ತುಮಕೂರು
“ಕರ್ನಾಟಕ ಋಣ ಪರಿಹಾರ ಕಾಯ್ದೆ-2018” ರ ಅಡಿಯಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ತುಮಕೂರು ಉಪವಿಭಾಗಾಧಿ ಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಂದ ಒಟ್ಟು ಸುಮಾರು 2,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
“ತುಮಕೂರು ನಗರದ ಮಿನಿ ವಿಧಾನ ಸೌಧದಲ್ಲಿರುವ ತುಮಕೂರು ಉಪವಿಭಾಗ ವ್ಯಾಪ್ತಿಗೆ ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಾಲ್ಲೂಕುಗಳು ಒಳಪಡುತ್ತವೆ. ಈ ಮೂರೂ ತಾಲ್ಲೂಕುಗಳಿಂದ ಕಳೆದೆರಡು ದಿನಗಳಲ್ಲಿ 2,000 ಅರ್ಜಿಗಳು ಸ್ವೀಕೃತವಾಗಿವೆ” ಎಂದು ಋಣಪರಿಹಾರ ಅಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್ ಅವರು ಶನಿವಾರ “ಪ್ರಜಾಪ್ರಗತಿ”ಗೆ ತಿಳಿಸಿದ್ದಾರೆ.
ಅರ್ಜಿಗಳು ಉಚಿತ
“ಋಣ ಪರಿಹಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರುವ ಅರ್ಜಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಉಪವಿಭಾಗ ವ್ಯಾಪ್ತಿಯ ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಹಸೀಲ್ದಾರ್ ಕಚೇರಿಗಳಲ್ಲಿ ಹಾಗೂ ತುಮಕೂರು ತಾಲ್ಲೂಕಿನ 5, ಕುಣಿಗಲ್ ತಾಲ್ಲೂಕಿನ 6 ಮತ್ತು ಗುಬ್ಬಿ ತಾಲ್ಲೂಕಿನ 5 ನಾಡಕಚೇರಿಗಳಲ್ಲಿ ಈ ಅರ್ಜಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಆದರೆ ಸದರಿ ಅರ್ಜಿಗಳನ್ನು ತುಮಕೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತ್ರ ಸ್ವೀಕರಿಸಲಾಗುತ್ತಿದೆ. ತಾಲ್ಲೂಕುವಾರು ಮೂರು ಪ್ರತ್ಯೇಕ ರಿಜಿಸ್ಟರ್‍ಗಳನ್ನಿಟ್ಟು ಅವುಗಳಲ್ಲಿ ತಾಲ್ಲೂಕುವಾರು ಅರ್ಜಿಗಳನ್ನು ನಮೂದಿಸಲಾಗುತ್ತಿದೆ” ಎಂದು ಅವರು ವಿವರಿಸಿದ್ದಾರೆ.
ಇನ್ನೂ ಮುಗಿಯದ ಸರತಿಸಾಲು
ಈ ಮಧ್ಯ, ತುಮಕೂರು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಅರ್ಜಿ ಪಡೆದುಕೊಳ್ಳಲು ಮತ್ತು ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಇನ್ನೂ ಸಹ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿರುವುದು ಶನಿವಾರ ಕಂಡುಬಂದಿತು. ಅರ್ಜಿ ಸಲ್ಲಿಕೆಗೆ ದಿನಾಂಕ 23-07-2019 ರಿಂದ 90 ದಿನಗಳ ಕಾಲಾವಕಾಶವೆಂದು ಪ್ರಕಟಪಡಿಸಿದ್ದರೂ, ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಕೆಗೆ ಅತ್ಯಾತುರವನ್ನು ತೋರುತ್ತಿದ್ದಾರೆ.
ಅದರ ಪರಿಣಾಮವೋ ಎಂಬಂತೆ ಶನಿವಾರ ಸಹ ಮಿನಿವಿಧಾನಸೌಧದ ಹಿಂದಿನ ಪ್ರವೇಶದ್ವಾರದ ಸುತ್ತಮುತ್ತ ಅರ್ಜಿಗಳ ಜೆರಾಕ್ಸ್ ಪ್ರತಿಗಳನ್ನು ಹಿಡಿದುಕೊಂಡು ಸಾರ್ವಜನಿಕರ ಆತುರಕ್ಕೆ ಅನುಗುಣವಾಗಿ 10 ರೂ. ಅಥವಾ 20 ರೂ.ಗಳಿಗೆ ಒಂದು ಅರ್ಜಿಯ ಪ್ರತಿಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಇದಲ್ಲದೆ ಅಲ್ಲೇ ಸುತ್ತಮುತ್ತ ಎಲ್ಲೆಂದರಲ್ಲಿ ಅರ್ಜಿ ಬರೆದುಕೊಡುವವರೂ ತುಂಬಿದ್ದು, ಜನರು ಅವರಿಗೆ 30 ರೂ., 50 ರೂ. ನೀಡಿ ಅರ್ಜಿಗಳನ್ನು ಬರೆಸಿಕೊಳ್ಳುತ್ತಿರುವುದೂ ಕಾಣಿಸಿತು. ಇನ್ನು ವಿವಿಧ ಪ್ರಮಾಣ ಪತ್ರಗಳನ್ನು ಹೊಂದಿಸಿಕೊಡಲು ಸಹ ಮಧ್ಯವರ್ತಿಗಳ ಹಾವಳಿ ತಲೆಯೆತ್ತಿದೆ.
ಈ ಋಣ ಪರಿಹಾರ ಕಾಯ್ದೆಯ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಯಾರಿಗೂ ಸಿಕ್ಕಿಲ್ಲ. ಈ ಅರ್ಜಿಗಳನ್ನು ಹೇಗೆ ವಿಲೇವಾರಿ ಮಾಡುತ್ತಾರೆ? ಸಾಲಗಾರನೇನೋ ಋಣಮುಕ್ತನಾಗುತ್ತಾನೆ; ಆದರೆ ಸಾಲವನ್ನು ಕೊಟ್ಟಿದ್ದವರ ಗತಿ ಏನು? ಎಂಬಿತ್ಯಾದಿಗಳಿಗೆ ಇನ್ನೂ ಮಾಹಿತಿ ದೊರಕುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗಲೇ ಅರ್ಜಿದಾರರ ಸಂಖ್ಯೆ 2000 ದಷ್ಟು ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ