ನವದೆಹಲಿ
ಕಳೆದ ಕೆಲ ವರ್ಷಗಳಲ್ಲಿ 20 ಲಕ್ಷ ವಿದ್ಯುನ್ಮಾನ ಮತಯಂತ್ರಗಳು(ಇವಿಎಂ) ನಾಪತ್ತೆಯಾಗಿವೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿ ಹಾಕಿದೆ
ಈ ವರದಿಯಲ್ಲಿ ಯಾವುದೇ ಸತ್ಯವಿಲ್ಲ. ಆ ವರದಿ, ಹಲವಾರು ಸಾರ್ವಜನಿಕ ಸಂಸ್ಥೆಗಳಿಂದ ಆರ್‌ಟಿಐ ಅಡಿಯಲ್ಲಿ ಪಡೆಯಲಾದ ನಿಖರವಲ್ಲದ ಮತ್ತು ಭಾಗಶಃ ತಪ್ಪು ಮಾಹಿತಿ ಹೊಂದಿರುವ ವಿವರಗಳಿಂದ ಕೂಡಿದೆ ಎಂದು ಆಯೋಗ ತಿಳಿಸಿದೆ.
ಬಾಂಬೆ ಹೈಕೋರ್ಟ್‌ನ ಆರ್‌ಟಿಐ ಆಧಾರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣಕ್ಕೆ ಸಂಬಂಧಿಸಿದ ಮಾಧ್ಯಮಗಳ ವರದಿ ಸತ್ಯವಲ್ಲ. ಮತಗಟ್ಟೆಗೆ ಸಾಗಿಸುವ ವೇಳೆ 20 ಲಕ್ಷ ಇವಿಎಂ ಯಂತ್ರಗಳು ನಾಪತ್ತೆಯಾಗಿವೆ ಎಂಬುದು ಸಂಪೂರ್ಣ ಸುಳ್ಳು ಎಂದು ಆಯೋಗದ ವಕ್ತಾರರಾದ ಶೆಫಾಲಿ ಶರಣ್ ಹೇಳಿದ್ದಾರೆ.
ವರದಿ ಭಾಗಶಃ ಮತ್ತು ಏಕಮುಖ ಮಾಹಿತಿಯನ್ನು ಹೊಂದಿದೆ. ಅದು ನಿಖರವಲ್ಲ ಮತ್ತು ವಾಸ್ತವದ ತಪ್ಪುಗ್ರಹಿಕೆಯಾಗಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
1990ರಿಂದ 2014ರವರೆಗೆ ಎರಡು ಸಾರ್ವಜನಿಕ ವಲಯದ ಸಂಸ್ಥೆಗಳು ಪೂರೈಸಿದ ಮತಯಂತ್ರಗಳು ಮತ್ತು ಆಯೋಗದಿಂದ ಮತಗಟ್ಟೆಗೆ ಸಾಗಿಸಿದ ಯಂತ್ರಗಳು ತಾಳೆಯಾಗಿಲ್ಲ. ಸುಮಾರು 20 ಲಕ್ಷ ಯಂತ್ರಗಳು ನಾಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು.
ಇವಿಎಂ ಉತ್ಪಾದಕ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ದಿಂದ ಪಡೆದ ಆರ್‌ಟಿಐ ಮಾಹಿತಿ ಆಧರಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಮಾರ್ಚ್ 2018ರಂದು ಪಿಐಎಲ್ ದಾಖಲಾಗಿದೆ. ಉತ್ಪಾದಕರು ಮತ್ತು ಆಯೋಗದ ನಡುವೆ 116 ಕೋಟಿ ರೂ. ಹಣಕಾಸು ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಇದನ್ನು ಆಧರಿಸಿ ಮಾಧ್ಯಮವೊಂದು ಇವಿಎಂ ನಾಪತ್ತೆ ವರದಿ ಮಾಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
