ಚಿತ್ರದುರ್ಗ:
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಫ್ಲೋರೈಡ್ ಅಂಶವುಳ್ಳ ನೀರನ್ನು ಸೇವಿಸಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಗಮನಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ 25 ಶುದ್ದಗಂಗಾ ಘಟಕಗಳನ್ನು ತೆರೆಯಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ತಿಳಿಸಿದರು.
ಜಿಲ್ಲೆಯ ಆರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆರೆಯಲಾಗಿರುವ ಶುದ್ದಗಂಗಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೇರಕರ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ಶುದ್ದಗಂಗಾ ಘಟಕಗಳಿಂದ ಕೇವಲ ಎರಡು ರೂ.ಗಳಿಗೆ ಇಪ್ಪತ್ತು ಲೀಟರ್ ಶುದ್ದ ಕುಡಿಯುವ ನೀರನ್ನು ಪಡೆಯಬಹುದು. ಇದರಿಂದ ಗ್ರಾಮೀಣರಿಗೆ ಸುಲಭವಾಗಿ ಶುದ್ದ ನೀರು ಸಿಗಲಿ ಎನ್ನುವುದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉದ್ದೇಶ ಎಂದು ಹೇಳಿದರು.
ಕೇಂದ್ರ ಕಚೇರಿಯ ಶುದ್ದಗಂಗಾ ಯೋಜನೆಯ ಯೋಜನಾಧಿಕಾರಿ ಪ್ರವೀಣ್‍ಕುಮಾರ್ ಮಾತನಾಡಿ ಹಲವಾರು ವರ್ಷಗಳಿಂದಲೂ ಚಿತ್ರದುರ್ಗ ಜಿಲ್ಲೆ ಬರಗಾಲವನ್ನು ಎದುರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷವೂ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿದೆ.
ಗ್ರಾಮೀಣ ಪ್ರದೇಶದ ಜನ ಫ್ಲೋರೈಡ್‍ಯುಕ್ತ ನೀರನ್ನೇ ಸೇವಿಸುತ್ತಿರುವುದರಿಂದ ಚಿಕ್ಕ ಚಿಕ್ಕ ವಯಸ್ಸಿನವರು ಕಾಯಿಲೆಗಳಿಗೆ ತುತ್ತಾಗಿ ವೃದ್ದರಂತೆ ಕಾಣುತ್ತಿದ್ದಾರೆ. ಇದನ್ನು ಗಮನಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಹಕಾರದಿಂದ ವಿವಿಧ ಹಳ್ಳಿಗಳಲ್ಲಿ ಸ್ಥಾಪಿಸಲಾಗಿರುವ ಶುದ್ದಗಂಗಾ ನೀರನ್ನು ಬಳಸಿ ಎಂದು ಗ್ರಾಮಸ್ಥರಲ್ಲಿ ಕೋರಿದರು.
ಕೇವಲ ಹತ್ತು ಪೈಸೆಗೆ ಒಂದು ಲೀಟರ್‍ನಂತೆ 2 ರೂ.ಗಳಿಗೆ ಇಪ್ಪತ್ತು ಲೀಟರ್ ಶುದ್ದ ಕುಡಿಯುವ ನೀರನ್ನು ಗ್ರಾಮೀಣರಿಗೆ ನೀಡಲಾಗುತ್ತಿದೆ. ಜಿಲ್ಲೆಯ 25 ಘಟಕಗಳಿಂದ 8221 ಕುಟುಂಬಗಳಿಗೆ ಕಳೆದ ನಾಲ್ಕು ವರ್ಷಗಳಿಂದಲೂ ಯಾವುದೇ ತೊಂದರೆಯಿಲ್ಲದೆ ನೀರು ಸಿಗುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ತಿಂಗಳು 5452 ಕಾರ್ಡ್‍ಗಳು ನವೀಕರಣವಾಗುತ್ತಿದ್ದು, ದಿನನಿತ್ಯ ಸುಮಾರು ಎಂಟರಿಂದ ಒಂಬತ್ತು ಸಾವಿರ ಕುಟುಂಬಗಳಿಗೆ ಶುದ್ದನೀರು ನೀಡಲಾಗುತ್ತಿದೆ. ಶುದ್ದಗಂಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೇರಕರು ಗ್ರಾಮಸ್ಥರಿಗೆ ತೊಂದರೆಯಾಗದಂತೆ ಶುದ್ದ ನೀರು ಪೂರೈಸುವಂತೆ ಸೂಚಿಸಿದರು.ತಾಂತ್ರಿಕ ಯೋಜನಾಧಿಕಾರಿಗಳು, ಲೆಕ್ಕ ಪರಿಶೋಧಕರು, ಶುದ್ದಗಂಗಾ ಯೋಜನೆಯ ಮೇಲ್ವಿಚಾರಕರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದರು.