ಭಟ್ಕಳ:
ದುಬೈಯಿಂದ ಆಗಮಿಸಿದ್ದ 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಕುಟುಂಬದ ಮೂವರು ಸದಸ್ಯರಿಗೆ ಕೋವಿಡ್ 19 ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.ವ್ಯಕ್ತಿಯ ಪತ್ನಿ 55 ವರ್ಷ ಪ್ರಾಯದ ಮಹಿಳೆ, ಅವರ ಇಬ್ಬರು ಪುತ್ರಿಯರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಮಾರ್ಚ್ 19ರಂದು ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಟ್ಕಳ ಮೂಲದ ಯುವಕನೊಬ್ಬನಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.
ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿದ 40 ವರ್ಷ ಪ್ರಾಯದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿತ್ತು. ಬಳಿಕ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತ್ತು.
ಮಾರ್ಚ್ 19ರಂದು ದುಬೈಯಿಂದ ಮುಂಬೈಗೆ ಬಂದ 60 ವರ್ಷದ ವ್ಯಕ್ತಿಯಲ್ಲಿ ರೈಲಿನ ಮೂಲಕ ಆಗಮಿಸಿ ಮಾರ್ಚ್ 20ರಂದು ತಾಯ್ನಾಡಿಗೆ ಮರಳಿದ್ದರು. ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಅದೇ ರೀತಿ ದುಬೈಯಿಂದ ಗೋವಾಕ್ಕೆ ಬಂದ 22 ವರ್ಷ ಪ್ರಾಯದ ವ್ಯಕ್ತಿಯಲ್ಲಿಯೂ ಸೋಂಕು ದೃಢಪಟ್ಟಿತ್ತು. ಅವರು ಮಾರ್ಚ್ 20ರಂದು ಭಟ್ಕಳಕ್ಕೆ ಆಗಮಿಸಿದ್ದರು.