ಹೊಸ ವರ್ಷದ ಭದ್ರತೆಗಾಗಿ 20 ಸಾವಿರ ಪೊಲೀಸರ ಸಿಬ್ಬಂದಿ ನಿಯೋಜನೆ

ಬೆಂಗಳೂರು

       ಹಳೆಯ 2018ಕ್ಕೆ ಬೈ ಹೇಳಿ ಹೊಸ ವರ್ಷ 2019ಕ್ಕೆ ಹಾಯ್, ಹಲೋ ಹೇಳಲು ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 20 ಸಾವಿರ ಮಂದಿ ಪೊಲೀಸರು ಇನ್ನಿತರ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

        ಡಿ. 31ರ ಸೋಮವಾರ ರಾತ್ರಿ 7ರಿಂದ ಮುಂಜಾನೆ 5ರವರೆಗೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

       ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸೇರುವ ಸಾವಿರಾರು ಮಂದಿಗೆ ಭದ್ರತೆ ಕಲ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ

       ಭದ್ರತೆಯ ನಿಗಾವಹಿಸಲು ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಮಂದಿ ಡಿಸಿಪಿಗಳು, 45 ಮಂದಿ ಎಸಿಪಿಗಳನ್ನು ನಿಯೋಜಿಸಲಾಗಿದೆ. 220 ಮಂದಿ ಇನ್ಸ್‍ಪೆಕ್ಟರ್‍ಗಳು, 430 ಮಂದಿ ಸಬ್‍ಇನ್ಸ್‍ಪೆಕ್ಟರ್‍ಗಳು, 800 ಮಂದಿ ಎಎಸ್‍ಐಗಳು, 10 ಸಾವಿರ ಮಂದಿ ಮುಖ್ಯಪೇದೆಗಳು, ಒಂದೂವರೆ ಸಾವಿರ ಗೃಹ ರಕ್ಷಕ ಸಿಬ್ಬಂದಿ, 1 ಸಾವಿರ ಸಿವಿಲ್ ಡಿಫೆನ್ಸ್, ಗರುಡಾ ಫೋರ್ಸ್‍ನ 1 ತುಕಡಿ, 2 ಕ್ಯುಆರ್‍ಟಿ ತುಕಡಿಗಳು, 2 ವಾಟರ್ ಜೆಟ್‍ಗಳು, ಕೆಎಸ್‍ಆರ್‍ಪಿಯ 50 ಹಾಗೂ ಸಿಎಆರ್‍ನ 30 ತುಕಡಿಗಳು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

         ರೇವ್ ಪಾರ್ಟಿಗಳು, ಹೋಟೆಲ್-ರೆಸ್ಟೋರೆಂಟ್‍ಗಳ ಬಳಿ ಪೆಲೀಸರು ಭದ್ರತೆ ಕೈಗೊಳ್ಳಲಿದ್ದು, ಸಂಭ್ರಮಾಚರಣೆ ವೇಳೆ ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳು, ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುವುದು ಎಂದರು.

ವಿಶೇಷ ರಕ್ಷಣಾ ವ್ಯವಸ್ಥೆ

        ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಪಬ್‍ಗಳ ಮಾಲೀಕರು ಅವರವರ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗಾಗಿ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳಬೇಕು. ಪಬ್-ರೆಸ್ಟೋರೆಂಟ್‍ಗಳ ಒಳಗೆ ಹಾಗೂ ಮುಂಭಾಗದಲ್ಲಿ ಆಗುವ ಗಲಾಟೆಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

        ಅಪ್ರಾಪ್ರ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮದ್ಯ ಸರಬರಾಜು ಮಾಡಬಾರದು. ರೇವ್ ಪಾರ್ಟಿಗಳು ಪಬ್‍ಗಳ ಬಳಿ ಗಾಂಜಾ ಇನ್ನಿತರ ಮಾದಕ ವಸ್ತು ಮಾರಾಟ ಸೇವನೆ ಬಗ್ಗೆ ಸಿಸಿಬಿ ಪೆಲೀಸರು ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.

         ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಇನ್ನಿತರ ಆಯಕಟ್ಟಿನ ಜಾಗದಲ್ಲಿ ಗುಂಪು ಗುಂಪಾಗಿ ಸೇರುವುದನ್ನು ಸ್ಥಳಾವಕಾಶಕನುಗುಣವಾಗಿ ನಿರ್ಬಂಧಿಸಲಾಗುವುದು. ಅಲ್ಲದೆ ನಗರದ ಪ್ರಮುಖ ಮೇಲ್ಸೇತುವೆ ರಸ್ತೆಗಳ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ವಿವರಿಸಿದರು.

ವಿಶೇಷ ವಿಚಕ್ಷಣದಳ

          ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿಶೇಷ ಸ್ಕ್ವಾಡ್‍ಗಳನ್ನು ನಿಯೋಜಿಸಲಾಗುವುದು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ಗಳಲ್ಲಿ ಬ್ಯಾರಿಕೇಡ್‍ಗಳು, ಗ್ಯಾಂಗ್ ವೇಗಳನ್ನು ಅಳವಡಿಸಿ, ಜನರನ್ನು ನಿಯಂತ್ರಿಸಲಾಗುವುದು. ಡಿ. 31ರ ರಾತ್ರಿ 8 ರಿಂದ ಮುಂಜಾನೆವರೆಗೆ ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಇನ್ನಿತರ ಜನಸಂದಣಿ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗುವುದು ಎಂದು ವಿವರಿಸಿದರು.

ಮೆಟ್ರೋಗೆ ಮನವಿ

          ನಗರದಲ್ಲಿ ಡಿ. 31ರ ಮಧ್ಯರಾತ್ರಿ 2ರವರೆಗೆ ಮೆಟ್ರೋ ರೈಲು ಸಂಚಾರ ವಿಸ್ತರಿಸುವಂತೆ ಹಾಗೂ ಬಿಎಂಟಿಸಿ ಬಸ್ ಸಂಚಾರವನ್ನು ನಡೆಸುವಂತೆ ಮನವಿ ಮಾಡಲಾಗುವುದು. ಓಲಾ, ಊಬರ್, ಮೇರು ಟ್ಯಾಕ್ಸಿ ಸಂಸ್ಥೆಯವರನ್ನು ಸಂಪರ್ಕಿಸಿ ಅಂದು ರಾತ್ರಿ ಚಾಲಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಹಾಗೂ ಆಟೋ ಸಂಚಾರವನ್ನು ಮುಂಜಾನೆವರೆವಿಗೆ ನಡೆಸುವಂತೆ ಆಟೋ ಸಂಘಗಳಿಗೆ ಸೂಚನೆ ನೀಡಲಾಗುವುದು ಎಂದರು.

              ಕುಡಿದು ಗಲಾಟೆ ಮಾಡುವುದು, ಮಹಿಳೆಯರಿಗೆ ಕೀಟಲೆ ಮಾಡುವವರನ್ನು ಸ್ಥಳದಲ್ಲೆ ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು. 270 ಹೊಯ್ಸಳ, 1200 ಚಿತಾ, ಇತರ ವಾಹನಗಳನ್ನು ಬಳಸಿ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap