ಬಳ್ಳಾರಿ
ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಈ ಬಾರಿ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ವಿಕಲಚೇತನ ಮತದಾರರಿಗೆ ಮತಗಟ್ಟೆ ಬಳಿ ವ್ಹೀಲ್‍ಚೇರ್ ಜೊತೆಗೆ ಅವರಿಗೆ ಮನೆಯಿಂದ ಮತಗಟ್ಟೆಗೆ ಕರೆತರಲು ಮತ್ತು ವಾಪಸ್ ಮನೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಿರುವುದಕ್ಕೆ ವಿಕಲಚೇತನರಿಂದ ಅಭಿನಂದನೆಗಳ ಮಹಾಪೂರ ವ್ಯಕ್ತವಾಗಿದೆ.
ಪ್ರತಿ ಗ್ರಾಪಂಗೆ ಒಂದರಂತೆ ಜಿಲ್ಲೆಯಲ್ಲಿರುವ 199 ಗ್ರಾಪಂಗಳಲ್ಲಿ ತಲಾ ಒಂದು , ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂರು, ಹೊಸಪೇಟೆ 5 ಮತ್ತು ಬಳ್ಳಾರಿ ಮಹಾನಗರದಲ್ಲಿ 10 ವಾಹನದ ವ್ಯವಸ್ಥೆ ಮಾಡಿದ ಪರಿಣಾಮ ಮತದಾನ ಮಾಡಲು ಬಯಕೆ ಇದ್ದರೂ ಸಹ ಅದೇಗೆ ಮತಗಟ್ಟೆಗೆ ಹೋಗುವುದು ಅಂತ ಮರುಗುತ್ತ ಹಾಗೂ ಮತದಾನ ತಪ್ಪಿಸಿಕೊಳ್ಳುತ್ತಿದ್ದ ಅನೇಕ ವಿಕಲಚೇತನರು ವಾಹನದ ವ್ಯವಸ್ಥೆ ಮಾಡಿದ ಪರಿಣಾಮ ಸಂತಸದಿಂದ ಸಹಾಯಕರೊಂದಿಗೆ ವಾಹನದಲ್ಲಿ ಕುಳಿತುಕೊಂಡು ಮತಗಟ್ಟೆಗೆ ಬಂದು ಮತದಾನ ಹಾಕುತ್ತಿರುವುದು ಬಳ್ಳಾರಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡುಬಂದಿತು.
ಈ ವಿಕಲಚೇತನರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಬಾರದು ಎಂಬ ಸದುದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ನೋಡಲ್ ಅಧಿಕಾರಿಗಳನ್ನು ನೇಮಿಸಿ ಅಚ್ಟುಕಟ್ಟಾಗಿ ಈ ವ್ಯವಸ್ಥೆ ಮಾಡಿದ್ದರ ಪ್ರತಿಫಲ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗಲಿಲ್ಲ. ಆ ವಾಹನಗಳಿಗೆ ವಿಶೇಷಚೇತನರಿಗೆ ವಾಹನದ ವ್ಯವಸ್ಥೆ ಎಂದು ಬರೆದಿದ್ದು ಗಮನಸೆಳೆಯಿತು.
ಹಡಗಲಿಯಲ್ಲಿ 2572 ವಿಕಲಚೇತನರು, ಹಗರಿಬೊಮ್ಮನಹಳ್ಳಿಯಲ್ಲಿ 3154, ವಿಜಯನಗರ ಕ್ಷೇತ್ರದಲ್ಲಿ 2244, ಕಂಪ್ಲಿ ಕ್ಷೇತ್ರದಲ್ಲಿ 1925, ಬಳ್ಳಾರಿ ಗ್ರಾಮೀಣದಲ್ಲಿ 1626, ಬಳ್ಳಾರಿ ನಗರದಲ್ಲಿ 1017, ಸಂಡೂರು ಕ್ಷೇತ್ರದಲ್ಲಿ 1733 ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ 2029 ವಿಕಲಚೇತನ ಮತದಾರರು ಸೇರಿದಂತೆ ಒಟ್ಟು 16300 ಮತದಾರರಲ್ಲಿ ಬಹುತೇಕರು ಮನೆಯಿಂದ ಹೊರಬಂದು ಉತ್ಸಾಹದಿಂದ ಮತಚಲಾಯಿಸಿರುವುದು ಕಂಡುಬಂದಿತು.
ಚುನಾವಣಾ ಆಯೋಗದ ಕೊನೆಗೂ ನಮ್ಮ ಮನದಾಳವನ್ನು ಅರ್ಥಮಾಡಿಕೊಂಡು ಪಿಕ್‍ಅಪ್‍ಗಾಗಿ ವಾಹನದ ವ್ಯವಸ್ಥೆ ಮಾಡಿದೆ. ವಿವಿಧ ಚುನಾವಣೆಗಳಲ್ಲಿ ಕಷ್ಟಪಟ್ಟು ಬಂದು ಮತಹಾಕುತ್ತಿದ್ದೆ ಈ ಬಾರಿ ವಾಹನದ ವ್ಯವಸ್ಥೆ ಮತ್ತು ವ್ಹೀಲ್ ಚೇರ್ ವ್ಯವಸ್ಥೆ ಇದ್ದುದರಿಂದ ಸಹಾಯಕರೊಂದಿಗೆ ಅರಾಮವಾಗಿ ಬಂದು ಮತದಾನ ಮಾಡಲು ಅನುಕೂಲವಾಯಿತು ಎಂದು 75 ವರ್ಷದ ರುದ್ರಮುನಯ್ಯ ಎಂಬುವವರು ಬಳ್ಳಾರಿ ನಗರದ ಮದಿಕೇರಿ ಭೀಮಯ್ಯ ಸ್ವಂತಲಿಂಗಣ್ಣ ಹೈಸ್ಕೂಲ್(ಎಂಬಿಎಸ್‍ಎಲ್ ಶಾಲೆ)ನಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ದಾಖಲಿಸಿ ಸಂತಸ ಹಂಚಿಕೊಂಡರು.
ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ 1901 ಮತಗಟ್ಟೆಗಳಲ್ಲಿಯೂ ಸಹ ಪೊಲೀಸ್ ಸಿಬ್ಬಂದಿ ಸೇರಿದಂತೆ ಚುನಾವಣಾ ಸಿಬ್ಬಂದಿ ವಿಕಲಚೇತನರಿಗೆ ಮತದಾನ ಮಾಡುವ ನಿಟ್ಟಿನಲ್ಲಿ ಸಹಕರಿಸುತ್ತಿರುವುದು ಕಂಡುಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ