ಬೆಂಗಳೂರು
ಕೊಲೆ ಬೆದರಿಕೆಗೆ ಪತ್ರಿಕಾರವಾಗಿ ಕುಖ್ಯಾತ ರೌಡಿ ದಿಲೀಪ್‌ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದ ಮೂವರನ್ನು ಯಲಹಂಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕದ ಮನವರ್ತಿ ತೋಟದ ಚಾಂದ್‌ಪಾಷ (೪೦), ಕಾಮಾಕ್ಷಮ್ಮ ಲೇಔಟ್‌ನ ಧನಂಜಯ ಅಲಿಯಾಸ್ ಮೋಟ್ ಬೀಡಿ (೩೦), ಬಾಗೇಪಲ್ಲಿಯ ರಾಯಚರುವಿನ ನವೀನ್ ಯಾದವ್ (೨೦) ಬಂಧಿತ ಆರೋಪಿಗಳಾಗಿದ್ದಾರೆ.ಯಲಹಂಕದ ಮಾರುತಿ ನಗರದ ರೌಡಿ ದಿಲೀಪ್‌ನನ್ನು ಕಳೆದ ಸೆ. ೨೩ ರಂದು ತಡರಾತ್ರಿ ಕೊಂಡಪ್ಪ ಲೇಔಟ್ ಮುಖ್ಯರಸ್ತೆಯ ಸಾಯಿ ಕಾಂಡಿಮೆಂಟ್ ಬೇಕರಿ ಬಲಿ ದಿಲೀಪ್‌ನನ್ನು ಬಂಧಿತ ಆರೋಪಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣರೆಡ್ಡಿ ನೇತೃತ್ವದ ತಂಡ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಕೊಲೆ ಕೃತ್ಯವೊಂದರಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ರೌಡಿ ದಿಲೀಪ್ (೩೨),ಆರೋಪಿ ಚಾಂದ್‌ಪಾಷನಿಂದ ಬಾಡಿಗೆಗೆ ಆಟೋ ಪಡೆದುಕೊಂಡಿದ್ದ, ಹಲವು ದಿನಗಳು ಕಳೆದರೂ ಬಾಡಿಗೆಗೆ ಪಡೆದ ಹಣ ನೀಡದೆ ಸತಾಯಿಸಿದ್ದ. ಹಣ ಕೇಳಲು ಹೋದರೆ ತಕರಾರು ಮಾಡುತ್ತಿದ್ದು, ನೀನು ಯಾವಾಗಲೂ ಬಾಡಿಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಚಾಂದ್‌ಪಾಷನಿಗೆ ಬೆದರಿಕೆ ಹಾಕಿದ್ದ.
ಇದರಿಂದ ಆತಂಕಗೊಂಡ ಚಾಂದ್‌ಪಾಷ, ದಿಲೀಪನ ಕೊಲೆಗೆ ಸಂಚು ರೂಪಿಸಿ ಡಿಜೆಹಳ್ಳಿ, ಯಶವಂತಪುರ, ಇಂದಿರಾನಗರ, ಇನ್ನಿತರ ಠಾಣೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮೋಟ್ ಬೀದಿ ನವೀನ್ ಯಾದವ್, ಅಶೋಕ್, ಅಲ್ಲಾಭಕ್ಷ್ ಜತೆ ಸೇರಿ ಕೊಲೆ ಮಾಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








