ಬೆಂಗಳೂರು

ನಗರದ ಕೆಆರ್‌ಪುರಂ,ಹಳೆ ವಿಮಾನ ನಿಲ್ದಾಣ ಹಾಗೂ ಹೆಬ್ಬಾಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಮೂವರು ಮೃತಪಟ್ಟು ಓರ್ವ ಗಾಯಗೊಂಡಿದ್ದಾನೆ.
ಕೆಆರ್‌ಪುರಂನ ಬಾಗ್ಮನೆ ಟೆಕ್ ಪಾರ್ಕ್ ಬಳಿ ರಾತ್ರಿ ವೇಗವಾಗಿ ಹೋಗುತ್ತಿದ್ದ ಸ್ಕೂಟರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಿಎಂಆರ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರ್ ಓದುತ್ತಿದ್ದ ಕೇರಳ ಮೂಲದ ಸಂಜಯ್ ರಾಜೀವ್ (18) ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಕಾಲು ಮುರಿದುಕೊಂಡು ಗಾಯಗೊಂಡಿರುವ ಅವರ ಸ್ನೇಹಿತ ಬಸವ (19) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೃತ ಸಂಜಯ್ ಹಾಗೂ ಬಸವ ಅವರಿಬ್ಬರೂ ನಗರಕ್ಕೆ ಬಂದು ರಾತ್ರಿ 9.30ರ ವೇಳೆ ಬೌನ್ಸ್ ಸ್ಕೂಟರ್ ಅನ್ನು ಬಾಡಿಗೆ ಪಡೆದು ಕಾಲೇಜಿನ ಹಾಸ್ಟೇಲ್ ಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಕೆಆರ್‌ಪುರಂನ ಸರ್ವೀಸ್ ರಸ್ತೆಯ ಬಾಗ್ಮನೆ ಟೆಕ್ ಪಾರ್ಕ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡ ಸಂಜಯ್ ರಾಜೀವ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಕೆಆರ್‌ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಕೆ.ವಿ.ಜಗದೀಶ್ ತಿಳಿಸಿದ್ದಾರೆ.
ಸ್ವಿಗ್ಗಿ ನೌಕರ ಸಾವು
ಹಳೇ ವಿಮಾನ ನಿಲ್ದಾಣದ ಹೊರ ವರ್ತುಲ ರಸ್ತೆಯಲ್ಲಿ ರಾತ್ರಿ 8ರ ವೇಳೆ ಮುಂದೆ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದ್ದು ಸ್ವಿಗ್ಗಿ ನೌಕರರೊಬ್ಬರು ಮೃತಪಟ್ಟಿದ್ದಾರೆ.
ಆಂಧ್ರ ಪ್ರದೇಶ ಮೂಲದ ಓಂ ಪ್ರಕಾಶ್ (21)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಓಂಪ್ರಕಾಶ್, ಅವರು ರಾತ್ರಿ 8ರ ವೇಳೆ ಹೊರ ವರ್ತುಲ ರಸ್ತೆಯ ಕಾಡುಬಿಸನಹಳ್ಳಿಯ ಜೆ.ಪಿ. ಮಾರ್ಗನ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಓಂಪ್ರಕಾಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ದೇವರಬೀಸನಹಳ್ಳಿಯಿಂದ ಮಾರತ್ ಹಳ್ಳಿ ಕಡೆಗೆ ಓಂಪ್ರಕಾಶ್ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಹಳೇ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಜಗದೀಶ್ ತಿಳಿಸಿದ್ದಾರೆ.
ವೃದ್ಧ ಸಾವು
ಹೆಬ್ಬಾಳದ ವರ್ತುಲ ರಸ್ತೆಯ ಯೋಗೀಶ್ವರ ನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ವೈದ್ಯನಾಥನ್ ಕೃಷ್ಣನ್ (76) ಅವರು ಅಪರಿಚಿತ ವಾಹನ ಹರಿದು ಮೃತಪಟ್ಟಿದ್ದಾರೆ.ಕಾಫಿ ಬೋರ್ಡ್ ಕಾಲೋನಿಯ ವೈದ್ಯನಾಥನ್ ಕೃಷ್ಣನ್ ಅವರು ರಾತ್ರಿ 7.20ರ ವೇಳೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಹರಿದು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಹೆಬ್ಬಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಅಪಘಾತವೆಸಗಿ ಪರಾರಿಯಾಗಿರುವ ವಾಹನ ಹಾಗೂ ಚಾಲಕನಿಗಾಗಿ ಸ್ಥಳೀಯ ಸಿಸಿ ಟಿವಿ ಕ್ಯಾಮಾರಗಳನ್ನು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








