ತುಮಕೂರು
ತುಮಕೂರು ನಗರದ ವಿವಿಧೆಡೆ ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದ 21 ಶುದ್ಧಕುಡಿಯುವ ನೀರಿನ ಘಟಕಗಳನ್ನು ತುಮಕೂರು ಮಹಾನಗರ ಪಾಲಿಕೆ (ಟಿ.ಎಂ.ಪಿ.)ಯು ತನ್ನ ಸುಪರ್ದಿಗೆ ಅಧಿಕೃತವಾಗಿ ತೆಗೆದುಕೊಂಡ ಎರಡನೆಯ ದಿನವಾದ ಗುರುವಾರ (ಮೇ 9) ನೀರಿನ ಘಟಕಗಳಿಂದ ಒಟ್ಟಾರೆ 18,409 ರೂ. ಮೊತ್ತ ಸಂಗ್ರಹವಾಗಿದೆ. ಬೆಳಗ್ಗೆ ಮತ್ತು ಸಂಜೆಯ ಪಾಳಿಯಿಂದ ಒಟ್ಟಾರೆ ಈ ಮೊತ್ತ ಸಂಗ್ರಹವಾಗಿದೆ.
ಪಾಲಿಕೆಯು ಈ ಘಟಕಗಳನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಬುಧವಾರ (ಮೇ 8) ಮಧ್ಯಾಹ್ನದ ಪಾಳಿಯಲ್ಲಿ ಈ ಘಟಕಗಳಿಂದ 10,252 ರೂ. ಮೊತ್ತ ಸಂಗ್ರಹವಾಗಿತ್ತು. ಎರಡನೆಯ ದಿನವಾದ ಗುರುವಾರ ಈ ಮೊತ್ತ 18,409 ರೂ.ಗಳಿಗೆ ಏರಿದೆ. ಪಾಲಿಕೆಯು ಪ್ರತಿ ಬಿಂದಿಗೆ ಶುದ್ಧ ನೀರಿಗೆ 3 ರೂ. ಹಾಗೂ 20 ಲೀಟರ್ ಸಾಮರ್ಥ್ಯದ ಒಂದು ಕ್ಯಾನ್‍ಗೆ 5 ರೂ. ಎಂದು ದರವನ್ನು ನಿಗದಿಪಡಿಸಿ, ಆ ರೀತಿಯಲ್ಲೇ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದೆ.
ಈ 21 ಘಟಕಗಳ ಪೈಕಿ ಕೆಲವು ಘಟಕಗಳಲ್ಲಿ ತಾಂತ್ರಿಕ ನ್ಯೂನತೆಗಳು ಕಂಡುಬಂದಿದ್ದು, ಅವುಗಳನ್ನು ಪಾಲಿಕೆಯ ಅಧಿಕಾರಿಗಳು ಆದ್ಯತೆಯಿಂದ ಸರಿಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಈ ಎಲ್ಲ 21 ಘಟಕಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲ 21 ಘಟಕಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಾದರೆ, ಪ್ರತಿನಿತ್ಯ ಒಟ್ಟು ಸುಮಾರು 25 ಸಾವಿರ ರೂ.ಗಳಿಗೂ ಅಧಿಕ ಮೊತ್ತ ಈ ಘಟಕಗಳಿಂದ ಪಾಲಿಕೆಗೆ ಸಂಗ್ರಹವಾಗಬಹುದು” ಎಂದು ನಿರೀಕ್ಷಿಸಲಾಗುತ್ತಿದೆ. ಪ್ರತಿನಿತ್ಯ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಈ 21 ಘಟಕಗಳು ಕಾರ್ಯನಿರ್ವಹಿಸುವಂತೆ ವೇಳೆಯನ್ನು ನಿಗದಿಪಡಿಸಲಾಗಿದೆ.
ಪರಿಸ್ಥಿತಿಯ ದುರ್ಬಳಕೆ:ಕ್ಯಾನ್‍ಗೆ 20 ರೂ. ಸಂಗ್ರಹ
ಈ ಮಧ್ಯ ನಗರದ ಕೆಲವು ಬಡಾವಣೆಗಳಲ್ಲಿರುವ ಖಾಸಗಿ ನೀರಿನ ಘಟಕಗಳು ಈಗಿನ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಪ್ರತಿ ಕ್ಯಾನ್‍ಗೆ 20 ರೂ.ಗಳನ್ನು ಸಂಗ್ರಹ ಮಾಡುತ್ತಿರುವ ಬಗ್ಗೆಯೂ ತುಮಕೂರು ಮಹಾನಗರ ಪಾಲಿಕೆಗೆ ಸಾರ್ವಜನಿಕ ರಿಂದ ದೂರುಗಳು ಬರುತ್ತಿವೆ. “ಪಾಲಿಕೆಯ ಜಾಗದಲ್ಲಿ, ಪಾಲಿಕೆಯ ನೀರನ್ನೇ ಬಳಸಿಕೊಳ್ಳುತ್ತಿರುವ ಈ ಖಾಸಗಿ ಘಟಕಗಳು ಇದೀಗ ಮನಬಂದಂತೆ ದರ ವಸೂಲಿ ಮಾಡುತ್ತಿವೆ. ಇವುಗಳನ್ನೂ ಈಗ ನಿಯಂತ್ರಿಸಬೇಕು” ಎಂದು ಈಗ ಮಹಾನಗರ ಪಾಲಿಕೆಯ ಕೆಲವು ಸದಸ್ಯರುಗಳೂ ದೂರತೊಡಗಿದ್ದಾರೆ.