ಬಳ್ಳಾರಿ:
ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿಯ 9 ತಿಂಗಳ ಮಗುವಿನ ತಾಯಿ, 8 ತಿಂಗಳ ಗರ್ಭಿಣಿ ಮಹಿಳೆ, ಮಂಗಳಮುಖಿ ಸೇರಿ 11 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈನ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ 65 ಜನರು ಕಳೆದ ಮೇ 6 ರಂದು ಶ್ರಮಿಕ ರೈಲು ಮೂಲಕ ನೆರೆಯ ಆಂಧ್ರದ ಗುಂತಕಲ್ಲುಗೆ ಬಂದಿಳಿದಿದ್ದಾರೆ. ಅಲ್ಲಿನ ಜಿಲ್ಲಾಧಿಕಾರಿಗಳು ನಮಗೆ ಮಾಹಿತಿ ನೀಡಿದಾಗ ಇಲ್ಲಿಂದ ಒಂದು ಸಾರಿಗೆ ಬಸ್ ಕಳುಹಿಸಿ ಅವರನ್ನು ಕರೆತಂದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇವರಿಗೆ 12ನೇ ದಿನ ಗಂಟಲು ದ್ರವ್ಯ ಟೆಸ್ಟಿಂಗ್ ಮಾಡಿದಾಗ 7 ಜನ ಮಹಿಳೆಯರು, ಮೂವರು ಪುರುಷರು, ಒಬ್ಬ ಮಂಗಳಮುಖಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಸೋಂಕಿತರೆಲ್ಲರನ್ನು ಈಗಾಗಲೇ ನಗರದ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದ ನಾಲ್ವರು, ಚಾಗನೂರು ಗ್ರಾಮದ ಮೂವರು, ಗೊಲ್ಲರ ನಾಗೇನಹಳ್ಳಿಯ ಇಬ್ಬರು, ಬಳ್ಳಾರಿ ನಗರದ ಬಂಡಿಮೋಟ್‍ನ ಒಬ್ಬರು ಮತ್ತು ಇಂದಿರಾನಗರದ 1 ಒಬ್ಬರು ಸೇರಿ ಒಟ್ಟು 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 9 ತಿಂಗಳ ಮಗುವಿನ ತಾಯಿ, 8 ತಿಂಗಳ ಗರ್ಭಿಣಿ ಮಹಿಳೆ ಮತ್ತು ಒಬ್ಬರು ಮಂಗಳಮುಖಿಗೂ ಸೋಂಕು ಆವರಿಸಿದೆ. 9 ತಿಂಗಳ ಮಗು ಅಜ್ಜಿ-ಅಜ್ಜನೊಂದಿಗೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು, ತಜ್ಞವೈದ್ಯರು ಮಗುವಿನ ಗಂಟಲು ದ್ರವ್ಯ ಪಡೆದು ಟೆಸ್ಟಿಂಗ್ ಕಳುಹಿಸಿಕೊಡಲಾಗುತ್ತದೆ. ಅಲ್ಲದೇ, ಸೋಂಕಿತರನ್ನು ನೇರವಾಗಿ ಕರೆತಂದು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದ ಹಿನ್ನೆಲೆಯಲ್ಲಿ ಸೋಂಕಿತರು ವಾಸಿಸುವ ಪ್ರದೇಶ, ಊರುಗಳನ್ನು ಕಂಟೈನ್ಮೆಂಟ್ ಪ್ರದೇಶಗಳನ್ನಾಗಿ ಘೋಷಿಸುವ ಅಗತ್ಯವಿಲ್ಲ ಎಂದವರು ಸ್ಪಷ್ಟಪಡಿಸಿದರು.
ಮುಂಬೈನಿಂದ ಬಂದ 65 ಜನರಲ್ಲಿ 11 ಪಾಸಿಟಿವ್ ಬಂದಿದ್ದು, ಇನ್ನುಳಿದ 54 ಜನರ ವರದಿ ಬರಬೇಕಾಗಿದೆ. ಅಲ್ಲದೇ, 11 ಸೋಂಕಿತರೊಂದಿಗೆ ಮೊದಲ ಹಂತದ ಸಂಪರ್ಕ ಹೊಂದಿದ್ದ 49 ಮಂದಿ ಸೇರಿದಂತೆ 187 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ 2817 ಜನರು ಕ್ವಾರಂಟೈನ್ ಕೇಂದ್ರಗಳಲ್ಲಿದ್ದಾರೆ. ಅವರಲ್ಲಿ ಹೈ ರಿಸ್ಕ್-4 ಕ್ವಾರಂಟೈನ್ ಕೇಂದ್ರ, ಮಧ್ಯಮ ರಿಸ್ಕ್-14 ಕ್ವಾರಂಟೈನ್ ಕೇಂದ್ರ, ಲೋ ರಿಸ್ಕ್-4 ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ 5 ಹೋಟಲ್‍ಗಳಲ್ಲಿ ಹಣ ಪಾವತಿಸಿ ಕ್ವಾರಂಟೈನ್‍ನಲ್ಲಿದ್ದಾರೆ. ಕ್ವಾರಂಟೈನ್‍ನಲ್ಲಿದ್ದ ಇದುವರೆಗೆ 747 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವಿವರಿಸಿದ ಅವರು ಜಿಲ್ಲೆಯಲ್ಲಿ ಪಿಪಿಇ ಕಿಟ್‍ಗಳ ಕೊರತೆ ಇಲ್ಲ. ಇನ್ನು 5 ಸಾವಿರದಷ್ಟು ಪಿಪಿಇ ಕಿಟ್‍ಗಳು ದಾಸ್ತಾನಿದೆ ಎಂದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಬಿಗಿ ಭದ್ರತೆ
ಎಸ್‍ಪಿ ಸಿ.ಕೆ.ಬಾಬಾ ಮಾತನಾಡಿ, ಕ್ವಾರಂಟೈನ್ ಕೇಂದ್ರಗಳಿಂದ ಕೆಲವರು ಪರಾರಿಯಾಗಿದ್ದ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಎಲ್ಲ ಕ್ವಾರಂಟೈನ್ ಕೇಂದ್ರಗಳಿಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಜನರು ಸಾಮಾಜಿಕ ಅಂತರ ಪಾಲಿಸುವಿಕೆ, ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್‍ಗಳಿಂದ ಆಗಾಗ್ಗೆ ಕೈಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ