ತುಮಕೂರು
ಡಾ.ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳು ಶಿವರತ್ನರೂ, ವಿಶ್ವಮಾನವರತ್ನರೂ ಆಗಿದ್ದಾರೆ. ಹೀಗಾಗಿ ಅವರು ಭಾರತರತ್ನಕ್ಕೂ ದೊಡ್ಡವರಾಗಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನಿ.ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ತಿಳಿಸಿದರು. ಅವರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಸಂಜೆ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಹಾತ್ಮಗಾಂಧಿಗೆ ಶಾಂತಿಗಾಗಿ ನೊಬೆಲ್ ಬಹುಮಾನ ಕೊಡಲಾಗಲಿಲ್ಲವೆಂದು ಆಯ್ಕೆ ಮಂಡಳಿಯೂ ಇಂದಿಗೂ ಕೊರಗುತ್ತಿದೆ. ಅಂತೆಯೇ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲವೆಂದು ಆಯ್ಕೆ ಮಂಡಳಿ ಕೊರಗಬೇಕೆ ಹೊರತು ಭಕ್ತರು ಕೊರಗುವುದು ಬೇಡ. ಹಿಂದೆ ಗುಡಿಗಳಲ್ಲಿ ಕಲ್ಲಿನ ಮೂರ್ತಿ ಇದ್ದು, ಜನತೆಯ ಮನಸ್ಸು ಬಂಗಾರವಾಗಿತ್ತು. ಆದರೆ ಇಂದು ಗುಡಿಗಳಲ್ಲಿ ಬಂಗಾರದ ಮೂರ್ತಿ ಇದ್ದು, ಜನರ ಮನಸ್ಸು ಕಲ್ಲಾಗಿದೆ. ಇದು ವೈಪರೀತ್ಯ. ಜನರ ಮನಸ್ಸು ಬಂಗಾರವಾಗಬೇಕು.
ಕಾಯಕ ದಾಸೋಹ ವಿಶ್ವದಲ್ಲಿ ಅತಿ ದೊಡ್ಡ ದಾಸೋಹ. ಸ್ವಾಮೀಜಿ ಬಗ್ಗೆ ಹೇಳಿಕೆ, ಘೋಷಣೆ, ಭಾಷಣ, ಬರಹ ಸಾಕು. ಅವರ ಆದರ್ಶಗಳನ್ನು, ಕಾಯಕ ಮಹತ್ವವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದರ ಆಚರಣೆ ಅನುಷ್ಠಾನ ಬೇಕು. ಬಸವಣ್ಣನವರ ವಚನಗಳನ್ನು ಸಾವಿರಾರು ಜನ ಉದಾಹರಿಸುತ್ತಾರೆ. ಆದರೆ ಎಷ್ಟು ಜನ ವಚನದ ರೀತಿ ಬದುಕುತ್ತಾರೆ ಎಂದು ಪ್ರಶ್ನಿಸಿದರು.
ಸ್ವಾಮೀಜಿಯ ಆದರ್ಶವನ್ನು ನಾವು ಪಾಲಿಸುವುದೇ ಅವರಿಗೆ ನೀಡುವ ಬಹುದೊಡ್ಡ ಗೌರವ.
50 ಜನರಿಂದ 15 ಸಾವಿರ ಜನಕ್ಕೆ ಅನ್ನದಾಸೋಹ ನೀಡಿದ್ದು ಪವಾಡವೇ ಸರಿ. ಪವಾಡವನ್ನು ನಂಬದವರೂ ಕೂಡ ಈ ಕೃತಿಗಿಳಿದ ಕಾಯಕವನ್ನು ನಂಬಲೇಬೇಕು. ಚೀಟಿ, ತಾಯಿತ ಅವೈಜ್ಞಾನಿಕ ಅಲ್ಲವೇ ಎಂದು ಅವರನ್ನು ಒಮ್ಮೆ ಪ್ರಶ್ನಿಸಿದಾಗ, ಅದು ಮೂಢನಂಬಿಕೆ ಅಲ್ಲ, ಅದರಲ್ಲಿ ಬಸವಣ್ಣನವರ ವಚನಗಳನ್ನು ಬರೆದಿರುತ್ತೇನೆ. ಭಕ್ತರಿಗೆ ಮಾನಸಿಕ ಸಮಾಧಾನದ ಫಲ ಸಿಕ್ಕರೆ ಅದೇ ಮುಖ್ಯ ಎಂದು ಹೇಳಿದ್ದರು. ಇಂದು ಆಸೆ, ಆಡಂಬರ, ಪ್ರಚಾರ ಬೇಡ. ಕೃತಿ, ಆಚರಣೆ, ಅನುಷ್ಠಾನ ಬೇಕಾಗಿದೆ ಎಂದು ತಿಳಿಸಿದರು.
ಡಾ.ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳು ದೈಹಿಕವಾಗಿ ಮಾತ್ರ ನಮ್ಮಿಂದ ದೂರಾಗಿ ಬಹುದೊಡ್ಡ ಗುರುಪರಂಪರೆಯ ಕೊಂಡಿ ಕಳಚಿತು. ಆದರೆ ಅವರ ಆದರ್ಶ, ತತ್ವಗಳು ಕಳಚಿ ಬಿದ್ದಿಲ್ಲ ಎಂದು ಸಿರಿಗೆರೆಯ ತರಳಬಾಳು ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಅವರು ಸೋಮವಾರ ಸಂಜೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ನಾಗರಿಕ ಸಮಿತಿಯಿಂದ ಆಯೋಜಿಸಿದ್ದ ನಡೆದಾಡುವ ದೇವರು ಡಾ.ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳು 112ನೇ ಗುರುವಂದನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ತುಮಕೂರು ನಾಗರಿಕರ ಹೃದಯದಲ್ಲಿ ಶಿವಕುಮಾರ ಮಹಾಸ್ವಾಮಿಗಳು ನೆಲೆಸಿದ್ದಾರೆ ಎಂಬುದಕ್ಕೆ ತುಮಕೂರು ನಾಗರಿಕ ಸಮಿತಿ ವತಿಯಿಂದ ಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮ ನಡೆಯುತ್ತಿರುವುದೇ ಸಾಕ್ಷಿ. ಭಾಷಣ, ಘೋಷಣೆ ಬಹಳಷ್ಟಿವೆ. ಆದರೆ ಅವುಗಳು ಕೃತಿಯಲ್ಲಿ ಗಟ್ಟಿಗೊಳ್ಳದಿದ್ದರೆ ನಿರರ್ಥಕವಾಗುತ್ತವೆ. ಕೃತಿರೂಪಕ್ಕೆ ಸ್ವಾಮೀಜಿಯೇ ಸಾಕ್ಷಿ. ಅರಿವು, ಆಚಾರ ಉಳ್ಳೊಡೆ ಜಂಗಮವೇ ಹೊರತು, ವಿಭೂತಿ, ರುದ್ರಾಕ್ಷಿ ಧರಿಸಿದೊಡೆ ಜಂಗಮರಾಗಲು ಸಾಧ್ಯವಿಲ್ಲ. ಈ ಅರಿವು ಆಚಾರ ಪೂಜ್ಯ ಸ್ವಾಮೀಜಿಯವರಲ್ಲಿ ಮಡುಗಟ್ಟಿತ್ತು ಎಂದು ಅವರು ತಿಳಿಸಿದರು.
ವ್ಯಕ್ತಿಗೆ ಸಮಾಜದ, ಕಾನೂನಿನ ಮತ್ತು ಆತ್ಮದ ಭಯವಿರಬೇಕು. ಇತ್ತೀಚೆಗೆ ಜನಕ್ಕೆ ಸಾಮಾಜಿಕ ಭಯ ಇಲ್ಲವಾಗಿದೆ. ಸುಮಾರು 50 ವರ್ಷಗಳ ಹಿಂದೆ ಜನತೆಯಲ್ಲಿ ಸಾಮಾಜಿಕ ಭಯವಿತ್ತು. ಜನ ಏನೆಂದುಕೊಂಡಾರು ಎಂಬ ಅಳುಕಿನಿಂದ ದುಷ್ಟಚಟುವಟಿಕೆಗಳಿಗೆ ವ್ಯಕ್ತಿ ಮುಂದಾಗುತ್ತಿರಲಿಲ್ಲ. ಆದರೆ ಆ ಭಯ ಇಂದು ಇಲ್ಲವಾಗಿದೆ. ಅಂತೆಯೇ ಇಂದು ಕಾನೂನಿನ ಭಯವೂ ಇಲ್ಲ.
ಒಂದು ಕಾಲದಲ್ಲಿ ಪೊಲೀಸ್ ಮಟ್ಟಿಲು ಹತ್ತಿದರೆ ಮರ್ಯಾದೆಗೆ ಕುಂದು ಎಂಬ ಭಾವನೆ ಇತ್ತು. ಕಾನೂನು ಕುರಿತು ಜೇಡನಬಲೆ ಎಂಬ ಮಾತಿದೆ. ಜೇಡನ ಬಲೆಗೆ ಸಣ್ಣ ಸಣ್ಣ ಕ್ರಿಮಿಕೀಟಗಳು ಸಿಕ್ಕಿಕೊಳ್ಳುತ್ತವೆಯೇ ಹೊರತು, ಹದ್ದು ಎಂದಿಗೂ ಸಿಕ್ಕಿಬೀಳುವುದಿಲ್ಲ. ಇಂದು ಜನತೆಯಲ್ಲಿ ಕಾನೂನಿನ ಭಯವೂ ಇಲ್ಲವಾಗಿದೆ. ಶಿವರಾಜ್‍ಪಾಟಿಲ್‍ರಂತಹ ವ್ಯಕ್ತಿ ನ್ಯಾಯಪೀಠದಲ್ಲಿದ್ದರೆ ಕಕ್ಷಿದಾರರರಿಗೆ ನ್ಯಾಯ ದೊರಕುವ ನಂಬಿಕೆ ಇರುತ್ತಿತ್ತು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಿ.ನ್ಯಾಯಾಧೀಶ ಶಿವರಾಜ್‍ಪಾಟಿಲ್‍ರನ್ನು ಉದಾಹರಿಸಿ, ಅವರು ಸಣ್ಣ ಅಪಸ್ವರ ಕೇಳಿಬಂದ ತಕ್ಷಣ ಲೋಕಾಯುಕ್ತ ಹುದ್ದೆಗೆ ರಾಜಿನಾಮೆ ನೀಡಿದರು ಎಂದು ತಿಳಿಸಿದರು.
ಆತ್ಮಸಾಕ್ಷಿಗೆ ಅನುಗುಣವಾಗಿ ಬಾಳುವವರಿಗೆ ಯಾವುದೇ ಕಾನೂನಿನ ಭಯವಿರುವುದಿಲ್ಲ. ಅಂತೆಯೇ ಸ್ವಾಮೀಜಿ ಧರ್ಮದ ತಳಹದಿ ತೋರಿ, ಭಕ್ತರಲ್ಲಿ ಆತ್ಮಜಾಗೃತಿ ಉಂಟುಮಾಡಿ, ಆತ್ಮಸಾಕ್ಷಿಯನ್ನು ಎಚ್ಚರಿಸಿದರು. ಅವರಿಗೆ ಜನ್ಮದಿನಾಚರಣೆ ಬೇಕಿಲ್ಲ, ಆದರೆ ಭಕ್ತರಿಗೆ ಬೇಕಿದೆ. ಜಗವೆಲ್ಲ ನಗುತಿರಲು ನೀನು ಅಳುತ್ತಾ ಬಂದೆ, ಜಗವೆಲ್ಲಾ ಅಳುತ್ತಿರಲು ನೀನು ನಗುತ್ತಾ ನಡೆ ಎಂದು ಡಿವಿಜಿ ಹೇಳಿದ್ದಾರೆ. ಡಿವಿಜಿ ಯಾವ ರೀತಿ ಸತ್ತರೋ ಗೊತ್ತಿಲ್ಲ, ಆದರೆ ಶಿವಕುಮಾರ ಮಹಾಸ್ವಾಮಿಗಳು ಜಗವೆಲ್ಲಾ ಅಳುತ್ತಿರಲು ನಗುತ್ತಾ ತೆರಳಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರಿನ ರಾಮಕೃಷ್ಣ ಆಶ್ರಮದ ಜಿತಕಾಮಾನಂದಜಿ ಮಾತನಾಡಿ, ಸ್ವಾಮೀಜಿಯನ್ನು ನೆನೆದಾಗಲೆಲ್ಲಾ ವಿವೇಕಾಚೂಡಾಮಣಿಯ ಶ್ಲೋಕವೊಂದು ನೆನಪಿಗೆ ಬರುತ್ತದೆ. ಪರಮಾತ್ಮನ ಶಾಂತಿಯ ಸಾಕ್ಷಾತ್ಕಾರ ಮಾಡಿದ ಸಂತರು ವಸಂತ ಋತುವಿನಂತೆ ಜನರ ಕ್ಷೇಮವನ್ನೇ ಕೋರುತ್ತಾರೆ. ಸಂಸಾರ ಸಾಗರ ದಾಟಿ ಹಲವರನ್ನು ದಾಟಿಸಲು ಜೀವನ ಮುಡಿಪಾಗಿಡುತ್ತಾರೆ. ದೇಶದ ಪ್ರಗತಿ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ತಿಳಿದು, ಎಲ್ಲರಿಗೂ ವಿದ್ಯೆ ನೀಡಿದ್ದಾರೆ.
ಸ್ವಾಮಿ ವಿವೇಕಾನಂದರು ಎಲ್ಲರಿಗೂ ವಿದ್ಯೆ ನೀಡದಿರುವುದೆ ದೇಶ ಹಿಂದುಳಿಯಲು ಕಾರಣ. ಎಲ್ಲರಿಗೂ ವಿದ್ಯೆ ನೀಡಿದರೆ ದೇಶವು ಪ್ರಗತಿ ಕಾಣುತ್ತದೆ ಎಂದು ತಿಳಿಸಿದ್ದರು. ಅಂತೆಯೇ ಸ್ವಾಮೀಜಿ ವಂಚಿತರಾದ ಸಹಸ್ರ ಸಹಸ್ರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಅವರ ಜೀವನಕ್ಕೆ ಬೆಳಕಾಗಿದ್ದಾರೆ. ಅವರು ವಿದ್ಯೆಯನ್ನು ಆಧ್ಯಾತ್ಮಿಕ ಬುನಾದಿಯ ಮೇಲಿರುವಂತೆ ಮಾಡಿದವರು.
ಭಾರತೀಯ ವಿದ್ಯಾಭ್ಯಾಸದ ಬೇರು ಆಧ್ಯಾತ್ಮಿಕವಾಗಿರಬೇಕು, ವೈಜ್ಞಾನಿಕವಾಗಿ ಅರಳಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಜನಸೇವೆಯೇ ಶಿವಪೂಜೆ ಎಂಬ ದೃಷ್ಟಿಕೋನ ಸ್ವಾಮೀಜಿಯವರದು. ಇಂದು ಸಿದ್ದಗಂಗಾ ಮಠವು ವಿಶ್ವದ ಗಮನ ಸೆಳೆದು ತೀರ್ಥಕ್ಷೇತ್ರವಾಗಿದೆ. ತುಮಕೂರಿಗೆ ಮಾತ್ರ ಮೀಸಲಾಗದೆ ಸ್ವಾಮೀಜಿಯ ಆದರ್ಶವನ್ನು ಇಡೀ ರಾಷ್ಟ್ರದ ಯುವಜನತೆಗೆ ತಿಳಿಸಬೇಕೆಂದರು.
ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತುಮಕೂರು ಜನತೆಗೆ ಆಭಾರಿಯಾದ ಅಭಿನಂದನೆ.
ತುಮಕೂರಿನ ಜನತೆ ಸ್ವಾಮೀಜಿ ಲಿಂಗೈಕ್ಯರಾದಾಗ ನೀಡಿದ ಆತಿಥ್ಯ, ನಡೆಸಿದ ದಾಸೋಹ ಹೆಮ್ಮೆ ಎನಿಸಿದೆ. ಜ್ಯೂನಿಯರ್ ಕಾಲೇಜು ಮೈದಾನಕ್ಕೂ ಸ್ವಾಮೀಜಿಗೂ ಅವಿನಾಭಾವ ಸಂಬಂಧವಿದೆ. ಅವರು ಇದೇ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಮಹಾತ್ಮಗಾಂಧಿಯವರು ತುಮಕೂರಿಗೆ ಬಂದಿದ್ದಾಗ. ಇಲ್ಲಿನ ಒಂದು ಕೊಠಡಿಯಲ್ಲಿ ತಂಗಿದ್ದರು. ಸ್ವಾಮೀಜಿಗೆ ಜನ್ಮದಿನಾಚರಣೆ ಇಷ್ಟವಿರಲಿಲ್ಲ. ಅದರಿಂದ ಏನು ಪ್ರಯೋಜನ ಎಂದು ಕೇಳುತ್ತಿದ್ದರು. ಆದರೆ ಭಕ್ತರ ಒತ್ತಾಯದ ಭಕ್ತಿಗೆ ಮಣಿದು ಮಠದಲ್ಲಿ ಜನ್ಮದಿನಾಚರಣೆ ನಡೆಸಲು ಒಪ್ಪಿಗೆ ಕೊಟ್ಟಿದ್ದರು. ಇಂದು ಅವರ ಅನುಪಸ್ಥಿತಿಯಲ್ಲಿ ಅವರು ಇದ್ದಾರೆಂಬ ಭಾವನೆಯಲ್ಲಿಯೇ ಅವರ ಜನ್ಮಜಯಂತಿಯನ್ನು ಆಚರಿಸುತ್ತಿದ್ದೀರಿ ಎಂದು ತಿಳಿಸಿದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣನವರು ತಮ್ಮ ಸ್ವಾಗತ ಭಾಷಣದಲ್ಲಿ ಸ್ವಾಮೀಜಿ ಲಿಂಗೈಕ್ಯರಾದಾಗ ರಾತ್ರಿಪೂರಾ ಬೆಳಗಿನವರೆಗೂ ಭಕ್ತರು ಸಾಗರೋಪಾದಿಯಲ್ಲಿ ಬಂದು ಅವರ ದರ್ಶನ ಪಡೆದರು. ಅವರ ಕುರಿತು ಸಾಕಷ್ಟು ಗ್ರಂಥಗಳು ಬಂದಿವೆ, ಮತ್ತಷ್ಟು ಬರಲಿವೆ, ಬರಬೇಕು. ಸಿರಿಗೆರೆ ಸ್ವಾಮೀಜಿಯವರನ್ನು ಸಂಪರ್ಕಿಸಿದಾಗ ನನಗೆ ಆಹ್ವಾನ ಪತ್ರಿಕೆ ಏನು ಬೇಡ, ವಾಟ್ಸಪ್ ಕಳುಹಿಸಿದರೆ ಸಾಕು ಎಂದು ತಿಳಿಸಿದ್ದರು.
ಗುರುಪರಂಪರೆಗೆ ತಕ್ಕಂತೆ ಸಮಯ ಮತ್ತು ಖರ್ಚು ವೆಚ್ಚವನ್ನು ಉಳಿಸುವ ರೀತಿ ತಿಳಿಸಿದ್ದರು. ಇವರು ನ್ಯಾಯ ನಿಷ್ಟುರಿ. ಬಹಳ ಹಿಂದೆಯೇ ವಚನಗಳನ್ನು ಇಂಟರ್‍ನೆಟ್‍ಗೆ ಅಳವಡಿಸಿ ಕಂಪ್ಯೂಟರ್ ಸ್ವಾಮೀಜಿ ಎಂದು ಹೆಸರು ಮಾಡಿದ್ದರು ಎಂದು ತಿಳಿಸಿದgನಿ.ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಭರತಖಂಡದ ಮಠಾಧಿಪತಿಗಳ ಪಾಲಿಗೆ ಹೊಳಪು ಕೊಟ್ಟು ಶಿವನ ಬೆಳಕಾದ ಶ್ರೀಗಳು ಪರಮಜ್ಞಾನವೆಂಬ ಸಸಿ ನೆಟ್ಟು, ಗುರುಭಕ್ತಿ ಎಂಬ ಮಣ್ಣು ಹಾಕಿ ಲಿಂಗಭಕ್ತಿಎಂಬ ಗೊಬ್ಬರ ಮತ್ತು ಜಂಗಮ ಭಕ್ತಿ ಎಂಬ ಜಲವನ್ನು ಹಾಕಿ, ಭಕ್ತಿ ಎಂಬ ವೃಕ್ಷವನ್ನು ಬೆಳೆದು ಆ ವೃಕ್ಷದ ಫಲವನ್ನು ಸಮಾಜಕ್ಕೆ ಧಾರೆ ಎರೆದವರು ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಎಂದು ತಿಳಿಸಿ, ಶ್ರೀಗಳ ಕುರಿತ ತಮ್ಮ ಸ್ವರಚಿತ ಕವನವನ್ನು ವಾಚಿಸಿದರು.
ಸಮಾರಂಭದಲ್ಲಿ ರೆಡ್‍ಕ್ರಾಸ್ ಸೊಸೈಟಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣನವರನ್ನು ಸನ್ಮಾನಿಸಲಾಯಿತು. ಕಂಬಾಳು ವಿರೂಪಾಕ್ಷಯ್ಯ ಸಂಪಾದಿತ ಶಿವಕುಮಾರ ಮಹಾಸ್ವಾಮಿಗಳನ್ನು ಕುರಿತ ಶರಣಬಂಧು ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಮತ್ತು ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ಉಪಸ್ಥಿತರಿದ್ದರು.
ಕುಮಾರಿ ಪೂಜ್ಯಮೋಹನ್ ಪ್ರಾರ್ಥಿಸಿದರು, ಕಾರ್ಯಕ್ರಮಕ್ಕೂ ಮೊದಲು ಮೃತ್ಯುಂಜಯ ದೊಡ್ಡವಾಳ್ ತಂಡದಿಂದ ವಚನಗಳನ್ನು ಹಾಡಲಾಯಿತು.