ಚಳ್ಳಕೆರೆ
ಕೊರೋನಾ ವೈರಾಣು ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ರೈತರ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿದ್ದು, ಒಟ್ಟು 763 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಫಲವಾಗಿ 20 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ಇಲ್ಲಿನ ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೊರೋನಾ ವೈರಾಣು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯ 940 ಹೆಕ್ಟೇರ್ ಪ್ರದೇಶದ 329 ಕೋಟಿ ನಷ್ಟವನ್ನು ಅಂದಾಜಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಟಾಸ್ಕ್ ಪೋರ್ಸ್ ಸಮಿತಿಯ ತೋಟಗಾರಿಕೆ, ಕೃಷಿ ಮತ್ತು ಅಲೈಡ್ ಇಂಪಾಕ್ಟ್ ವಿಭಾಗದ ನಿರ್ದೇಶಕರಾಗಿ ನೇಮಕಗೊಂಡ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ನಷ್ಟ ಪರಿಹಾರ ನೀಡುವಂತೆ ಒತ್ತಾಯ ಪಡಿಸಲಾಗುವುದು ಎಂದರು.
ಈಗಾಗಲೇ ಗ್ರಾಮೀಣ ಭಾಗದ ಮತ್ತು ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಕಡ್ಡಾಯವಾಗಿ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ನಗರವೂ ಸೇರಿದಂತೆ ಎಲ್ಲೆಡೆ ಸ್ವಚ್ಚತೆ ಕಾರ್ಯ ನಡೆದಿದ್ದು, ಕೊರೋನಾ ವೈರಾಣು ಹಿನ್ನೆಲೆಯಲ್ಲಿ ಸಹಕಾರ ನೀಡುತ್ತಿರುವ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಏಪ್ರೀಲ್ 20ರ ನಂತರ ವಿವಿ ಸಾಗರದಿಂದ ನೀರು :-
ಕಳೆದ ಮೇ 2015ರಿಂದ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ವಿವಿ ಸಾಗರದಿಂದ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿಪಾತ್ರದಲ್ಲಿ ನೀರು ಹರಿಸಿ ಚೆಕ್ ಡ್ಯಾಂಗಳನ್ನು ತುಂಬುವಂತೆ ಮಾಡಲು ಪ್ರಯತ್ನ ನಡೆದಿದ್ದು, ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ನೀಡಿದ್ದು, ಏಪ್ರಿಲ್ 20ರ ನಂತರ 0.25 ಟಿಎಂಸಿ ನೀರು ಚಳ್ಳಕೆರೆ ವೇದಾವತಿಗೆ ಹರಿಯಲಿದೆ ಎಂದರು.
ನೀರು ಹರಿಸುವ ಪ್ರಯತ್ನ ಮತ್ತು ಹೋರಾಟಕ್ಕೆ ಬೆಂಬಲ ನೀಡಿದ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಬಿ.ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಎಂ.ಚಂದ್ರಪ್ಪ, ಗೂಳಿಹಟ್ಟಿಶೇಖರ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹೋರಾಟಗಾರರು ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








