ದಾವಣಗೆರೆ:
ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ, ರೌಡಿ ಶೀಟರ್ ಬುಳ್ಳ ನಾಗ ಅಲಿಯಾಸ್ ನಾಗರಾಜನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಣುಮ ಅಲಿಯಾಸ್ ಸಂತೋಷಕುಮಾರ್, ಮೋಟ ಸೀನ ಅಲಿಯಾಸ್ ಶ್ರೀನಿವಾಸ್ ಸೇರಿದಂತೆ ಒಟ್ಟು 18 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.
ಮೂರು ತಂಡ ರಚನೆ:
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.11ರಂದು ರಾತ್ರಿ ಎಸ್ಸೆಸ್ ಹೈಟೆಕ್ ಆಸ್ಪತ್ರೆ ಹಿಂಭಾಗದ ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗದಲ್ಲಿ ಹಳೆಯ ದ್ವೇಷದ ಹಿನ್ನೆಯಲ್ಲಿ ರೌಡಿ ಶೀಟರ್ ಬುಳ್ಳ ನಾಗನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿತ್ತು .
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆಗಾರರ ಪತ್ತೆಗಾಗಿ ನಗರ ಕೇಂದ್ರ ಸಿಪಿಐ ಇ.ಆನಂದ್, ಡಿಸಿಐಬಿ ಇನ್ಸಪೆಕ್ಟರ್ ಲಕ್ಷ್ಮಣ ನಾಯ್ಕ, ನಗರ ವೃತ್ತ ನಿರೀಕ್ಷಕ ಶ್ರೀನಿವಾಸ ಹಾಗೂ ಸಿಬ್ಬಂದಿ ಒಳಗೊಂಡ 3 ತಂಡ ರಚಿಸಲಾಗಿತ್ತು. ಈ ತಂಡಗಳು ಕಾರ್ಯಾಚರಣೆ ನಡೆಸಿ 18 ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಯರ್ಯಾರು ಆರೋಪಿಗಳು:
ಮೊದಲು ಸಂತೋಷಕುಮಾರ್.ಕೆ ಅಲಿಯಾಸ್ ಕಣುಮ ಹಾಗೂ ಪರಶುರಾಮ.ಎ ಅಲಿಯಾಸ್ ಪರಸನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಈ ಕೃತ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆಂಬುದರ ಬಗ್ಗೆ ಮಾಹಿತಿ ಪಡೆದು, ಇನ್ನುಳಿದ ಭಾರತ ಕಾಲೋನಿ ನಿವಾಸಿ ವಿಜಿ ಅಲಿಯಾಸ್ ಕೆ.ವಿಜಯ ನಾಯ್ಕ, ಕಬ್ಬೂರು ಬಸಪ್ಪ ನಗರದ ಆ್ಯಂಡಿ ಅಲಿಯಾಸ್ ಪವನಕುಮಾರ, ಭಾರತ ಕಾಲೋನಿಯ ಮಾಂತೇಶ ಅಲಿಯಾಸ್ ಮಹಾಂತೇಶ, ಚಿಕ್ಕನಹಳ್ಳಿ ಪಟ್ಲಿ ಅಲಿಯಾಸ್ ಜಿ.ನವೀನ, ಹಳೆ ಚಿಕ್ಕನಹಳ್ಳಿಯ ರಾಕಿ ಅಲಿಯಾಸ್ ಪಿ.ರಾಕೇಶ, ಕಾರದ ಪುಡಿ ಮಂಜ ಅಲಿಯಾಸ್ ಎಂ.ಮಂಜುನಾಥ, ಟಿ.ಟಿ.ವಿಜಯ ಅಲಿಯಾಸ್ ಎಸ್.ವಿಜಯ್, ಕಬಡ್ಡಿ ಶಿವು ಅಲಿಯಾಸ್ ಚಿಕ್ಕನಹಳ್ಳಿ ಶಿವು ಊರ್ಫ್ ಶಿವಕುಮಾರ, ಎ.ಮೈಲಾರಿ, ಬೂದಾಳ್ ರಸ್ತೆಯ ಆರ್‍ಎಕ್ಸ್ ಅಲಿಯಾಸ್ ರಮೇಶ, ಭಾರತ ಕಾಲೋನಿಯ ಎನ್.ಮನೋಜ ಅಲಿಯಾಸ್ ಕೊಲಂಬಿ, ಮೋಟ ಸೀನ ಅಲಿಯಾಸ್ ಶ್ರೀನಿವಾಸ, ಕೆಟಿಜೆ ನಗರ ಗಬ್ಬರ್ ಅಲಿಯಾಸ್ ಸುಭಾನಿ, ರಾಮ ನಗರದ ರಾಬಿ ಅಲಿಯಾಸ್ ಎಐಜೆ ಕುಮಾರ, ವಿಜಯ ನಗರ ಬಡಾವಣೆಯ ನಿಖಿಲ್ ಅಲಿಯಾಸ್ ನೀಲಗಿರಿ, ಲೆನಿನ್ ನಗರದ ಪರ್ಮಿ ಅಲಿಯಾಸ್ ಪರಮೇಶ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರನ್ನೂ ಈಗಾಗಲೇ ನ್ಯಾಯಾಂಧ ಮುಂದೆ ಹಾಜುರು ಪಡಿಸಿ, ಹೆಚ್ಚಿನ ತನಿಖೆ ನಡೆಸಲಿಕ್ಕಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಇದರಲ್ಲಿ ಇನ್ಯಾರ್ಯಾರು ಭಾಗಿ ಆಗಿರಬಹುದು ಎಂಬುದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.
ನಿಗಾ ಇಟ್ಟು ಕೊಂದ್ರು:
ರೌಡಿ ಶೀಟರ್‍ಗಳಾದ ಕಣಮ, ಮೋಟ ಸೀನ ಹಾಗೂ ಬುಳ್ಳ ನಾಗನ ಗ್ಯಾಂಗ್‍ಗಳ ಮಧ್ಯೆ ಹಿಂದಿನಿಂದ ವೈಯಕ್ತಿಕ ದ್ವೇಷವಿತ್ತು. ಬುಳ್ಳ ನಾಗನ ಹತ್ಯೆಗೆ ಹಿಂದೆ 2 ಸಲ ಪ್ರಯತ್ನ ನಡೆದಿದ್ದವು. ಆದರೆ, ಈ ಬಾರಿ ಬಂಧಿತರೆಲ್ಲರೂ ಪೂರ್ವನಿಯೋಜಿತವಾಗಿ ಸಂಚು ರೂಪಿಸಿ, ಬುಳ್ಳ ನಾಗನ ಚಲನವಲನಗಳನ್ನು ಗಮನಿಸಿ, ಆತ ಯಾವ ಸಮಯದಲ್ಲಿ ಎಲ್ಲಿಗೆ ಹೋದ, ಯಾವ ರಸ್ತೆಯಲ್ಲಿ ಹೋದ ಎಂಬುದರ ಬಗ್ಗೆ ಇಂಚಿಂಚು ಮಾಹಿತಿ ಪಡೆದು, ಮೇ 11 ರಂದು ರಾತ್ರಿ ಕೆಎಸ್‍ಆರ್‍ಟಿಸಿ ಡಿಪೋ ಬಳಿಯಲ್ಲಿ ಬುಳ್ಳ ನಾಗ ಬೈಕ್‍ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಹೊಂಚು ಹಾಕಿ ಕೂತಿದ್ದ ದುಷ್ಕರ್ಮಿಗಳ ತಂಡವು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ. ಬಂಧಿತ 18 ಜನ ಆರೋಪಿಗಳ ಪೈಕಿ ಕೆಲವರು ಹತ್ಯೆಗೆ ಸಂಚು ರೂಪಿಸಿದವರಾಗಿದ್ದರೆ, ಮತ್ತಷ್ಟು ಜನ ಹತ್ಯೆಯಲ್ಲಿ ಭಾಗಿಯಾದರೂ ಇದ್ದಾರೆಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಅವರು ವಿವರಿಸಿದರು.
ಕಣಮ ಸೇರಿದಂತೆ ಬಂಧಿತರ ಬ್ಯಾಂಕ್ ಖಾತೆ, ಆರೋಪಿಗಳು, ಕುಟುಂಬ ಸದಸ್ಯರ ಹೆಸರಿನ ಆಸ್ತಿ ಪಾಸ್ತಿ, ವ್ಯವಹಾರ ನಡೆಸಿರುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಕಣಮ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಆಸ್ತಿ ಮಾಡಿದ್ದು, ಅಷ್ಟು ಆಸ್ತಿ ಹೇಗೆ ಬಂದಿತೆಂಬ ಬಗ್ಗೆಯೂ ತನಿಖೆ ಸಾಗಲಿದೆ. ಅಲ್ಲದೇ, ಇಡೀ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಕಾಲ್ ಡಿಟೇಲ್ಸ್, ಸಿಸಿ ಕ್ಯಾಮೆರಾಗಳ ಪುಟೇಜಸ್, ಕೊಲೆ ಮಾಡುವ ಮತ್ತು ನಂತರ ಮೊಬೈಲ್ ಕರೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಬಂಧಿತರ ಪೈಕಿ ಕಣಮ ಮತ್ತು ಮೋಟ ಸೀನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಪ್ರಕರಣಗಳಿವೆ. ಪ್ರಕರಣದ 17ನೇ ಆರೋಪಿ ನಿಖಿಲ್ ಅಲಿಯಾಸ್ ನೀಲಗಿರಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂಬುದಾಗಿ ಹೇಳಿಕೊಂಡಿದ್ದು, ಆ ಸಂಘಟನೆ ಕೇಂದ್ರ ಕಚೇರಿಗೆ ಪತ್ರ ಬರೆದು, ಮಾಹಿತಿ ಕೇಳಿದ್ದೇವೆ. ಬುಳ್ಳ ನಾಗ ಹತ್ಯೆ ಪ್ರಕರಣದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆಂಬ ಬಗ್ಗೆಯೂ ತನಿಖೆ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್, ನಗರ ಡಿವೈಎಸ್‍ಪಿ ನಾಗರಾಜ, ಸಿಪಿಐಗಳಾದ ಇ.ಆನಂದ್, ಲಕ್ಷ್ಮಣ ನಾಯ್ಕ, ಶ್ರೀನಿವಾಸ, ಸಬ್ ಇನ್ಸಪೆಕ್ಟರ್‍ಗಳಾದ ಸುನಿಲಕುಮಾರ, ಕಿರಣಕುಮಾರ, ವೀರಬಸಪ್ಪ ಕುಸುಲಾಪುರ, ಸಿಬ್ಬಂದಿಯಾದ ಕೆ.ಸಿ.ಮಜಿದ್, ರಾಘವೇಂದ್ರ, ಅಶೋಕ, ರಮೇಶ ನಾಯ್ಕ, ಶಾಂತರಾಜ, ಸಿದ್ದೇಶ, ನಾಗರಾಜ, ಎಎಸ್‍ಐ ರಾಘವೇಂದ್ರ, ತಿಪ್ಪೇಸ್ವಾಮಿ, ಆಂಜನೇಯ, ಲೋಕಾನಾಯ್ಕ, ಮಂಜುನಾಥ, ನರೇಂದ್ರ ಸ್ವಾಮಿ, ನಟರಾಜಾಚಾರಿ, ಗೋಪಿನಾಥ ನಾಯ್ಕ, ಬುಡೇನ್ ವಲಿ, ದ್ಯಾಮೇಶ, ತಿಮ್ಮಣ್ಣ, ಸುರೇಶ, ಯೋಗೀಶ ನಾಯ್ಕ, ಬಸವರಾಜ, ಕಣ್ಣಪ್ಪ, ಮಂಜುನಾಥ, ನಾಗರಾಜ, ಎಸ್.ಚಂದ್ರಪ್ಪ, ಗಣಕ ಯಂತ್ರ ವಿಭಾಗದ ರಾಘವೇಂದ್ರ, ಪ್ರಕಾಶ, ಚಾಲಕರಾದ ಮಂಜುನಾಥ, ಶಂಕರ, ರಾಮಚಂದ್ರ ಮತ್ತಿತರರು ಹಾಜರಿದ್ದರು.