ದಾವಣಗೆರೆ:
ಫೋನಿ ಚಂಡಮಾರುತ ಪರಿಣಾಮ ಜಿಲ್ಲೆಯ ವಿವಿಧೆಡೆ ಕಳೆದ ಸಂಜೆ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದಾಗಿ, ಅಪಾರ ಬೆಳೆ ಹಾನಿಯಾಗಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.
ಬಿಸಿಲ ಬೇಗೆಯಿಂದ ತತ್ತರಿಸಿದ ದಾವಣಗೆರೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಸೋಮವಾರ ಸುರಿದ ಭಾರೀ ಗಾಳಿ ಸಹಿತ ಮಳೆಯಿಂದಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಅಡಿಕೆ ಮರ, ನೂರಾರು ತೆಂಗಿನ ಮರ, 150 ಎಕರೆಯಷ್ಟು ಬಾಳೆ ತೋಟ, ಕಬ್ಬು, ಭತ್ತದ ಬೆಳೆ ನೆಲಸಮವಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ 3-4 ದಿನದಿಂದಲೂ ತಮಿಳುನಾಡು, ಆಂಧ್ರದಲ್ಲಿ ಬಂಗಾಳಕೊಲ್ಲಿಯಿಂದ ನುಗ್ಗಿ ಬರುತ್ತಿರುವ ಫೋನಿ ಚಂಡಮಾರುತದ ಪರಿಣಾಮ ದಾವಣಗೆರೆ ಜಿಲ್ಲೆಯಲ್ಲೂ ಕಳೆದ ಸಂಜೆ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ವರ್ಷಾನುಗಟ್ಟಲೇ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಅಡಿಕೆ, ತೆಂಗು, ಬಾಳೆ ತೋಟಗಳು ನೆಲಸಮವಾಗಿವೆ. ಅಲ್ಲದೇ, ವಿದ್ಯುತ್ ಕಂಬಗಳು ಸಹ ಧರೆಗುರುಳಿವೆ. ಅಲ್ಲದೇ, ಕಬ್ಬು, ಬತ್ತದ ಬೆಳೆಗಳೂ ಮಳೆಗೆ ಆಹುತಿಯಾಗಿವೆ.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಗಾಳಿ, ಆಲಿಕಲ್ಲು ಸಮೇತ ಸಹಿತ ಮಳೆಯಿಂದಾಗಿ. ದಾವಣಗೆರೆ ತಾಲೂಕಿನ ಪುಟಗನಾಳ್, ಎಲೇಬೇತೂರು, ಹಿರೇ ಮೇಗಳಗೆರೆ, ಚಿಕ್ಕಮೇಗಳಗೆರೆ, ಮಾಗಾನಹಳ್ಳಿ, ನಾಗರಕಟ್ಟೆ ಅಣಜಿ ಸೇರಿದಂತೆ ಇತರೆ ಗ್ರಾಮಗಳ ಬೆಳೆ, ತೋಟಗಳು ಹಾನಿಗೊಳಗಾಗಿವೆ.
ಕಳೆದ ಆರೇಳು ವರ್ಷಗಳಿಂದ ನೀರಿಲ್ಲದಿದ್ದರೂ ಟ್ಯಾಂಕರ್ ಮೂಲಕ ಅಡಿಕೆ ತೋಟ ಉಳಿಸಿಕೊಂಡಿದ್ದ ರೈತರು, ಈ ಬಾರಿ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸುರಿದ ಮಳೆಗೆ ಹಾಗೂ ಬಿರುಗಾಳಿಯ ಆರ್ಭಟಕ್ಕೆ ಸಾವಿರಾರು ಅಡಿಕೆ ಮರಗಳನ್ನು ಧರೆಗುರುಳಿವೆ. ಆದ್ದರಿಂದ ರೈತರಿಗೆ ದಿಕ್ಕೇ ತೋಚದಂತಾಗಿದೆ.
ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರೇ ಹೆಚ್ಚಿನದಾಗಿ ಹಾನಿಗೊಳಗಾಗಿದ್ದಾರೆ. ಇಷ್ಟು ದಿನ ನೀರಿಗಾಗಿ ಹೋರಾಟ ಮಾಡಿ, ಕಬ್ಬು, ಬತ್ತ, ಮೆಕ್ಕೆಜೋಳ ಬೆಳೆದಿದ್ದ ರೈತರು, ಈಗ ಬಿರುಗಾಳಿ ಸಹಿತ ಮಳೆಯ ಹೊಡತಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ.
ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲೂ ನಿನ್ನೆ ಸುರಿದ ಭಾರೀ ಮಳೆ, ಬೀಸಿದ ಭಾರೀ ಗಾಳಿಯಿಂದಾಗಿ ಉಚ್ಚಂಗಿದುರ್ಗ ಬೆಟ್ಟದ ಮೇಲಿನ ಮರಿಯಪ್ಳ ಮಂಜುನಾಥ ಎಂಬುವರ ಮನೆ ಮತ್ತು ಹೊಟೆಲ್‍ನ ತಗಡಿನ ಶೀಟುಗಳೇ ಹಾರಿ ಹೋಗಿವೆ. ಭಾರೀ ಮಳೆಯಾಗಿದ್ದರಿಂದ ಮನೆ, ಹೊಟೆಲ್‍ನಲ್ಲಿದ್ದ ವಸ್ತುಗಳೆಲ್ಲವೂ ಹಾಳಾಗಿವೆ. ರೈತ ಮೆಳ್ಳೇಕಟ್ಟೆ ಮಲ್ಲಪ್ಪ ಎಂಬುವರ ಮನೆಯ ತಗಡುಗಳೂ ಹಾರಿ ಹೋಗಿದ್ದು, ಇಡೀ ಕುಟುಂಬ ರಾತ್ರಿ ಮಳೆಯಲ್ಲಿ ನೆನೆಯುತ್ತಲೇ ದಿನ ಕಳೆದಿದೆ.
ಗಾಳಿ-ಮಳೆಗೆ ಹಾನಿಗೊಳಗಾಗಿರುವ ಸ್ಥಳಗಳಿಗೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು. ಹಾನಿ ಬಗ್ಗೆ ಪರಿಶೀಲಿಸಿ, ಸೂಕ್ತ ಪರಿಹಾರಕ್ಕೆ ತಾಲೂಕು ಆಡಳಿತದ ಗಮನಕ್ಕೆ ತರುವುದಾಗಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಲಕ್ಷಾಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡು ಮುಂದಿನ ದಾರಿ ತೋಚದಂತಾಗಿರುವ ರೈತರು, ವೈಜ್ಙಾನಿಕ ಪರಿಹಾರ ನೀಡುವ ಮೂಲಕ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ