸ್‍ಯುಐ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರಿಂದ ಡಿಸಿ ಕಚೇರಿಯ ಹೊರ ಸಭಾಂಗಣ ತುಂಬಿ ತುಳುಕುತಿತ್ತು. ಪ್ರತಿಭಟನೆ ಮುಗಿದ ಬಳಿಕ ವಾಪಸ್ ತೆರಳುತ್ತಿದ್ದಾಗ ಡಿಸಿ ಕಚೇರಿ ಮುಂಭಾಗದಲ್ಲೇ ಇದ್ದ ತೆರೆದ ಚರಂಡಿಗೆ ನಿರ್ಮಿಸಲಾಗಿದ್ದ ಮೇಲ್ಛಾವಣಿ (ಕಾಂಕ್ರೀಟ್ ಸ್ಲಾಬ್) ಶಿಥಿಲಾವಸ್ಥೆ ತಲುಪಿದ್ದು, ಅದರ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ನಿಂತಿದ್ದ ಹಿನ್ನೆಲೆಯಲ್ಲಿ ಕುಸಿದಿದ್ದು, ಹಲವು ವಿದ್ಯಾರ್ಥಿನಿಯರು ಗಾಯಗೊಳ್ಳಲು ಕಾರಣವಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಾಲಿಕೆ ಇಂಜಿನೀಯರ್ ಖಾಜಾ ಮೊಹಿನುದ್ದೀನ್ ಅವರು, ಇಡೀ ಚರಂಡಿ ಮೇಲ್ಛಾವಣಿ ಮೇಲೆ ಯಾರೂ ಸಂಚರಿಸದಂತೆ ನಿರ್ಬಂಧ ಹೇರಿದ್ದಾರೆ. ಈ ವೇಳೆ ಪಾಲಿಕೆ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








