ಮಧುಗಿರಿ
ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳಿಗೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ಗಳ ಮಾಲೀಕರಿಗೆ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ದಂಡ ವಿಧಿಸಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸುತ್ತಿರುವ ಕರೋನಾ ಎಂಬ ಸಾಂಕ್ರಾಮಿಕ ಮಾರಕ ರೋಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ಇತ್ತೀಚೆಗೆ ಹೆಚ್ಚಾಗಿ ಬಳಕೆ ಮಾಡುತ್ತಿರುವುದನ್ನೇ ಬಂಡವಾಳನ್ನಾಗಿ ಮಾಡಿಕೊಂಡಿರುವ ಮಧುಗಿರಿ ಪಟ್ಟಣದಲ್ಲಿನ 10 ಮೆಡಿಕಲ್ ಸ್ಟೋರ್ಗಳಿಗೆ ತಹಸೀಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಕೆಲ ದಾಖಲೆಗಳನ್ನು ಪರಿಶೀಲಿಸಿದರು.
ಇವುಗಳಲ್ಲಿ 3 ಮೆಡಿಕಲ್ ಸ್ಟೋರ್ ಮಾಲೀಕರಿಗೆ ಸುಮಾರು ಒಟ್ಟು ರೂ. 10 ಸಾವಿರ ದಂಡ ವಿಧಿಸಿದ್ದು, ಇನ್ನೂ 6 ಅಂಗಡಿಗಳಲ್ಲಿ ನೋಸ್ಟಾಕ್ ಹಾಗೂ 1 ಮೆಡಿಕಲ್ ಸ್ಟೋರ್ನಲ್ಲಿ 20 ರೂ.ಗಳಿಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
17 ರೂ. ಬೆಲೆಬಾಳುವ ಮಾಸ್ಕ್ಗಳನ್ನು 100 ರೂ.ಗಳಿಗೆ ಹಾಗೂ 100 ರೂ. ದರ ನಿಗದಿಪಡಿಸಿರುವ ಸ್ಯಾನಿಟೈಜರ್ಗಳನ್ನು 180 ರೂ.ಗಳ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಕೆಲ ಮೆಡಿಕಲ್ ಸ್ಟೋರ್ಗಳ ವಿರುದ್ಧ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ ಇಂತಹ ಸಂದರ್ಭಗಳಲ್ಲಿ ಅಗತ್ಯ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸುವುದು ಕಾನೂನು ಬಾಹಿರ.
ಮುಂದೆ ನಿಮ್ಮಗಳ ವಿರುದ್ಧ ಮತ್ತೊಮ್ಮೆ ದೂರು ಕೇಳಿ ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಮೆಡಿಕಲ್ ಸ್ಟೋರ್ ಮಾಲೀಕರಿಗೆ 10 ಸಾವಿರ ರೂ.ಗಳ ದಂಡವನ್ನು ವಿಧಿಸಿದ್ದಾರೆ.ಈ ಸಂದರ್ಭದಲ್ಲಿ ಆಹಾರ ನಿರೀಕ್ಷ ಹೆಚ್.ಗಣೇಶ್, ಪೂರ್ಣನಂದಮೆಣಸಿಗೆ, ವಿದ್ಯಾ, ಗೀತಾ, ನಸ್ರುದ್ದೀನ್, ನಂಜುಂಡ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ