ಮರಳು ತುಂಬಲು ಪ್ರತಿರೋಧ : 27 ಗ್ರಾಮಸ್ಥರನ್ನು ವಶಕ್ಕೆ ಪಡೆದ ಪೊಲೀಸರು

ಚಳ್ಳಕೆರೆ

         ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿ ಪಾತ್ರದ ಮರಳನ್ನು ಕಾನೂನು ರೀತ್ಯ ಟೆಂಡರ್‍ದಾರನಿಗೆ ಮರಳು ತುಂಬಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶುಕ್ರವಾರ ಮರಳನ್ನು ತುಂಬಲು ಅವಕಾಶ ಮಾಡಿಕೊಡಲಾಯಿತು. ಇದಕ್ಕೆ ಅಡ್ಡಿಪಡಿಸಿದ ಒಟ್ಟು 27 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

          ತಾಲ್ಲೂಕಿನ ಕೋನಿಗರಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹೊಸದುರ್ಗ ತಾಲ್ಲೂಕಿನ ಕೆ.ಎಸ್.ನಟರಾಜು ಎಂಬುವವರು 2017ರಿಂದ 2022ರ 5 ವರ್ಷಗಳ ಅವಧಿಗೆ ಮರಳು ತುಂಬಲು ಟೆಂಡರ್ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಪ್ರಾರಂಭದ ಹಂತದಲ್ಲೇ ಅಲ್ಲಿನ ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಮರಳು ತುಂಬದೇ ಇದ್ದು, ಆದರೆ, ಸರ್ಕಾರಕ್ಕೆ ಪಾವತಿಸಬೇಕಾದ ಹಣವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಮರಳು ತುಂಬಲು ಅವಕಾಶ ಮಾಡಿಕೊಡುವಂತೆ ಟೆಂಡರ್‍ದಾರ ನಟರಾಜು ಅಧಿಕಾರಿಗಳ ಮೊರೆಹೋದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಮರಳು ತುಂಬಿಸಲು ಅವಕಾಶ ಮಾಡಿಕೊಡಲಾಯಿತು.

          ಈ ಹಿನ್ನೆಲೆಯಲ್ಲಿ ಶುಕ್ರವಾರ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಎಸ್.ರೋಷನ್‍ಜಮೀರ್, ಚಳ್ಳಕೆರೆ ವೃತ್ತ ನಿರೀಕ್ಷ ಎನ್.ತಿಮ್ಮಣ್ಣ, ಮೊಳಕಾಲ್ಮೂರು ವೃತ್ತ ನಿರೀಕ್ಷಕ ಗೋಪಾಲನಾಯ್ಕ, ಪಿಎಸ್‍ಐಗಳಾದ ಕೆ.ಸತೀಶ್‍ನಾಯ್ಕ, ಗುಡ್ಡಪ್ಪ, ಎನ್.ವೆಂಕಟೇಶ್, ಮೋಹನ್‍ಕುಮಾರ್, ರಘುನಾಥ ಮತ್ತು ಸಿಬ್ಬಂದಿ ವರ್ಗ ಗುತ್ತಿಗೆದಾರರು ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಕೋನಿಗರಹಳ್ಳಿ ಮರಳು ಯಾರ್ಡ್‍ಗೆ ಭೇಟಿ ನೀಡಿದಾಗ ಗ್ರಾಮಸ್ಥರು ಭಾರಿ ಪ್ರತಿರೋಧವನ್ನು ವ್ಯಕ್ತ ಪಡಿಸಿದ್ದರು. ಇವರೊಂದಿಗೆ ಸುತ್ತಮುತ್ತಲ ಗ್ರಾಮದವರಾದ ಕೋನಿಗರಹಳ್ಳಿ ತೋರೆಬೀರನಹಳ್ಳಿ, ಕಲಮರಹಳ್ಳಿ, ಹುಲಿಕುಂಟೆ, ನಾರಾಯಣಪುರ, ಗೊರ್ಲತ್ತು, ಬೆಳಗೆರೆ, ಯಲಗಟ್ಟೆ, ಯಲಗಟ್ಟೆ ಗೊಲ್ಲರಹಟ್ಟಿಯ ಗ್ರಾಮಸ್ಥರು ಮರಳು ತುಂಬದಂತೆ ಪಟ್ಟು ಹಿಡಿದರಲ್ಲದೆ ಮರಳು ತುಂಬಲು ಯತ್ನಿಸಿದ ಗುತ್ತಿಗೆದಾರರಿಗೆ ಹಾಗೂ ಪೊಲೀಸರಿಗೆ ಬೆದರಿಗೆ ಹಾಕಿದರಲ್ಲದೆ ಮರಳು ತುಂಬಿದಲ್ಲಿ ಕೈಯಲ್ಲಿ ವಿಷದ ಬಾಟಲಿಗಳನ್ನು ಹಿಡಿದು ಕುಡಿದು ಸಾಯುವ ಬೆದರಿಕೆ ಹಾಕಿದರು.

         ಮರಳು ತುಂಬಲು ಮುಂದಾದಾಗ ಪ್ರತಿಭಟನಾಕರರು ಗುತ್ತಿಗೆದಾರರ ವಿರುದ್ದ ಘೋಷಣೆ ಕೂಗಿದರಲ್ಲದೆ ಯಾವುದೇ ಕಾರಣಕ್ಕೂ ಮರಳು ತುಂಬಲು ಬಿಡುವುದಿಲ್ಲ, ಪ್ರಾಣಬಿಟ್ಟವೂ ಮರಳು ತುಂಬಲು ಬಿಡೇವು ಎಂದು ಘೋಷಣೆಗಳನ್ನು ಕೂಗಿದರಲ್ಲದೆ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಸಹ ಪ್ರದರ್ಶಿಸಿದರು. ಕೂಡಲೇ ಜಾಗೃತರಾದ ಪೊಲೀಸರು ಅವರನ್ನು ಸುತ್ತುವರೆದು ವಿಷದ ಬಾಟಗಳನ್ನು ವಶಕ್ಕೆ ಪಡೆದರು. ನಂತರ ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದಲ್ಲಿ ಕೂಡಿಸಲಾಯಿತು. ನಂತರ ಗುತ್ತಿಗೆದಾರರು ಸರ್ಕಾರದ ನಿಯಮದ ಪ್ರಕಾರ ನಿಗಧಿಗೊಳಿಸಿದ ಸ್ಥಳದಲ್ಲಿ ಮರಳನ್ನು ತೆಗೆಯಲು ಪ್ರಾರಂಭಿಸಿದರು.

           ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ ಸರ್ಕಾರದ ಆದೇಶಕ್ಕೆ ಎಲ್ಲರೂ ಮನ್ನಣೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆಕ್ಷೇಪಣೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರುಕೊಡುವಂತೆ ಸಲಹೆ ನೀಡಿದರು. ಅಡ್ಡಿ ಪಡಿಸದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅದ್ದರಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.

         ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆಯೇ ಗುತ್ತಿಗೆದಾರರು ಟೆಂಡರ್ ಮೂಲಕ ಅನುಮತಿ ಪಡೆದಿದ್ದು, ನಾವು ಸರ್ಕಾರದ ಆದೇಶವನ್ನು ಪಾಲಿಸಲೇ ಬೇಕಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿ. ಪ್ರಸ್ತುತ ಇಂದು ಮಾತ್ರ ಯಾವುದೇ ಕಾರಣಕ್ಕೂ ಮರಳು ತುಂಬಲು ಅಡ್ಡಿ ಪಡಿಸಬಾರದು. ಒಂದು ಪಕ್ಷ ಅಡ್ಡಿ ಪಡಿಸಿದಲ್ಲಿ ಎಲ್ಲರನ್ನೂ ಬಂಧಿಸಿ ಕಾನೂನು ಪ್ರಕಾರ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದರು.

          ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಮಳೆ ಇಲ್ಲದೆ ಬರವಿರುವುದು ಸ್ವಾಭಾವಿಕ ಆದರೆ, ನದಿಯ ಮರಳು ನೈಸರ್ಗಿಕ ಸಂಪತ್ತು ಆಗಿದ್ದು, ಸರ್ಕಾರ ಇದರ ಮೇಲೆ ಪೂರ್ಣಪ್ರಮಾಣದ ಅಧಿಕಾರ ಹೊಂದಿದೆ. ನಾವು ನೀವು ಎಲ್ಲರೂ ಸೇರಿ ಸರ್ಕಾರ ಸುತ್ತೋಲೆಗೆ ಗೌರವ ನೀಡಬೇಕಿದೆ. ಸರ್ಕಾರಕ್ಕೆ ನಿಗಧಿ ಪಡಿಸಿದ ಹಣವನ್ನು ನೀಡಿ ಟೆಂಡರ್‍ದಾರರು ಅನುಮತಿ ಪಡೆದಿದ್ದು ತಮ್ಮ ಕಾನೂನು ಬದ್ದ ಹಕ್ಕನ್ನು ಅವರು ಪಡೆಯುತ್ತಿದ್ಧಾರೆ. ಅನಗತ್ಯವಾಗಿ ಯಾರೂ ಅಪಪ್ರಚಾರಕ್ಕೆ ಒಳಗಾಗಿ ಇಲಾಖೆಯ ಕೆಲಸ ಕಾರ್ಯಗಳಿಗೆ ಅಡ್ಡಿ ಪಡಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

        ಗ್ರಾಮದ ಮುಖಂಡ ಗೋಪಾಲಕೃಷ್ಣ, ದಾನಿಮಂಜುನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈಲಪ್ಪ, ಸದಸ್ಯ ಭಾಗ್ಯಮ್ಮ ಕೆಂಚರಾಜ ,ಮನೋಹರ, ಅನೀಲ್, ರಂಗಸ್ವಾಮಿ, ಕೆಂಚಪ್ಪ ಮುಂತಾದವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಳೆಯಿಲ್ಲದೆ ನದಿ ಪಾತ್ರ ಸಂಪೂರ್ಣ ಒಣಗಿದ್ದು, ಅಂತರ್ಜಲ ಕುಸಿದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಇಲ್ಲಿನ ಜನರು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಸರ್ಕಾರ ಈ ಭಾಗದ ಜನರ ಮನವಿಯನ್ನು ತಿರಸ್ಕರಿಸಿ ಕೇವಲ ಒಬ್ಬ ವ್ಯಕ್ತಿಯ ಅನುಕೂಲಕ್ಕಾಗಿ ಟೆಂಡರ್ ಮೂಲಕ ಮರಳು ತುಂಬಲು ಅವಕಾಶ ನೀಡಿರುವುದು ನಮಗೆಲ್ಲಾ ನೋವು ತಂದಿದೆ. ನಾವು ಪ್ರಾಣಬಿಡಲು ಸಿದ್ದವಿದ್ದೇವೆ ಹೊರತು ಮರಳು ತುಂಬಲು ಬಿಡುವುದಿಲ್ಲ. ಸರ್ಕಾರದ ಕ್ರಮವನ್ನು ನಾವು ವಿರೋಧಿಸುತ್ತೇವೆಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link