ಬೆಂಗಳೂರು
ಪ್ರಪಂಚವನ್ನೇ ನಡುಗಿಸಿರುವ ಕೊರೋನಾ ರೋಗಾಣು ರಾಜ್ಯದಲ್ಲೂ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ದಡಬಡಿಸಿ ಮೇಲೆದ್ದಿರುವ ಸರ್ಕಾರ ತಕ್ಷಣದಿಂದಲೇ ಕೊರೋನಾ ಪತ್ತೆಗೆ ಎರಡು ಲ್ಯಾಬ್‍ಗಳನ್ನು ತೆರೆದಿದ್ದು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಮುಂಚಿತವಾಗಿಯೇ ಕಾಯ್ದಿರಿಸಿದೆ.
ಇದೇ ಕಾಲಕ್ಕೆ ರಾಜ್ಯದ ಜನ ಕೊರೋನಾ ವೈರಸ್‍ಗೆ ಆತಂಕಕೊಳ್ಳದಂತೆ ಕರೆ ನೀಡಿರುವ ಸರ್ಕಾರ ಹಿಂದೆ ಡೆಂಗ್ಯೂ,ಚಿಕೂನ್ ಗುನ್ಯಾ ಮಾದರಿಯ ರೋಗಗಳನ್ನು ಎದುರಿಸಿ ಅಭ್ಯಾಸವಿರುವ ನಮಗೆ ಕೊರೋನಾ ದೊಡ್ಡ ಸಂಕಷ್ಟ ತರಲಾರದು ಎಂದು ಹೇಳಿದೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು:ಕೊರೋನಾ ರೋಗಾಣು ಐಟಿ ಸಂಸ್ಥೆಯೊಂದರ ಉದ್ಯೋಗಿಯಲ್ಲಿ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಕೊರೋನಾ ಪತ್ತೆಗಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ರಾಜ್ಯದ ವಿಮಾನ ನಿಲ್ದಾಣ,ಬಂದರುಗಳಲ್ಲಿ ಕೊರೋನಾ ಪತ್ತೆಗಾಗಿ ಪರೀಕ್ಷೆಗಳನ್ನು ನಡೆಸಿದ್ದು ಈಗಾಗಲೇ ನಲವತ್ತು ಸಾವಿರ ಮಂದಿಯನ್ನು ಪರೀಕ್ಷಿಸಲಾಗಿದೆ.ಇನ್ನೂರಾ ನಲವತ್ತು ಮಂದಿಯ ರಕ್ತದ ಸ್ಯಾಂಪಲ್‍ಗಳನ್ನು ಪಡೆಯಲಾಗಿದ್ದು ಈ ಪೈಕಿ ಎರಡನ್ನು ಹೊರತುಪಡಿಸಿ ;ಉಳಿದಂತೆ 238 ಮಂದಿಯ ರಕ್ತಪರೀಕ್ಷೆ ವರದಿ ಬಂದಿದ್ದು ಯಾರಲ್ಲೂ ಕೊರೋನಾ ರೋಗಾಣು ಪತ್ತೆಯಾಗಿಲ್ಲ ಎಂದು ಹೇಳಿದರು.
ಉಳಿದಂತೆ ಎರಡು ಮಂದಿಯ ರಕ್ತಪರೀಕ್ಷೆ ವರದಿ ಬರಬೇಕಾಗಿದ್ದು ಸಧ್ಯದ ಮಾಹಿತಿಯಂತೆ ಈ ಎರಡು ಮಂದಿಯಲ್ಲೂ ಕೊರೋನಾ ರೋಗಾಣು ಪತ್ತೆಯಾಗಿಲ್ಲ.ಹೀಗಾಗಿ ಯಾವ ಕಾರಣಕ್ಕೂ ಆತಂಕಪಡಲು ಕಾರಣವಿಲ್ಲ.ಐಟಿ ಸಂಸ್ಥೆಯ ಉದ್ಯೋಗಿಯೊಬ್ಬರಲ್ಲಿ ಕಂಡ ಕೊರೋಣಾ ರೋಗಾಣು ಕೂಡಾ ಇಲ್ಲಿದ್ದಾಗ ಪತ್ತೆಯಾಗಿದ್ದಲ್ಲ.ಅವರು ತೆಲಂಗಾಣಕ್ಕೆ ಹೋದಾಗ ಕಂಡು ಬಂದಿದೆ.ಹೀಗಾಗಿ ನಾವು ಮತ್ತು ತೆಲಂಗಾಣ ಸರ್ಕಾರ ಅವರು ಪ್ರಯಾಣಿಸಿದ ಬಸ್ಸಿನಲ್ಲಿದ್ದ ಒಟ್ಟು 48 ಮಂದಿಯನ್ನು ತಪಾಸಣೆಗೊಳಪಡಿಸಿದ್ದೇವೆ ಎಂದು ವಿವರಿಸಿದರು.
ಕೊರೋನಾ ರೋಗಾಣು ಪತ್ತೆಯಾದ ವ್ಯಕ್ತಿ ಕೆಲಸ ಮಾಡುತ್ತಿದ್ದ ಐಟಿ ಸಂಸ್ಥೆಯ ಬಾಗಿಲು ಮುಚ್ಚಲಾಗಿದ್ದು ಸದರಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ಇಪ್ಪತ್ತೈದು ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಸದರಿ ರೋಗಕ್ಕೆ ಭಾರತ ಮಾತ್ರವಲ್ಲ,ಇಡೀ ವಿಶ್ವದಲ್ಲೇ ಔಷಧ ಕಂಡು ಹಿಡಿಯಲಾಗಿಲ್ಲ.ಈ ಮಧ್ಯೆ ಕೆಲ ಆಯುರ್ವೇದದ ಸಂಸ್ಥೆಗಳು ಈ ರೋಗಕ್ಕೆ ಔಷಧ ಕಂಡು ಹಿಡಿಯುವುದಾಗಿ ಹೇಳಿ ಬಂದಿದ್ದರು.ಆದರೆ ನಾವಿನ್ನೂ ಆ ಕುರಿತು ಯಾವ ಸೂಚನೆ ನೀಡಿಲ್ಲ ಎಂದರು.
ಕೊರೋನಾ ಕಾಯಿಲೆಯ ಚಿಹ್ನೆಗಳು ಸಾಮಾನ್ಯವಾಗಿ ಕೆಮ್ಮು,ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.ಹೀಗಾಗಿ ರೋಗಾಣುವಿನ ಪತ್ತೆಗಾಗಿ ಮತ್ತು ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗಳ ಎಲ್ಲ ವೈದ್ಯರಿಗೆ ವಿಶೇಷ ಕಿಟ್‍ಗಳನ್ನು ನೀಡಲಾಗಿದೆ.
ಅದೇ ರೀತಿ ರಾಜ್ಯದಲ್ಲಿರುವ 1689 ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಸಂಬಂಧ ಸೂಚನೆ ನೀಡಲಾಗಿದ್ದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರೂ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.ಇದುವರೆಗೆ ಕೊರೋನಾ ವೈರಸ್ ಪತ್ತೆಗಾಗಿ ರಾಜ್ಯದಲ್ಲಿ ಲ್ಯಾಬ್‍ಗಳಿರಲಿಲ್ಲ.ಬದಲಿಗೆ ಅಂತಹ ಚಿಹ್ನೆಗಳು ಕಾಣಿಸಿಕೊಂಡಾಗ ರೋಗಿಯ ರಕ್ತದ ಸ್ಯಾಂಪಲ್ ಅನ್ನು ಪುಣೆಗೆ ಕಳಿಸಿಕೊಡಲಾಗುತ್ತಿತ್ತು.
ಆದರೆ ಈಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಬೆಂಗಳೂರಿನ ರಾಜೀವ್‍ಗಾಂಧಿ ಕ್ಷಯ ಹಾಗೂ ಎದೆಗೂಡುಗಳ ಆಸ್ಪತ್ರೆ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬ್‍ಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.ಕೊರೋನಾ ವೈರಸ್ ಪತ್ತೆಗಾಗಿ ಸರ್ಕಾರ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಟ್ಟೆಚ್ಚರದಿಂದ ಕೆಲಸ ಮಾಡಲಿದೆ.ಹಾಗೆಯೇ ಪ್ರತಿನಿತ್ಯ ಈ ಸಂಬಂಧದ ಮಾಹಿತಿಯನ್ನು ಇಲಾಖೆಗೆ ಒದಗಿಸಲಿದೆ ಎಂದು ನುಡಿದರು.
ಸುದ್ದಿಗೋಷ್ಟಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಅರೋಗ್ಯ,ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ