ಚಳ್ಳಕೆರೆ
ಕಳೆದ ಸುಮಾರು 10 ವರ್ಷಗಳಿಂದ ನಗರದ ವಾಲ್ಮೀಕಿ ನಗರದಲ್ಲಿ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿರುವ ಕುವೆಂಪು ಶಾಲೆ ಪ್ರತಿವರ್ಷವೂ ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಶ್ರಮಿಸುತ್ತಿದೆ. ಅದೇ ರೀತಿ ಮಕ್ಕಳ ಪೋಷಕರಿಗೂ ಸಹ ಕ್ರೀಡಾಕೂಟವನ್ನು ಏರ್ಪಡಿಸಿ ಮಕ್ಕಳಿಗೆ ಮತ್ತಷ್ಟು ಸಂತಸವನ್ನುಂಟು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ, ಕುವೆಂಪು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಸಿ.ಶಿವಲಿಂಗಪ್ಪ ತಿಳಿಸಿದರು.
ಅವರು, ಶನಿವಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕುವೆಂಪು ಶಾಲೆ ಪ್ರಾಥಮಿಕದಿಂದ ಹಿಡಿದು ಪ್ರೌಢಶಾಲೆಯ ತನಕ ವಿದ್ಯಾರ್ಥಿಗಳನ್ನು ಹೊಂದಿದೆ. ಪೋಷಕರೇ ತಮ್ಮ ಮಕ್ಕಳ ಎದುರು ಶಾಲಾ ಆವರಣದಲ್ಲೇ ನಿಗದಿ ಪಡಿಸಿದ ಆಟಗಳಲ್ಲಿ ಭಾಗವಹಿಸುವ ಮೂಲಕ ವಿಶ್ವಾಸ, ಸ್ನೇಹ ಹಾಗೂ ಗೌರವವನ್ನು ಬೆಸೆಯುವುದರಲ್ಲಿ ಸಹಕಾರಿಯಾಗಿದ್ದಾರೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯ ಪೋಷಕರು ಪ್ರತಿಯೊಂದು ಆಟದಲ್ಲೂ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪೋಷಕರು ಆಟಗಳಲ್ಲಿ ಸೋಲು-ಗೆಲುವುಗಳನ್ನು ಸಾಧಿಸುವುದಕ್ಕಿಂತ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೇರಕವಾಗುವ ವಾತಾವರಣ ನಿರ್ಮಾಣದಲ್ಲಿ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಕುವೆಂಪು ಶಾಲೆ ನಿರಂತರ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಹಂತದಲ್ಲೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಗಮನ ನೀಡಲಾಗುತ್ತಿದೆ. ಪೋಷಕರು ಮತ್ತು ಮಕ್ಕಳ ಸಮ್ಮಿಲನದ ಗುರುತಾಗಿ ಈ ಪೋಷಕರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಈ ಕ್ರೀಡೆಗಳಲ್ಲಿ ಸೋಲು-ಗೆಲುವುಗಳನ್ನು ಬದಿಗೊತ್ತಿ ಮಕ್ಕಳ ಸಂತೋಷವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎನ್.ತಿಪ್ಪೇಸ್ವಾಮಿ, ಸಹ ಶಿಕ್ಷಕಿಯರಾದ ವಿಮಲ, ಸೂರಿಯಾಬಾನು, ಪುಪ್ಪಾವತಿ, ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








