ತುಮಕೂರು: ನಗರದಲ್ಲಿ 17 ಫೀವರ್ ಕ್ಲಿನಿಕ್

ತುಮಕೂರು

     ರಾಜ್ಯದಲ್ಲಿ ತಲೆದೋರಿರುವ ಕೋವಿಡ್-19 ನಿಯಂತ್ರಿಸಲು ಜಿಲ್ಲೆಯ ವಿವಿಧೆಡೆ ಫೀವರ್ ಕ್ಲಿನಿಕ್‍ಗಳನ್ನು ಆರಂಭ ಮಾಡಲಾಗಿದೆ. ತುಮಕೂರು ನಗರದಲ್ಲಿ 17 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್‍ಗಳ ಸೇವೆ ಆರಂಭಿಸಲಾಗಿದೆ.

     ಪ್ರತಿ ಫೀವರ್ ಕ್ಲಿನಿಕ್‍ನಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಸ್ಟಾಫ್ ನರ್ಸ್, ಒಬ್ಬರು ಡಿ ಗ್ರೂಪ್ ನೌಕರರು ಸೇವೆಯಲ್ಲಿದ್ದಾರೆ. ಇಲ್ಲಿ ಥರ್ಮಲ್ ಸ್ಕ್ಯಾನಿಂಗ್, ಬಿಪಿ ಪರೀಕ್ಷೆ, ಸಾಮಾನ್ಯ ಕಾಯಿಲೆಗಳ ಪರೀಕ್ಷೆ ನಡೆಸಿ, ವೈದ್ಯರು ಅಗತ್ಯ ಸಲಹೆ ನೀಡಿ, ಔಷಧಿ ನೀಡುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಬಸ್ ಸೌಕರ್ಯ, ಸಾರ್ವಜನಿಕರ ವಾಹನ ಸಂಚಾರದ ನಿರ್ಬಂಧ ಇರುವುದರಿಂದ ನಾಗರೀಕರಿಗೆ ಆರೋಗ್ಯ ತಪಾಸಣೆಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಆರೋಗ್ಯ ಇಲಾಖೆ ವಿವಿಧೆಡೆ ಫೀವರ್ ಕ್ಲಿನಿಕ್‍ಗಳನ್ನು ಆರಂಭಿಸಿದೆ. ಜ್ವರ ಸಂಬಂಧಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾರ್ವಜನಿಕರು ಸಮೀಪದ ಫೀವರ್ ಕ್ಲಿನಿಕ್‍ಗೆ ಹೋಗಿ ವೈದ್ಯರನ್ನು ಸಂಪರ್ಕಿಸಿ ಆಯೋಗ್ಯ ತಪಾಸಣೆ, ಸಲಹೆ ಪಡೆಯಬಹುದು.

     ನಗರದ ಕೋತಿತೋಪಿನ ಆರೋಗ್ಯ ಕೇಂದ್ರ, ಹನುಂತಪುರದ ಬೈಲಾಂಜನೇಯ ದೇವಸ್ಥಾನದಲ್ಲಿ, ಅಗ್ರಹಾರದ ಆರೋಗ್ಯ ಕೇಂದ್ರ, ದಿಬ್ಬೂರಿನ ಸಮುದಾಯ ಭವನ, ಶಾಂತಿನಗರದ ಆರೋಗ್ಯ ಕೇಂದ್ರ, ಜನತಾ ಕಾಲೋನಿಯ ಅಂಗನವಾಡಿ ಕೇಂದ್ರ, ಗೆದ್ದಲಹಳ್ಳಿಯ ಅಂಗನವಾಡಿ ಕೇಂದ್ರ,, ಗೂಡ್‍ಶೆಡ್ ಕಾಲೋನಿಯ ಅಂಗನವಾಡಿ ಕೇಂದ್ರ, ಶಿರಾ ಗೇಟ್ ಆರೋಗ್ಯ ಕೇಂದ್ರ, ಸತ್ಯಮಂಗಲ ಅಂಗನವಾಡಿ ಕೇಂದ್ರ, ಅಂತರಸನಹಳ್ಳಿಯಲ್ಲಿ ಫೀವರ್ ಕ್ಲಿನಿಕ್ ಗಳನ್ನು ತೆರೆಯಲಾಗಿದೆ.

     ಇದಲ್ಲದೆ, ಕುರಿ ಪಾಳ್ಯದ ಹಿರಿಯ ಪ್ರಥಾಮಿಕ ಶಾಲೆ, ಟೂಡಾ ಲೇಔಟ್ ರಾಜೀವ್ ಗಾಂಧಿನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಪಿ.ಹೆಚ್.ಕಾಲೋನಿಯ ಸಿದ್ಧಾರ್ಥ ಪ್ರಾಥಮಿಕ ಶಾಲೆ, ಶೆಟ್ಟಿಹಳ್ಳಿ ಗೇಟ್‍ನ ಆರೋಗ್ಯ ಕೇಂದ್ರ, ಕ್ಯಾತ್ಸಂದ್ರದ ಆರೋಗ್ಯ ಕೇಂದ್ರ, ಸಿದ್ಧಗಂಗಾ ಮಠದ ಆರೋಗ್ಯ ಕೇಂದ್ರದಲ್ಲಿ ಫೀವರ್ ಕ್ಲಿನಿಲ್ ತೆರೆಯಲಾಗಿದ್ದು ಸಾರ್ವಜನಿಕರು ಆರೋಗ್ಯ ಸೇವೆ ಪಡೆಯಬಹುದು.

    ಕೋವಿಡ್-19 ಸಂಬಂಧಿಸಿದ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ ಮಾಡದೆ ಸಮೀಪದ ಫೀವರ್ ಕ್ಲಿನಿಕ್‍ಗೆ ಬಂದು ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಲಹೆ ಪಡೆಯಬೇಕು ಎಂದು ಫೀವರ್ ಕ್ಲಿನಿಕ್‍ಗಳ ನೋಡೆಲ್ ಅಧಿಕಾರಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಜಿ. ಕೇಶವ್‍ರಾಜ್ ಸಲಹೆ ಮಾಡಿದ್ದಾರೆ.

     ಆರೋಗ್ಯ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ನಾಗರೀಕರ ಆರೋಗ್ಯ ಮಾಹಿತಿ ಪಡೆಯುತ್ತಾರೆ, ಚಿಕಿತ್ಸೆ ಅಗತ್ಯವಿರುವವರಿಗೆ ವೈದ್ಯರ ತಪಾಸಣೆಗೆ ಸಲಹೆ ಮಾಡುತ್ತಾರೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಮುಂತಾದವು ಕೊರೊನಾದ ಲಕ್ಷಣಗಳಾಗಿರಬಹುದು. ಹಾಗೆಂದು, ಕಾಣಿಸಿಕೊಳ್ಳುವ ಎಲ್ಲಾ ಜ್ವರ, ಕೆಮ್ಮು, ನೆಗಡಿಗೆ ಕೊರೊನಾ ವೈರಸ್ ಕಾರಣವೆಂದೇನೂ ಅಲ್ಲ, ಆದರೂ ನಿರ್ಲಕ್ಷ ಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು.

    ಫೀವರ್ ಕ್ಲಿನಿಕ್‍ಗಳಲ್ಲಿ ರೋಗಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ವೈದ್ಯಾಧಿಕಾರಿ ರೋಗಿಯ ತಪಾಸಣೆ ಮಾಡುತ್ತಾರೆ. ಸಾಮಾನ್ಯ ಜ್ವರ, ಕೆಮ್ಮುಗಳಿಗೆ ಆಸ್ಪತ್ರೆಯಲ್ಲೇ ಲಭ್ಯವಿರುವ ಮಾತ್ರೆಗಳÀನ್ನು ನೀಡುತ್ತಾರೆ. ಕೊರೊನಾ ಶಂಕೆ ಕಂಡುಬಂದರೆ ರೋಗಿಯನ್ನು ವೈದ್ಯರು ಮೇಲುಮಟ್ಟದ ಆಸ್ಪತ್ರೆಗೆ ನಿರ್ದೇಶಿಸುತ್ತಾರೆ. ಅಲ್ಲಿ ಉಚಿತವಾಗಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತದೆ. ಇಂತಹ ರೋಗ ಲಕ್ಷಣಗಳು ಕಂಡುಬಂದಲ್ಲಿ ಕಡೆಗಣಿಸದೆ ಫೀವರ್ ಕ್ಲಿನಿಕ್‍ಗೆ ತಪ್ಪದೇ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಡಾ. ಕೇಶವ್‍ರಾಜ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap