ಬಿಪಿಎಲ್‍ನವರಿಗೆ ಕೇಂದ್ರದಿಂದಲೂ 2 ತಿಂಗಳ ಪಡಿತರ ವಿತರಣೆ; ಸಚಿವ ಆನಂದ್‍ಸಿಂಗ್

ಬಳ್ಳಾರಿ:

     ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾದರಿಯಲ್ಲೇ ಕೇಂದ್ರ ಸರ್ಕಾರ ಸಹ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರವನ್ನು ವಿತರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ಬಿ.ಎಸ್.ಆನಂದ್‍ಸಿಂಗ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೊರೊನಾ ವೈರಸ್ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರ ಧಾನ್ಯಗಳನ್ನು ವಿತರಿಸಿದ್ದು, ಜಿಲ್ಲೆಯಲ್ಲಿ ಶೇ.85 ರಷ್ಟು ಪೂರ್ಣಗೊಳಿಸಿದೆ. ಇದೀಗ ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಬಿಪಿಎಲ್ ಪಡಿತರದಾರರಿಗೆ ಒಬ್ಬರಿಗೆ ತಿಂಗಳಿಗೆ 5 ಕೆಜಿ ಅಕ್ಕಿ, ಪಡಿತರ ಚೀಟಿಯೊಂದಕ್ಕೆ 2 ಕೆಜಿ ಬೇಳೆಯಂತೆ ಎರಡು ತಿಂಗಳಿಗೆ 10 ಕೆಜಿ ಅಕ್ಕಿ, ಬೇಳೆಯನ್ನು ವಿತರಿಸಲಾಗುತ್ತದೆ. ಇದೇ ಮೇ 1 ರಿಂದ ದೇಶಾದ್ಯಂತ ಪಡಿತರ ವಿತರಣೆ ಕಾರ್ಯ ಚಾಲನೆ ಪಡೆದುಕೊಳ್ಳಲಿದೆ ಎಂದು ವಿವರಿಸಿದರು.

      ದೆಹಲಿ ಜಮಾತ್ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯಿಂದ 112 ಜನರು ಭಾಗವಹಿಸಿದ್ದು, ಈ ಪೈಕಿ 80 ಜನರು ಹೋಂ ಕ್ಯಾರಂಟೈನ್‍ನಲ್ಲಿ ಇದ್ದಾರೆ. ಇದರಲ್ಲಿ ಒಬ್ಬರಿಗೆ ಪಾಸಿಟಿವ್ ಎಂದು ಬಂದಿದ್ದು, ಉಳಿದ 79 ಜನರಿಗೆ ನೆಗೆಟಿವ್ ಎಂದು ಬಂದಿದೆ. ಈ 79 ಜನರಿಗೆ ಇದೇ ಏಪ್ರಿಲ್ 16 ರಂದು ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗುವುದು. ಈ ವೇಳೆ ಶೇ.85 ರಷ್ಟು ಎಲ್ಲರದ್ದು ನೆಗೆಟಿವ್ ಎಂದು ಬರುವ ವಿಶ್ವಾಸವಿದೆ. ಈ ಮೂಲಕ ಬಳ್ಳಾರಿ ಜಿಲ್ಲೆ ಸುರಕ್ಷಿತವಾಗಲಿದೆ ಎಂದು ತಿಳಿಸಿದರು.

ರೈತರಿಗೆ ಪರಿಹಾರ ನೀಡಲು ಚಿಂತನೆ

     ದೇಶಾದ್ಯಂತ ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಸೇರಿ ರಾಜ್ಯಾದ್ಯಂತ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ನಿರ್ದೇಶಕರಿಂದ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದೆ. ಇದಕ್ಕೂ ಮುಖ್ಯವಾಗಿ ಬೆಳೆಯ ಬೆಲೆ ಕುಸಿಯುತ್ತಿದೆ. ಈಚೆಗೆ ಹೈದರಾಬಾದ್‍ಗೆ ಲಾರಿಯಲ್ಲಿ ಕೊಂಡೊಯ್ದಿದ್ದ ಅಂಜೂರ ಹಣ್ಣನ್ನು ಖರೀದಿಸುವವರು ಇಲ್ಲದೇ ವಾಪಸ್ ತರಲಾಗಿದೆ. ಬಳ್ಳಾರಿ, ಸಿರುಗುಪ್ಪ, ಕೊಪ್ಪಳ, ಗಂಗಾವತಿಯಲ್ಲಿ ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಸಾಧ್ಯವಾದಷ್ಟು ಪರಿಹಾರ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಭರವಸೆ ನೀಡಿದರು.

     ಬಳ್ಳಾರಿಯ ವಿಮ್ಸ್‍ನಲ್ಲಿ ನೂತನವಾಗಿ ತೆರೆಯಲಾಗಿರುವ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ವಿಮ್ಸ್ ನಿರ್ದೇಶಕರೊಂದಿಗೆ ಚರ್ಚಿಸಲಾಗುವುದು ಎಂದ ಸಚಿವರು, ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು, ಜಿಲ್ಲಾಡಳಿತಕ್ಕೆ ಒಂದು ಸೆಲ್ಯೂಟ್ ಹೊಡೆಯುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕ ಎಂ.ಸೋಮಲಿಂಗಪ್ಪ, ಜಿಪಂ ಸಿಇಒ ಕೆ.ನಿತೀಶ್, ಎಸ್‍ಪಿ ಸಿ.ಕೆ.ಬಾಬಾ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap