ಚಿಕ್ಕನಾಯಕನಹಳ್ಳಿ
ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿ ಏಪ್ರಿಲ್ 29 ರಂದು ಕಸಬಾ ಹೋಬಳಿಗೆ ಸಂಬಂಧಪಟ್ಟಂತೆ ಮೇವಿನ ನಿಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ತಹಸೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ ಹೋಬಳಿಯಲ್ಲಿ ಸೋಮವಾರ ಮೇವು ನಿಧಿ ಆರಂಭಿಸುತ್ತಿದ್ದು ಹಂದನಕೆರೆ, ಕಂದಿಕೆರೆ, ಶೆಟ್ಟಿಕೆರೆ, ಹುಳಿಯಾರು ಹೋಬಳಿಗಳಲ್ಲಿ ಶೀಘ್ರವೇ ಮೇವು ನಿಧಿ ಪ್ರಾರಂಭಿಸಲಾಗುವುದು ಎಂದರು.
2012ರ ಜಾನುವಾರು ಗಣತಿಯ ಪ್ರಕಾರ ತಾಲ್ಲೂಕಿನಲ್ಲಿ 72,006 ರಾಸುಗಳಿದ್ದು, ಕಸಬಾ ಹೋಬಳಿಯಲ್ಲಿ 4,392 ರಾಸುಗಳಿವೆ. ಹಂದನಕೆರೆ ಹೋಬಳಿಯಲ್ಲಿ 13,582, ಶೆಟ್ಟಿಕೆರೆ ಹೋಬಳಿಯಲ್ಲಿ 10,203, ಕಂದಿಕೆರೆ ಹೋಬಳಿಯಲ್ಲಿ 8,116, ಹುಳಿಯಾರು ಹೋಬಳಿಯಲ್ಲಿ 14,141 ರಾಸುಗಳಿವೆ. ಮೇವಿನ ಕೊರತೆ ಇರುವ ದನ ಮತ್ತು ಎಮ್ಮೆಗಳು ಹೊಂದಿರುವ ಪಶುಪಾಲಕರು ತಮ್ಮ ವ್ಯಾಪ್ತಿಯಲ್ಲಿನ ಪಶುವೈದ್ಯಕೀಯ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ದಾಖಲಿಸುವಂತೆ ತಿಳಿಸಿದರು.
ಪಶು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಪುಟ್ಟರಾಜು ಮಾತನಾಡಿ, ಫಲಾನುಭವಿ ರೈತರು ತಮ್ಮ ವ್ಯಾಪ್ತಿಯ ಪಶು ಚಿಕಿತ್ಸಾಲಯದಲ್ಲಿ ನೋಂದಣಿ ಮಾಡಿಕೊಳ್ಳುವುದು. ನಂತರ ಪಶುಪಾಲನ ಇಲಾಖೆಯವರು ತಿಳಿಸಿದ ದಿನಾಂಕದಂದು ಮೇವು ನಿಧಿ ಕೇಂದ್ರಕ್ಕೆ ಹೋಗಿ ಮೇವು ಖರೀದಿಸುವುದು. ಪ್ರತಿ ರಾಸಿಗೆ ದಿನಕ್ಕೆ 5ಕೆ.ಜಿ.ಯಂತೆ 15ದಿನಕ್ಕೆ ಆಗುವಷ್ಟು ಮೇವನ್ನು ವಿತರಿಸಲಾಗುವುದು. ಪ್ರತಿ ಕೆ.ಜಿ.ಗೆ 2ರೂ ನಂತೆ ಫಲಾನುಭವಿ ರೈತರು ಸಂದಾಯ ಮಾಡುವುದು ಎಂದ ಅವರು, ಮೇವು ನಿಧಿ ಕೇಂದ್ರದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮೇವನ್ನು ವಿತರಿಸಲಾಗುವುದು. 15ದಿನಗಳು ಕಳೆದ ನಂತರ ಎರಡನೇ ಬಾರಿಗೆ ಮೇವನ್ನು ವಿತರಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಶು ವೈದ್ಯರಾದ ಡಾ.ರಘುಪತಿ, ಡಾ.ಅಜಿತ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
