ಒಂದು ವಾರ ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್

ಬೆಂಗಳೂರು

      ಮಾರಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ-ಕಾಲೇಜುಗಳು,ಶಾಪಿಂಗ್ ಮಾಲ್‍ಗಳು, ಚಿತ್ರ ಮಂದಿರಗಳು,ಪಬ್‍ಗಳು,ಬಾರ್ ಅಂಡ್ ರೆಸ್ಟೋರೆಂಟ್‍ಗಳು,ವಿವಿಗಳು ಸೇರಿದಂತೆ ಜನ ಸೇರುವ ಎಲ್ಲ ಕೇಂದ್ರಗಳು ಒಂದು ವಾರ ಕಾಲ ಬಂದ್ ಆಗಲಿವೆ.

      ಇಂದು ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಘೋಷಣೆ ಮಾಡಿದ್ದು,ಒಂದು ವಾರದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು.
ಬೇಸಿಗೆ ಶಿಬಿರಗಳು,ನೈಟ್ ಕ್ಲಬ್ಬುಗಳುಕ್ರೀಡಾಕೂಟಗಳು,ಸಭೆ,ಸಮಾರಂಭಗಳನ್ನು ನಡೆಸದಬಾರದು ಎಂದ ಅವರು,ಈಗಾಗಲೇ ನಡೆಯುತ್ತಿರುವ ಶಾಲಾ ಪರೀಕ್ಷೆಗಳು ನಡೆಯುತ್ತವೆ ಸರ್ಕಾರಿ ಕಛೇರಿಗಳು,ವಿಧಾನಮಂಡಲ ಅಧಿವೇಶನ ಎಂದಿನಂತೆ ನಡೆಯಲಿವೆ ಎಂದರು.

      ಖಾಸಗಿ ಆಸ್ಪತ್ರೆಗಳು ಕೊರೋನಾ ವೈರಸ್ ಸೋಂಕು ಇರುವವರು ಬಂದರೆ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದ ಅವರು,ವಿದೇಶ ಪ್ರಯಾಣದಿಂದ ಹಿಂತಿರುಗಿದವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.ವಿದೇಶದಿಂದ ಹಿಂತಿರುಗಿದವರು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ವ್ಯಕ್ತಿ-ವ್ಯಕ್ತಿಗಳ ನಡುವೆ ಕನಿಷ್ಟ ಆರು ಅಡಿ ಅಂತರವಿರುವಂತೆ ನೋಡಿಕೊಳ್ಳಬೇಕು ಎಂದ ಅವರು,ಕೊರೋನಾ ತಡೆಗಾಗಿ ಇನ್ಯಾವುದೇ ರೀತಿಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾದರೆ ಅದನ್ನು ಮಾಡುತ್ತೇವೆ ಎಂದು ನುಡಿದರು.

     ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಹಾಲು ಮಾರಾಟ,ಔಷಧ ಮಾರಾಟ,ಹೋಟೆಲ್‍ಗಳು ಇರಲಿದ್ದು ಉಳಿದಂತೆ ಬಹುತೇಕ ಎಲ್ಲ ಕೇಂದ್ರಗಳು ಬಂದ್ ಆಗಲಿದ್ದು ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಅವರು ಹೇಳಿದರು.

     ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಒಂದು ವಾರ ಕಾಲ ಸ್ತಬ್ಧವಾಗಲಿದ್ದು ವಿವಿದ ಸೆಮಿನಾರುಗಳು,ಅದ್ಧೂರಿ ಮದುವೆಗಳನ್ನು ನಡೆಸಬಾರದು ಎಂದ ಅವರು,ಸರಳ ಮದುವೆಗಳಿಗೆ ಈ ನಿರ್ಭಂಧವಿಲ್ಲ ಎಂದರು. ರಾಜ್ಯದ ಎಲ್ಲ ಕಡೆ ಉದ್ಯಾನವನಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ ಎಂದ ಅವರು,ಕೊರೋನಾ ವೈರಸ್ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲೇಬೇಕಿದ್ದು ಜನ ಸಹಕರಿಸಬೇಕು ಎಂದು ಹೇಳಿದರು.

     ಈಗ ಶಾಲೆಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳು ಎಂದಿನಂತೆ ಮುಂದುವರಿಯಲಿ.ಆದರೆ ತ್ವರಿತಗತಿಯಲ್ಲಿ ಅದನ್ನು ಪೂರ್ಣಗೊಳಿಸ ಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಮದುವೆ,ನಿಶ್ಚಿತಾರ್ಥದಂತಹ ಸಮಾರಂಭಗಳು ಸರಳವಾಗಿದ್ದರೆ ಒಳ್ಳೆಯದು .ಸಾವಿರ ಜನ ಸೇರುವಲ್ಲಿ ನೂರು ಜನ ಸೇರಲಿ.ಅದಾಗದಿದ್ದರೆ ಕಾರ್ಯಕ್ರಮವನ್ನು ಮುಂದೂಡುವುದು ಸೂಕ್ತ ಎಂದರು . ಮುಖ್ಯ ಮಂತ್ರಿಗಳು ಮನವಿ ಮಾಡಿಕೊಳ್ಳುತ್ತಿರುವಂತೆ ರಾಜ್ಯದ ಎಲ್ಲ ವಲಯಗಳಿಂದ ಪೂರಕ ಪ್ರತಿಕ್ರಿಯೆ ಬರತೊಡಗಿದವಲ್ಲದೆ ಕೊರೋನಾ ತಡೆಗಟ್ಟಲು ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ತಮ್ಮ ಸಹಮತ ವ್ಯಕ್ತ ಪಡಿಸಿದವು.

     ರಾಜ್ಯದ ಗುಲ್ಬರ್ಗದಲ್ಲಿ ಕೊರೋನಾ ವೈರಸ್‍ನಿಂದ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇಂದು ಕ್ಷಿಪ್ರಗತಿಯಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿತಲ್ಲದೆ ಕೊರೋನಾ ತಡೆಗಟ್ಟಲು ಜನ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿವರಿಸಿತು.

    ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ,ಆರೋಗ್ಯ ಸಚಿವ ಬಿ.ಶ್ರೀರಾಮುಲು,ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಸೇರಿದಂತೆ ಹಲ ಪ್ರಮುಖರು ಇಂದಿನ ಸಭೆಯಲ್ಲಿ ಭಾಗವಹಿಸಿ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಿದರು.ರಾಜ್ಯದ ಇತಿಹಾಸದಲ್ಲೇ ಈ ರೀತಿ ಜನ ಸೇರುವ ಕೇಂದ್ರಗಳು ಈ ಮಟ್ಟದಲ್ಲಿ ಬಂದ್ ಆಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು ನೆರೆಯ ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆಯೂ ಸರ್ಕಾರ ಆತಂಕಗೊಂಡಿದೆ.

    ಇದೇ ರೀತಿ ಕೊರೋನಾ ವೈರಸ್ ಪತ್ತೆಗಾಗಿ ತ್ವರಿತಗತಿಯಲ್ಲಿ ಹೆಚ್ಚುವರಿ ಲ್ಯಾಬ್‍ಗಳನ್ನು ರಾಜ್ಯದ ವಿವಿಧ ಕಡೆ ಸ್ಥಾಪಿಸಬೇಕು.ಅದೇ ರೀತಿ ಖಾಸಗಿ ಆಸ್ಪತ್ರೆಗಳ ಜತೆ ಸಮನ್ವಯತೆ ಸಾಧಿಸಲು ಒಂದು ಸಮಿತಿ ರಚಿಸಬೇಕು ಎಂದು ಸಭೆ ತೀರ್ಮಾನ ಮಾಡಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link