ಚಿತ್ರದುರ್ಗ:
ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಫಾರಂ-57 ರನ್ವಯ ಚುನಾವಣೆ ನಂತರ ಮೂರು ತಿಂಗಳ ಅವಧಿ ಕಾಲಾವಕಾಶ ನೀಡಬೇಕೆಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಬಗರ್‍ಹುಕುಂ ಸಾಗುವಳಿದಾರರಿಗೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಸಕಾಲಕ್ಕೆ ಅರ್ಜಿ ಫಾರಂಗಳು ಲಭ್ಯವಾಗದೆ ಇರುವುದರಿಂದ ರೈತರು ಮತ್ತು ಕೂಲಿ ಕಾರ್ಮಿಕರು ನಿರ್ಧಿಷ್ಟ ಸಮಯಕ್ಕೆ ಫಾರಂ ನಂ.57 ರಲ್ಲಿ ಅರ್ಜಿ ಸಲ್ಲಿಸದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಆದಾಗ್ಯೂ ಚಿತ್ರದುರ್ಗ ಜಿಲ್ಲಾಡಳಿತ ಜನವರಿ-2019 ರ ಅಂತ್ಯಕ್ಕೆ ಕೆಲವು ಕಡೆ ಅರ್ಜಿ ಫಾರಂಗಳ ಮೂಲಕ ಮತ್ತೆ ಕೆಲವು ಕಡೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸಾಗುವಳಿದಾರರಿಗೆ ಸೂಚನೆ ನೀಡಲಾಗಿತ್ತು. ಅದರನ್ವಯ ಸಾಗುವಳಿದಾರರು ಹಗಲು ರಾತ್ರಿ ಎನ್ನದೆ ತಹಶೀಲ್ದಾರ್ ಕಚೇರಿ ಮತ್ತು ಹೋಬಳಿ ಮಟ್ಟದಲ್ಲಿ ನಾಡ ಕಚೇರಿಗಳ ಬಳಿ ನಿದ್ದೆಗೆಟ್ಟು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಅದರೂ ಸಹ ಸಕಾಲಕ್ಕೆ ಆನ್‍ಲೈನ್ ಆಗಲಿ ಅಥವಾ ಅರ್ಜಿಗಳಾಗಲಿ ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಲು ಸಾಧ್ಯವಾಗದೆ ಸಾಗುವಳಿದಾರರು ಕಂಗಾಲಾಗಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಯಿತು.ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಭರಮಸಾಗರ, ರಾಮಗಿರಿ, ಚಿಕ್ಕಜಾಜೂರು ನಾಡ ಕಚೇರಿಗಳ ಬಳಿ ಮಹಿಳೆಯರು ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಕ್ಯೂ ನಿಂತರೂ ಸಹ ಬಗರ್‍ಹುಕುಂ ಸಾಗುವಳಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದೆ ರೈತರು ಕೂಲಿ ಕಾರ್ಮಿಕರು ಸಂಕಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ರಾಜ್ಯ ಸರ್ಕಾರ ಬಗರ್‍ಹುಕುಂ ಸಾಗುವಳಿದಾರರಿಗೆ ಫಾರಂ ನಂ.57 ರಲ್ಲಿ ಅರ್ಜಿ ಸಲ್ಲಿಸಲು ಚುನಾವಣೆ ನಂತರ ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ಆರ್.ನಿಂಗಾನಾಯ್ಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಜಿಲ್ಲಾಡಳಿತ ಸಮಯಕ್ಕೆ ಸರಿಯಾಗಿ ಸಂಬಂಧಿಸಿದವರಿಗೆ ಅರ್ಜಿ ಫಾರಂಗಳನ್ನು ನೀಡಿದ್ದರೆ ಇಂದು ರೈತರು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಬಗರ್‍ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇರುವುದಕ್ಕೆ ಅಧಿಕಾರಿಗಳ ನಿರ್ಲಕ್ಷೆತನ ಮತ್ತು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮದಲ್ಲಿ ವಿಫಲವಾಗಿರುವುದೆ ಕಾರಣವಾಗಿದೆ. ಆದ್ದರಿಂದ ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಕಾಲಾವಧಿಯ ಅಗತ್ಯವಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಸುಲ್ತಾನಿಪುರ, ಹೊಸಹಟ್ಟಿ, ಸೇರಿದಂತೆ ಹಲವಾರು ಗ್ರಾಮಸ್ಥರು ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರಲಾಗಿರುವ ಭೂಮಿಯ ರಿ.ಸ.ನಂ.30 ರಲ್ಲಿ ಅರಳಕಟ್ಟೆ, ಸುಲ್ತಾನಿಪುರ, ಇಸಾಮುದ್ರ ಲಂಬಾಣಿಹಟ್ಟಿ, ಹೊಸಹಟ್ಟಿ, ಬೇಡರಶಿವನಕೆರೆ, ಚಿಕ್ಕಬೆನ್ನೂರು ಮುಂತಾದ ಗ್ರಾಮಗಳ ಬಡ ಕೂಲಿ ಕಾರ್ಮಿಕರು ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದು, ಸದರಿ ಭೂಮಿಯ ರಿ.ಸ.ನಂ.ನಲ್ಲಿ 00 ಎಂದು ರಿ.ಸ.ನಂ.ನಲ್ಲಿ ದಾಖಲಾತಿಗಳು ಲಭ್ಯವಾಗುತ್ತಿರುವುದು ರೈತರಿಗೆ ಕಂಗಾಲು ಮಾಡಿದೆ.
ಸಂಬಂಧಿಸಿದ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಕ್ಷಣದಿಂದ ಸುಮಾರು 175 ಎಕರೆ ಜಮೀನಿನ ರಿ.ಸ.ನಂ.30 ರಲ್ಲಿ 00 ಬರುವುದನ್ನು ತಪ್ಪಿಸಿ ಸರ್ವೆ ನಂ.ಬರುವಂತೆ ನೋಡಿಕೊಂಡು ಭೂಮಿ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.ಬಗರ್‍ಹುಕುಂ ಸಾಗುವಳಿದಾರರು ಆನ್‍ಲೈನ್‍ನಲ್ಲಿ ಸಲ್ಲಿಸಬೇಕೆ ಅಥವಾ ಅರ್ಜಿ ಫಾರಂಗಳಲ್ಲಿ ಸಲ್ಲಿಸಬೇಕೆ ಎಂಬ ಗೊಂದಲದಲ್ಲಿಯೇ ಕಾಲಹರಣವಾಗಿದ್ದು, ಇದನ್ನು ನಿವಾರಿಸಲು ಸರ್ಕಾರ ಚುನಾವಣೆಯ ನಂತರ ಭೂಮಿ ಸಾಗುವಳಿದಾರರಿಗೆ ಪುನಃ ಅರ್ಜಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹೊಳಲ್ಕೆರೆ ಬಂಜಾರ ಸಮಾಜದ ಮುಖಂಡ ಜಯಸಿಂಹ ಖಾಟ್ರೋತ್, ಯೋಗಮೂರ್ತಿನಾಯ್ಕ, ಜಗದೀಶ್, ಚಿತ್ರದುರ್ಗ ತಾಲೂಕು ಅಲ್ಪಸಂಖ್ಯಾತ ಮುಖಂಡರಾದ ಅಮಾನುಲ್ಲಾಖಾನ್, ಹುಸೇನ್‍ಪೀರ್‍ಸಾಬ್, ದೇವದಾಸ್, ಗಣೇಶ್‍ನಾಯ್ಕ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ದಿವಾಕರ್‍ಬಾಬು ಮುಂತಾದವರು ಉಪಸ್ಥಿತರಿದ್ದರು.