ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗ ಕೋಟೆ ಅಭಿವೃದ್ದಿಗೆ ಎರಡು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಇದರಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪುರಾತತ್ವ ಇಲಾಖೆ ಅಧೀಕ್ಷಕಿ ಕೆ.ಮೂರ್ತೇಶ್ವರಿ ತಿಳಿಸಿದರು.
ಕೋಟೆ ಮುಖ್ಯರಸ್ತೆ ಗಾರೆಬಾಗಿಲಿನಲ್ಲಿ ಭಾನುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಉಪವಲಯ ಕಚೇರಿ ಉದ್ಘಾಟಿಸಿ ನಂತರ ಸ್ವಚ್ಚ ಪಖ್ವಾಡ ಕಾರ್ಯಕ್ರಮದ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು.
ದಿನನಿತ್ಯವೂ ಕೋಟೆಗೆ ಬರುವ ಪ್ರವಾಸಿಗರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಶುದ್ದ ಕುಡಿಯುವ ನೀರು, ಶೌಚಾಲಯ ಅತ್ಯವಶ್ಯಕವಾಗಿರುವುದರಿಂದ ಪುರಾತತ್ವ ಇಲಾಖೆ ಬಿಡುಗಡೆಗೊಳಿಸಿರುವ ಎರಡು ರೂ.ಗಳನ್ನು ಬಳಸುವಂತೆ ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದೇನೆ. ವಯಸ್ಸಾದವರು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಕೋಟೆ ಏರಿ ವೀಕ್ಷಿಸುವುದು ಕಷ್ಟ.
ಒಂದೊಮ್ಮೆ ನಡೆದುಕೊಂಡೆ ಕೋಟೆ ವೀಕ್ಷಿಸಿ ನಂತರ ಕೆಳಗೆ ಇಳಿಯುವುದು ಇನ್ನು ಕಷ್ಟವಾಗುತ್ತದೆ ಎನ್ನುವುದನ್ನು ಮನಗಂಡು ಡೋಲಿ ಪದ್ದತಿಯನ್ನು ಇಲ್ಲಿ ಅಳವಡಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಎಲ್ಲಿಯಾದರೂ ಪ್ರಾಚೀನ ವಸ್ತುಗಳು ಸಿಕ್ಕರೆ ಕೋಟೆಗೆ ತಂದು ಕೊಡಿ ಎಲ್ಲವನ್ನು ಕೋಟೆಗೆ ಬರುವ ಪ್ರವಾಸಿಗರ ವೀಕ್ಷಣೆಗೆ ಇಡಲಾಗುವುದು ಎಂದು ಜನತೆಯಲ್ಲಿ ಮನವಿ ಮಾಡಿದರು.
ಐತಿಹಾಸಿಕ ಚಿತ್ರದುರ್ಗ ಕೋಟೆ ಅತ್ಯದ್ಬುತವಾಗಿದೆ. ಇಷ್ಟೊತ್ತಿಗೆ ಯಾವಾಗಲೋ ಪ್ರವಾಸೋಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿತ್ತು. ಏಕೆ ತಡವಾಗುತ್ತಿದೆ ಎಂಬುದು ಗೊತ್ತಿಲ್ಲ. ಈಗಲಾದರೂ ಕೋಟೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಪ್ರಯತ್ನಿಸಲಾಗುವುದು. ಕೋಟೆ ಅಭಿವೃದ್ದಿಗೆ ರಾಜ್ಯ ಸರ್ಕಾರ ಎಂಟು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದೆ. ಆ ಹಣವೂ ಬಂದ ಕೂಡಲೆ ಕೋಟೆಯನ್ನು ಅಭಿವೃದ್ದಿಗೊಳಿಸುವುದಾಗಿ ಹೇಳಿದರು.
ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ಕೋಟೆಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಬೇಕೆ ಬೇಕು. ಈ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮ ಸಹಕಾರವಿದೆ ಎಂದು ಆಶ್ವಾಸನೆ ನೀಡಿದರು.
ಮಕದರಿನಾಯಕ ಸಾಂಸ್ಕತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಕೋಟೆಯ ಆವರಣವನ್ನು ಶುದ್ದವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೋಟೆ ಆವರಣದಲ್ಲಿ ಏರ್ಪಡಿಸಬೇಕು ಎಂದು ಪುರಾತತ್ವ ಇಲಾಖೆ ಅಧೀಕ್ಷಕಿ ಕೆ.ಮೂರ್ತೇಶ್ವರಿರವರಲ್ಲಿ ಮನವಿ ಮಾಡಿದರು.
ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಗಿರೀಶ್, ಪುರಾತತ್ವ ಇಂಜಿನಿಯರ್ ಜೆ.ರಂಗನಾಥ್, ಸಹಾಯಕ ಪುರಾತತ್ವ ಅಧೀಕ್ಷಕ ಶ್ರೀರಂಗಪಟ್ಟಣದ ಗುರುಭಾಗಿ, ಕೋಟೆ ವಾಯುವಿಹಾರಿಗಳ ಸಂಘದ ಭದ್ರಣ್ಣ, ಮಲ್ಲಿಕಾರ್ಜುನಾಚಾರ್, ಉಡುಸಾಲಪ್ಪ, ಕೂಬಾನಾಯ್ಕ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರು, ಕಾರ್ಯದರ್ಶಿಗಳು ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
