ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕರಾಳತೆ ಮುಂದುವರೆದಿದೆ. ಬುಧವಾರ ಜಿಲ್ಲೆಯ 128 ಜನರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 2209ಕ್ಕೆ ಏರಿದೆ. ಜೊತೆಗೆ, ತುಮಕೂರು ನಗರದ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ನಗರದ ದಾನಾ ನಗರದ 45 ವರ್ಷದ ಮಹಿಳೆ ಕೊರೊನಾ ಸೊಂಕು ತಗುಲಿ ಕೊನೆಯುಸಿರೆಳೆದಿದ್ದಾರೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟೀವ್ ವರದಿ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ನಗರದ ಪಿ.ಹೆಚ್.ಕಾಲೋನಿಯ 60 ವರ್ಷದ ಗಂಡಸು ಸೋಂಕು ತಗುಲಿ ಬುಧವಾರ ಅಸುನೀಗಿದರು. ಇವರು ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟೀವ್ ವರದಿ ಬಂದಿತ್ತು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 65ಕ್ಕೆ ಏರಿದೆ. ಮೃತರಲ್ಲಿ ತುಮಕೂರು ತಾಲ್ಲೂಕಿನ 46 ಜನ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಬುಧವಾರ ವರದಿಯಾದ 128 ಪ್ರಕರಣಗಳಲ್ಲಿ ಕುಣಿಗಲ್ ತಾಲ್ಲೂಕಿನ 28 ಜನರಿಗೆ, ತುಮಕೂರು ತಾಲ್ಲೂಕಿನ 27, ಕೊರಟಗೆರೆ ತಾಲ್ಲೂಕಿನ 25 ಜನರಿಗೆ ಸೋಂಕು ದೃಢಪಟ್ಟಿದೆ. ಶಿರಾ ತಾಲ್ಲೂಕಿನಲ್ಲಿ 21, ಮಧುಗಿರಿ ತಾಲ್ಲೂಕಿನಲ್ಲಿ 9, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 7, ಗುಬ್ಬಿ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕಿನ 2, ಪಾವಗಡ ತಾಲ್ಲೂಕಿನಲ್ಲಿ 2, ತಿಪಟೂರು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿದೆ. ಇವರಲ್ಲಿ 69 ಪುರುಷರು, 59 ಮಹಿಳೆಯರು ಸೇರಿದ್ದಾರೆ. 5 ವರ್ಷದೊಳಗಿನ ಇಬ್ಬರು ಮಕ್ಕಳು, 60 ವರ್ಷ ವಯಸ್ಸಿನ ಮೇಲ್ಪಟ್ಟ 20 ಜನ ಸೇರಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 2209 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 898, ಕುಣಿಗಲ್ ತಾ. 234, ಪಾವಗಡ ತಾ. 168, ಮಧುಗಿರಿ ತಾ. 158, ಶಿರಾ 150, ತಿಪಟೂರು ತಾ. 131, ಕೊರಟಗೆರೆ ತಾ. 135, ಚಿಕ್ಕನಾಯಕನಹಳ್ಳಿ ತಾ. 125, ಗುಬ್ಬಿ ತಾ. 108, ತುರುವೇಕೆರೆ ತಾ. 105 ಪ್ರಕರಣ ವರದಿಯಾಗಿವೆ.
ಬುಧವಾರ ಗುಣಮುಖರಾಗಿ ಆಸ್ಪತ್ರೆಯಿಂದ 90 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 1200 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 944 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಈವರೆಗೆ 2209 ಮಂದಿಗೆ ಸೋಂಕು ತಗುಲಿ, ಇವರಲ್ಲಿ 65 ಜನ ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ